Advertisement
ಬ್ರಿಟನ್‌ನಲ್ಲಿ ತಿಂಗಳುಗಳ ಕಾಲ ನಡೆದ ತುರುಸಿನ ಪ್ರಚಾರ ಮತ್ತು ಚುನಾವಣ ಕಾರ್ಯಕಲಾಪಗಳ ಭರಾಟೆ ಕೊನೆಗೂ ಅಂತ್ಯಗೊಂಡು ಕನ್ಸರ್ವೇಟಿವ್ ಪಾರ್ಟಿಯ ನಾಯಕಿಯಾಗಿ ಆಯ್ಕೆಯಾದ ಲಿಜ್ ಟ್ರಸ್ ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗಿ ನೇಮಕವಾಗಿದ್ದಾರೆ. ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪದತ್ಯಾಗಕ್ಕೆ ಮುನ್ನುಡಿ ಬರೆದಿದ್ದ ಭಾರತದ ಅಳಿಯ ರಿಷಿ ಸುನಕ್ ಅವರು ಆ ಪಟ್ಟ ಅಲಂಕರಿಸುವ ಎಲ್ಲ ಸಾಧ್ಯತೆಗಳಿದ್ದವು. ಈ ಚುನಾವಣೆಯ ಪ್ರಾರಂಭಿಕ ಸುತ್ತುಗಳಲ್ಲಿ ಸುನಕ್ ಮುನ್ನಡೆಯನ್ನು ಕಾಯ್ದುಕೊಂಡರೂ ಕೊನೆಯ ಹಂತಗಳಲ್ಲಿ ಅನುಭವಿಸಿದ ಹಿನ್ನಡೆ ಲಿಜ್ ಟ್ರಸ್‌ಗೆ ಪದವಿಯ ಬಾಗಿಲು ತೆರೆಯಿತು. ಹಾಗೆಂದು ಬ್ರಿಟನ್‌ನ ಪ್ರಧಾನಿ ಹುದ್ದೆಗೇರುವ ರಿಷಿ ಸುನಕ್ ಅವರ ಕನಸು ಇಲ್ಲಿಗೇ ಕಮರಿಹೋಯಿತು ಎಂದೇನೂ ಇಲ್ಲ. ಇನ್ನೂ 42ರ ಹರಯದವರಾದ ರಿಷಿ ಸುನಕ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಮುಕ್ತವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಅನುಸರಿಸಿದ ಕಾರ್ಯತಂತ್ರದಲ್ಲಿ ಒಂದಿಷ್ಟು ಬದಲಾವಣೆ ಮತ್ತು ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಂಡದ್ದೇ ಆದಲ್ಲಿಅವರ ಕನಸು ನನಸಾಗುವ ಸಾಧ್ಯತೆ ಇದ್ದೇ ಇದೆ. ಸದ್ಯಕ್ಕಂತೂ ರಿಷಿ ಅವರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಒಳಸುಳಿಗೆ ರಿಷಿ ಬಲಿಪಶು?
ಹೊಸ ಪ್ರಧಾನಿ ಆಯ್ಕೆಯ ಸನ್ನಿವೇಶವನ್ನು ನಿರ್ಮಿಸಿ, ಭಾವೀ ಪ್ರಧಾನಿ ಎಂದೇ ಬಿಂಬಿತವಾಗಿದ್ದ ರಿಷಿ ಸುನಕ್ ಅಂತಿಮವಾಗಿ ಯಾಕೆ ಪರಾಜಯ ಹೊಂದಿದರು ಎಂಬ ಬಗ್ಗೆ ಕೇವಲ ಬ್ರಿಟನ್‌ನಲ್ಲಷ್ಟೆ ಅಲ್ಲ, ಜಾಗತಿಕವಾಗಿಯೂ ಚರ್ಚೆ ನಡೆಯುತ್ತಿದೆ. ಚುನಾವಣ ಪ್ರಚಾರ, ಕಾರ್ಯಕಲಾಪಗಳನ್ನು ಮೇಲ್ನೋಟಕ್ಕೆ ವಿಮರ್ಶೆಗೊಳಪಡಿಸಿದಾಗ ರಿಷಿ ಸುನಕ್ ವಿರುದ್ಧ ಕೇಳಿ ಬಂದ ಕೆಲವು ಆರೋಪಗಳೇ ಅವರಿಗೆ ಮುಳುವಾದವು. ಜತೆಗೆ ನಿಕಟಪೂರ್ವ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಪ್ತ ಬಳಗದಲ್ಲಿದ್ದು ಹಣಕಾಸಿನಂತಹ ಮಹತ್ವದ ಖಾತೆಯನ್ನು ನಿರ್ವಹಿಸಿದ ರಿಷಿ ಸುನಕ್ ಅವರು ಜಾನ್ಸನ್ ಅವರ ವಿರುದ್ಧವೇ ತಿರುಗಿಬಿದ್ದು ಅವರ ರಾಜೀನಾಮೆಗೆ ಕಾರಣಕರ್ತರಾಗಿ ಪ್ರಧಾನಿ ಸ್ಥಾನಾಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದುದು ತಿರುಗುಬಾಣವಾಗಿ ಪರಿಣಮಿಸಿತು ಎಂಬ ವಿಶ್ಲೇಷಣೆಯೂ ಇದೆ. ದೇಶದ ರಾಜಕೀಯ ಇತಿಹಾಸವನ್ನು ಕೆದಕಿದಾಗ ಮಾರ್ಗರೇಟ್ ಥ್ಯಾಚರ್ ಅವರ ನಾಯಕತ್ವದ ವಿರುದ್ಧ ಬಂಡೆದ್ದಿದ್ದ ನಾಯಕರಿಗೂ ಕನ್ಸರ್ವೇಟಿವ್ ಪಾರ್ಟಿ ಇದೇ ತೆರನಾದ ಪಾಠವನ್ನು ಕಲಿಸಿತ್ತು ಎಂಬುದಿಲ್ಲಿ ಉಲ್ಲೇಖನೀಯ.
