Advertisement

ಸ್ಥಿರತೆ ಮತ್ತು ಏಕತೆಯೇ ನನ್ನ ಆದ್ಯತೆ; ಯುಕೆಗೆ ಹೊಸ ಭರವಸೆ ಮೂಡಿಸಿದ ರಿಷಿ ಸುನಕ್‌

01:08 AM Oct 25, 2022 | Team Udayavani |

ಲಂಡನ್‌: “ಯುನೈಟೆಡ್‌ ಕಿಂಗ್‌ಡಮ್‌(ಯುಕೆ) ಒಂದು ಶ್ರೇಷ್ಠ ರಾಷ್ಟ್ರ. ಆದರೆ ನಾವು ದೊಡ್ಡಮಟ್ಟಿನ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎನ್ನುವುದೂ ಅಷ್ಟೇ ಸತ್ಯ. ನಮಗೆ ಈಗ ಬೇಕಾಗಿರುವುದು ಸ್ಥಿರತೆ ಮತ್ತು ಏಕತೆ. ನಮ್ಮ ಪಕ್ಷವನ್ನು ಮತ್ತು ದೇಶವನ್ನು ಒಗ್ಗೂಡಿಸುವುದೇ ನನ್ನ ಆದ್ಯತೆಯಾಗಿದೆ. ಆಗ ಮಾತ್ರ ನಾವು ಎಂತಹ ಸವಾಲನ್ನು ಬೇಕಿದ್ದರೂ ಸುಲಭವಾಗಿ ಎದುರಿಸಿ ಗೆಲ್ಲಲು ಸಾಧ್ಯ.’

Advertisement

ಇದು ಬ್ರಿಟನ್‌ನ 57ನೇ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್‌ ಅವರ ಮಾತುಗಳು. ಕಳೆದ 200 ವರ್ಷಗಳಲ್ಲಿ ಬ್ರಿಟನ್‌ನ ಪ್ರಧಾನಿ ಪಟ್ಟಕ್ಕೇರುತ್ತಿರುವ ಅತಿ ಕಿರಿಯ (42 ವರ್ಷ) ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುನಕ್‌ ಅವರು ಸೋಮವಾರ ರಾತ್ರಿ ಟೋರಿ ನಾಯಕನಾಗಿ ಮೊದಲ ಭಾಷಣ ಮಾಡಿದರು.

“ನನ್ನ ಸಂಸದೀಯ ಸಹೋದ್ಯೋಗಿಗಳ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಅತ್ಯಂತ ಪ್ರೀತಿಯಿಂದ ಕಾಣುವಂಥ ನನ್ನ ಪಕ್ಷ ಮತ್ತು ನನ್ನ ದೇಶದ ಋಣ ತೀರಿಸಲು ಅವಕಾಶ ಸಿಕ್ಕಿರುವುದು ನನಗೆ ಜೀವನದಲ್ಲಿ ಸಿಕ್ಕಿರುವ ಅತಿದೊಡ್ಡ ಉಡುಗೊರೆ. ಹಗಲಿರುಳೆನ್ನದೇ ದೇಶವಾಸಿಗಳ ಸೇವೆ ಮಾಡುವುದಾಗಿ ನಾನಿಂದು ಶಪಥ ಮಾಡುತ್ತೇನೆ’ ಎಂದೂ ಸುನಕ್‌ ಭಾವನಾತ್ಮಕವಾಗಿ ನುಡಿದರು.

ಭಾರತೀಯ ಸಮುದಾಯದ ಹರ್ಷೋದ್ಗಾರ
ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಯುಕೆಯಲ್ಲಿರುವ ಭಾರತೀಯ ಸಮುದಾಯದ ಸಂಭ್ರಮ ಮುಗಿಲು ಮುಟ್ಟಿದೆ. ದೀಪಾವಳಿ ಹಬ್ಬದ ದಿನವೇ ಸಿಹಿ ಸುದ್ದಿ ಸಿಕ್ಕಿರುವುದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಭಾರತೀಯ ಮೂಲದವರೊಬ್ಬರು ಪ್ರಧಾನಿ ಪಟ್ಟಕ್ಕೇರುತ್ತಿರುವುದನ್ನು ಆನಿವಾಸಿ ಭಾರತೀಯರು, “ಐತಿಹಾಸಿಕ, ಸ್ಫೂರ್ತಿದಾಯಕ’ ಎಂದು ಬಣ್ಣಿಸಿದ್ದಾರೆ.

ಸದ್ದು ಮಾಡಿದ ಮಹೀಂದ್ರಾ ಟ್ವೀಟ್‌!
ಸುನಕ್‌ ಕುರಿತಾಗಿ ಭಾರತದ ಪ್ರಸಿದ್ಧ ಉದ್ಯಮಿ ಆನಂದ್‌ ಮಹೀಂದ್ರಾ ಅವರು ಮಾಡಿದ ಟ್ವೀಟ್‌ ಭಾರೀ ಸದ್ದು ಮಾಡಿದೆ. “1947ರಲ್ಲಿ ಭಾರತವು ಸ್ವಾತಂತ್ರ್ಯದ ಉತ್ತುಂಗದಲ್ಲಿದ್ದಾಗ ಬ್ರಿಟನ್‌ ನಾಯಕ ವಿನ್ಸನ್‌ ಚರ್ಚಿಲ್‌ ಅವರು ಭಾರತೀಯರನ್ನು ಸಾಮರ್ಥ್ಯವಿಲ್ಲದವರು ಮತ್ತು ಪ್ರೌಢಿಮೆ ಇಲ್ಲದವರು ಎಂದು ಕರೆದಿದ್ದರು. ಆದರೆ ಈಗ ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯಲ್ಲಿರುವಾಗ ಭಾರತ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್‌ನ ಪ್ರಧಾನಿಯಾಗಿದ್ದಾರೆ. ಬದುಕು ಸುಂದರವಾಗಿದೆ’ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ ಅನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

Advertisement

ಪ್ರಥಮಗಳ ಸರದಾರ
ಸುನಕ್‌ ಅವರು ಬ್ರಿಟನ್‌ನ ಪ್ರಧಾನಿ ಪಟ್ಟಕ್ಕೇರುತ್ತಿರುವ ಮೊದಲ ಭಾರತೀಯ.
ಯು.ಕೆ.ಯ ಮೊದಲ ಹಿಂದೂ ಪ್ರಧಾನಿ, ಮೊದಲ ಬಿಳಿಯೇತರ ಪಿಎಂ.
ಭಗವದ್ಗೀತೆಯ ಮೇಲೆ ಪ್ರಮಾಣ ಸ್ವೀಕರಿಸಿದ್ದ ಮೊದಲ ಸಂಪುಟ ಸಚಿವ
ಕಳೆದ 200 ವರ್ಷಗಳಲ್ಲೇ ಪ್ರಧಾನಿ ಪಟ್ಟಕ್ಕೇರುತ್ತಿರುವ ಅತೀ ಕಿರಿಯ ವ್ಯಕ್ತಿ
ಪ್ರಧಾನಿ ಆಗುತ್ತಿರುವ ಅತಿ ಶ್ರೀಮಂತ ಸಂಸದ

 

 

Advertisement

Udayavani is now on Telegram. Click here to join our channel and stay updated with the latest news.

Next