Advertisement

ಈಗ ರಿಷಿ ವರ್ಸಸ್‌ ಟ್ರಸ್‌: ಅಂತಿಮ ಹಂತದಲ್ಲಿ ಉಳಿದ ಇಬ್ಬರು ನಾಯಕರು

09:20 AM Jul 21, 2022 | Team Udayavani |

ಲಂಡನ್‌: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ಮತ್ತು ಭಾರತ ಮೂಲದ ರಿಷಿ ಸುನಕ್‌ ಅವರು 137 ಮತ ಪಡೆದು ಬ್ರಿಟನ್‌ ಪ್ರಧಾನಿ ಹುದ್ದೆಯ ಸ್ಪರ್ಧಾಕಣದಲ್ಲಿ ಮೊದಲನೆಯವರಾಗಿ ಉಳಿದಿದ್ದಾರೆ.

Advertisement

ಎರಡನೆಯವರಾಗಿ 113 ಮತ ಪಡೆದ ಮಾಜಿ ವಿದೇಶಾಂಗ ಸಚಿವೆ ಲಿಸ್‌ ಟ್ರಸ್‌ ಅವರು ಉಳಿದಿದ್ದು, ಇವರಿಬ್ಬರು ಪ್ರಧಾನಿ ಹುದ್ದೆಗಾಗಿ ಹೋರಾಟ ನಡೆಸಲಿದ್ದಾರೆ.

ಬುಧವಾರ ನಡೆದ 5ನೇ ಸುತ್ತಿನ ಮತದಾನದಲ್ಲಿಯೂ ರಿಷಿ ಸುನಕ್‌ ಅವರೇ ಮುನ್ನಡೆ ಕಾಯ್ಡುಕೊಂಡರು. ಎರಡನೇ ಸ್ಥಾನಕ್ಕಾಗಿ ಲಿಸ್‌ ಟ್ರಸ್‌ ಮತ್ತು ಪೆನ್ನಿ ಮಾರ್ಡಂಟ್‌ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಅಲ್ಲದೆ, ನಾಲ್ಕನೇ ಸುತ್ತು ಮುಗಿದಾಗ ಪೆನ್ನಿ ಮಾರ್ಡಂಟ್‌ 92 ಮತ, ಲಿಸ್‌ ಟ್ರಸ್‌ 86 ಮತ ಪಡೆದಿದ್ದರು. ವಿಚಿತ್ರವೆಂದರೆ, 5ನೇ ಸುತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದ ಲಿಸ್‌ ಟ್ರಸ್‌ ಅವರೇ ಪೆನ್ನಿಗಿಂತ ಹೆಚ್ಚಿನ ಮತ ಪಡೆದು ಎರಡನೇ ಸ್ಥಾನಕ್ಕೆರಿದರು.

ಮಂಗಳವಾರ ರಿಷಿ 118 ಮತ ಪಡೆದಿದ್ದರು. ಕಡೆ ಸುತ್ತಿನಲ್ಲಿ ಉಳಿಯಲು ಕೇವಲ 2 ಮತ ಮಾತ್ರ ಬೇಕಾಗಿತ್ತು. ಆದರೆ, ಬುಧವಾರ ಇವರಿಗೆ ಹೆಚ್ಚುವರಿಯಾಗಿ 19 ಮತ ಬಿದ್ದವು. ಇನ್ನು ಲಿಸ್‌ ಟ್ರಸ್‌ಗೆ ಹೆಚ್ಚುವರಿಯಾಗಿ 27 ಮತ ಬಿದ್ದಿದ್ದರಿಂದ ಎರಡನೇ ಸ್ಥಾನಿಯಾಗಿ ಉಳಿದರು. ಪೆನ್ನಿಗೆ ಹೆಚ್ಚುವರಿಯಾಗಿ 13 ಮತ ಬಿದ್ದವು. ಕಡೆಗೆ 105 ಮತ ಪಡೆದು ಕಣದಿಂದ ಹೊರಬಿದ್ದರು. ಅಲ್ಲದೆ, ಆರಂಭದಿಂದಲೂ ರಿಷಿಗೆ ಹೆಚ್ಚು ಸ್ಪರ್ಧೆ ನೀಡಿದ್ದವರು ಪೆನ್ನಿ ಅವರೇ. ಮೊದಲ ನಾಲ್ಕು ಸುತ್ತುಗಳಲ್ಲಿಯೂ ಪೆನ್ನಿ, ಟ್ರಸ್‌ಗಿಂತಲೂ ಮುನ್ನಡೆಯಲ್ಲಿದ್ದರು. ಆದರೆ, ಕಡೆಯ ಸುತ್ತಿನಲ್ಲಿ ಪೆನ್ನಿ ಪಕ್ಷದ ಹಿರಿಯ ಸದಸ್ಯರ ಬೆಂಬಲ ಗಳಿಸುವಲ್ಲಿ ವಿಫ‌ಲರಾದರು ಎಂಬ ಮಾತುಗಳಿವೆ.