Related Articles
Advertisement
ತೆರಿಗೆ ಕಡಿತಕ್ಕೆ ವಿರೋಧಇನ್ನು ತೆರಿಗೆ ಕಡಿತಗೊಳಿಸುವುದರ ಕುರಿತಾಗಿನ ರಿಷಿ ಸುನಕ್ ಅವರ ವಿರೋಧ ಲಿಜ್ ಟ್ರಸ್ ಪಾಲಿಗೆ ವರವಾಗಿ ಪರಿಣಮಿಸಿತು. ಆದರೆ ಟ್ರಸ್ ತೆರಿಗೆ ಕಡಿತವನ್ನು ಸಮರ್ಥಿಸುತ್ತಲೇ ಬಂದರು. ತತ್‌ಕ್ಷಣದ ತೆರಿಗೆ ಕಡಿತಕ್ಕೆ ಆರ್ಥಿಕ ತಜ್ಞರಿಂದ ಅಷ್ಟೊಂದು ಬೆಂಬಲ ವ್ಯಕ್ತವಾಗದಿದ್ದರೂ ಟ್ರಸ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿ ಕನ್ಸರ್ವೇಟಿವ್ ವೋಟ್ ಬ್ಯಾಂಕ್ ಅವರ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಹಂತದಿಂದ ಲಿಜ್ ಟ್ರಸ್ ಅವರು ರಿಷಿ ಸುನಕ್ ಅವರಿಂದ ಮುನ್ನಡೆಯನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಹಿನ್ನಡೆಯನ್ನು ಗಮನಿಸಿದ ರಿಷಿ ಸುನಕ್ ಮತ್ತವರ ತಂಡ ತಾವು ಅಧಿಕಾರಕ್ಕೆ ಬಂದಲ್ಲಿ 2029ರ ವೇಳೆಗೆ ಆದಾಯ ತೆರಿಗೆಯ ಮೂಲ ದರದಲ್ಲಿ ಶೇ. 20ರಷ್ಟು ಕಡಿತ ಮಾಡುವುದಾಗಿ ಘೋಷಿಸಿತು. ಹಣದುಬ್ಬರ ದರ ನಿಯಂತ್ರಣ ತನ್ನ ಮೊದಲ ಆದ್ಯತೆ. ಇದಾದ ಬಳಿಕ 2024ರಿಂದ ಆದಾಯ ತೆರಿಗೆ ದರದಲ್ಲಿ ಕೊಂಚ ಮಟ್ಟಿನ ಸಡಿಲಿಕೆ ಮಾಡಲಾಗುವುದು. ಜತೆಗೆ ಇಂಧನ ಬಿಲ್‌ಗಳ ಮೇಲಣ ವ್ಯಾಟ್‌ನ್ನು ರದ್ದುಗೊಳಿಸುವ ಭರವಸೆ ನೀಡಿದರು ರಿಷಿ ಸುನಕ್. ಆದರೆ ಇವ್ಯಾವುವೂ ನಿರೀಕ್ಷಿತ ಫಲ ನೀಡಲಿಲ್ಲ. ಗ್ರೀನ್ ಕಾರ್ಡ್ ವಿವಾದ
ಆಗ ಕೇಳಿ ಬಂದ ಹೊಸ ಆರೋಪ ಬ್ರಿಟನ್‌ಗೆ ಮರಳಿದ ಬಳಿಕವೂ ರಿಷಿ ಸುನಕ್ ಅವರು ಅಮೆರಿಕದ ಗ್ರೀನ್ ಕಾರ್ಡ್ ಅನ್ನು ತಮ್ಮಲ್ಲೇ ಇರಿಸಿಕೊಂಡಿದ್ದಾರೆ ಎಂಬುದು. ಇದರಿಂದ ಕನ್ಸರ್ವೇಟಿವ್ ಪಾರ್ಟಿಯ ಉನ್ನತ ನಾಯಕರು ರಿಷಿ ಅವರಿಗೆ ಬ್ರಿಟನ್ ಮೇಲಿರುವ ಬದ್ಧತೆಯನ್ನು ಪ್ರಶ್ನಿಸತೊಡಗಿದರು. ಇದು ಪ್ರಧಾನಿಯಾಗುವ ರಿಷಿ ಮಹಾತ್ವಾಕಾಂಕ್ಷೆಗೆ ತಣ್ಣೀರೆರಚಿತು. ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಗ್ರೀನ್ ಕಾರ್ಡ್ ಉಳಿಸಿಕೊಳ್ಳುವ ಮೂಲಕ ಅಮೆರಿಕದಲ್ಲಿನ ತಮ್ಮ ಆರ್ಥಿಕ ವ್ಯವಹಾರಗಳನ್ನು ಜೀವಂತವಾಗಿರಿಸಿಕೊಳ್ಳುವ ಹವಣಿಕೆ ರಿಷಿ ಅವರದ್ದು ಎಂದು ಕನ್ಸರ್ವೇಟಿವ್ ಪಾರ್ಟಿಯ ನಾಯಕರೇ ದೂರಿದರು. ಇದಾದ ಬೆನ್ನಲ್ಲೇ ವಿತ್ತ ಸಚಿವನಾದ ಬಳಿಕ ಗ್ರೀನ್ ಕಾರ್ಡ್ ಅನ್ನು ಮರಳಿಸಿರುವುದಾಗಿ ಸ್ವತಃ ರಿಷಿ ಸುನಕ್ ಸ್ಪಷ್ಟನೆ ನೀಡಿದರೂ ಪ್ರಯೋಜನವಾಗಲಿಲ್ಲ. ಅದ್ದೂರಿ ಜೀವನಶೈಲಿ
ರಿಷಿ ಸುನಕ್ ಅವರ ಜೀವನಶೈಲಿಯ ಅದ್ದೂರಿತನವೂ ಸೋಲಿನ ಕಾರಣದಲ್ಲಿ ಒಂದು ಅಂಶವಾಯಿತು ಎಂಬ ಅಂಶಗಳು ಚರ್ಚೆಯಲ್ಲಿವೆ. ಚುನಾವಣ ಪ್ರಚಾರದ ಸಂದರ್ಭದಲ್ಲಿ ಅವರು ವಿವಿಧ ನಗರಗಳಿಗೆ ತೆರಳಿ ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದ ಸಂದರ್ಭದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದ್ದುದು ರಿಷಿಯವರ ದಿರಿಸುಗಳು. 2020ರಲ್ಲಿ ಚಾನ್ಸಲರ್ ಆಗಿ ಆಯ್ಕೆಯಾದಾಗ ಬಜೆಟ್ ಪೂರ್ವ ಫೋಟೋ ಸೆಶನ್‌ನ ಸಂದರ್ಭದಲ್ಲಿ ಇವರ ಕೈಯಲ್ಲಿದ್ದ 220 ಡಾಲರ್ ಬೆಲೆಯ “ಮಗ್’ ಇವರ ಅದ್ದೂರಿತನದ ಬಗ್ಗೆ ಚರ್ಚೆಗೆ ಕಾರಣವಾಗಿತ್ತು. ವೈಯಕ್ತಿಕವಾಗಿ ಸಾಕಷ್ಟು ಸಿರಿವಂತರಾಗಿದ್ದರೂ ಸಾರ್ವಜನಿಕ ಜೀವನದಲ್ಲೂ ಆದ್ದೂರಿತನಕ್ಕೆ ಪ್ರಾಮುಖ್ಯ ನೀಡಿದ್ದೂ ಜನರಲ್ಲಿ ಇವರ ಬಗೆಗೆ ಒಂದಿಷ್ಟು ನಕಾರಾತ್ಮಕ ಅಭಿಪ್ರಾಯ ಮೂಡಲು ಕಾರಣವಾಯಿತು. ಸುನಕ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ನಿರ್ಧರಿಸಿದ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ರಿಷಿ ಅವರು ತಮ್ಮ ಶ್ರೀಮಂತ ಗೆಳೆಯರ ಬಗೆಗೆ ಮಾತನಾಡಿದ ವೀಡಿಯೋಗಳು ಹರಿದಾಡಿದ್ದವು. ಇವೆಲ್ಲವೂ ನಾನು ಶ್ರೀಮಂತ, ಮೇಲ್ವರ್ಗದ ಮತ್ತು ದುಡಿಯುವ ವರ್ಗದ ಗೆಳೆಯರನ್ನು ಹೊಂದಿದ್ದೇನೆ. ಹಾಗೆಂದು ಕಾರ್ಮಿಕರಲ್ಲ ಎಂದವರು ಬಿಬಿಸಿ ಸಾಕ್ಷ್ಯಚಿತ್ರವೊಂದಕ್ಕೆ ನೀಡಿದ ಹೇಳಿಕೆಯನ್ನೂ ವಿರೋಧಿ ಬಣ ಬಳಸಿಕೊಂಡಿತು. ಬ್ರಿಟನ್‌ನ ರಾಜಕೀಯ ಇತಿಹಾಸವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದುದು, ತಾಂತ್ರಿಕ ಮಾಹಿತಿ ಕೊರತೆ, ಬಡ ಮತ್ತು ಮಧ್ಯಮ ವರ್ಗದವರ ಬಗೆಗಿನ ನಿಲುವು ರಿಷಿ ಸುನಕ್ ಸೋಲಿಗೆ ರುಜು ಮಾಡಿದವು ಎನ್ನಬಹುದು. ಸದ್ಯಕ್ಕೆ ರಿಷಿ ಸುನಕ್ ಅವರನ್ನು ಪ್ರಧಾನಿ ಲಿಜ್ ಟ್ರಸ್ ತಮ್ಮ ಸಂಪುಟಕ್ಕೆ ಸೇರ್ಪಡೆಗೊಳಿಸದೇ ಇರ ಬಹುದು. ಹಾಗೆಂದು ರಿಷಿ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಟ್ರಸ್ ಅವರಿಗೆ ಸಾಧ್ಯವಾಗದು. ಕನ್ಸರ್ವೇಟಿವ್ ಪಾರ್ಟಿಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದು ಭಾರೀ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ರಿಷಿ ಅವರನ್ನು ಪಕ್ಕಕ್ಕಿರಿಸಿ ದೇಶದ ಆಡಳಿತವನ್ನು ಮುನ್ನಡೆಸುವುದು ಸ್ವತಃ ಲಿಜ್ ಟ್ರಸ್ ಅವರಿಗೂ ಕೂಡ ಕಷ್ಟಸಾಧ್ಯ. ಈ ಚುನಾವಣೆಯಲ್ಲಿ ರಿಷಿ ಸುನಕ್ ಕೇವಲ 20,000 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಎಲ್ಲ ಜನಾಂಗದ ಮತ್ತು ಧರ್ಮಗಳಿಗೆ ಸೇರಿದ ಮತದಾರರ ಮತಗಳನ್ನು ತಮ್ಮ ಬುಟ್ಟಿಗೆ ಸೆಳೆದುಕೊಳ್ಳುವಲ್ಲಿ ರಿಷಿ ಸಫಲರಾಗಿದ್ದಾರೆ. ಇವೆಲ್ಲವೂ ರಿಷಿ ಅವರ ಪಾಲಿಗೆ ಧನಾತ್ಮಕ ವಿಷಯಗಳೇ. ಈ ಕಾರಣದಿಂದಾಗಿಯೇ ರಿಷಿ ಸುನಕ್ ಸಂಸದನ ಸ್ಥಾನವನ್ನು ಉಳಿಸಿಕೊಂಡು ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವ ಮಾತುಗಳನ್ನಾಡಿದ್ದಾರೆ. ಬ್ರಿಟನ್‌ನಂಥ ದೇಶದಲ್ಲಿ ಯಾವುದು ಅಸಾಧ್ಯ ಎಂದು ಪರಿಗಣಿಸಲಾಗಿತ್ತೋ ಅದನ್ನು ರಿಷಿ ಸುನಕ್ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲ ಎಡರುತೊಡರುಗಳನ್ನು ಸಮರ್ಥವಾಗಿ ಎದುರಿಸಿ ಕನ್ಸರ್ವೇಟಿವ್ ಪಾರ್ಟಿ ಸಂಸದರ ಒಲವನ್ನು ಗಳಿಸುವಲ್ಲಿ ರಿಷಿ ಸುನಕ್ ಯಶ ಕಾಣಲಿದ್ದಾರೆ ಎಂಬ ಆಶಾವಾದ ಅವರ ಬೆಂಬಲಿಗರದ್ದಾಗಿದೆ. – ಹರೀಶ್ ಕೆ.