ಕನ್ಸರ್ವೇಟೀವ್‌ ಸದಸ್ಯರಿಂದ ಮತ
ಸೆ.5ರಂದು ಬ್ರಿಟನ್‌ನ ಹೊಸ ಪ್ರಧಾನಿ ಮತ್ತು ಕನ್ಸರ್ವೇಟೀವ್‌ ಪಕ್ಷದ ಹೊಸ ಅಧ್ಯಕ್ಷನ ಘೋಷಣೆಯಾಗುತ್ತದೆ. ಅಂದರೆ, ಪಕ್ಷದ ಅಧ್ಯಕ್ಷರೇ ಅಲ್ಲಿನ ಪ್ರಧಾನಿ ಕೂಡ ಆಗುತ್ತಾರೆ. ಇದರ ಆಯ್ಕೆಗಾಗಿ ಇನ್ನು ರಿಷಿ ಸುನಕ್‌ ಮತ್ತು ಲಿಸ್‌ ಟ್ರಾಸ್‌ ಅವರು ದೇಶಾದ್ಯಂತ ಇರುವ ಕನ್ಸರ್ವೇಟೀವ್‌ ಪಕ್ಷದ ಸದಸ್ಯರ ಬೆಂಬಲ ಪಡೆಯಬೇಕಾಗುತ್ತದೆ. ಇವರ ಸಂಖ್ಯೆಯೇ ಸುಮಾರು 2 ಲಕ್ಷದಷ್ಟಿದೆ ಎಂಬ ಅಂದಾಜಿದೆ. ಈ ಸದಸ್ಯರು ಯಾರಿಗೆ ಹೆಚ್ಚು ಮತ ಹಾಕುತ್ತಾರೆಯೋ ಅವರೇ ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನಿ ಆಗುತ್ತಾರೆ.

Advertisement

ಟ್ರಸ್‌ ಬೆನ್ನಿಗೆ ಜಾನ್ಸನ್‌
ಮೂರನೇ ಸ್ಥಾನದಲ್ಲಿದ್ದ ಟ್ರಸ್‌ ಅವರು ದಿಢೀರನೇ ಎರಡನೇ ಸ್ಥಾನಕ್ಕೆ ಬರಲು ಬೋರಿಸ್‌ ಜಾನ್ಸನ್‌ ಕಾರಣ ಎಂದೇ ಹೇಳಲಾಗುತ್ತಿದೆ. ರಿಷಿ ಸುನಕ್‌ ವಿರುದ್ಧ ನಿಂತಿರುವ ಜಾನ್ಸನ್‌, ತಮ್ಮ ಉತ್ತರಾಧಿಕಾರಿಯಾಗಿ ಲಿಸ್‌ ಟ್ರಸ್‌ ಅವರನ್ನೇ ತರಲು ನೋಡುತ್ತಿದ್ದಾರೆ ಎಂದು ವಿಶ್ಲೇಷಣೆಗಳು ಹೇಳಿವೆ. ಇದಕ್ಕೆ ಪೂರಕವೆಂಬಂತೆ, ಬ್ರಿಟನ್‌ನ ಯೂಗವ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ರಿಷಿ ಸುನಕ್‌ ವಿರುದ್ಧ ಲಿಸ್‌ ಟ್ರಸ್‌ ಗೆಲ್ಲುತ್ತಾರೆ ಎಂಬುದು ಬಹಿರಂಗವಾಗಿದೆ.

ಈವರೆಗೆ ವ್ಯಕ್ತವಾದ ಸಂಸದರ ಬೆಂಬಲ
ರಿಷಿ ಸುನಕ್‌
1ನೇ ಸುತ್ತು – 88
2ನೇ ಸುತ್ತು – 101
3ನೇ ಸುತ್ತು – 115
4ನೇ ಸುತ್ತು – 118
5ನೇ ಸುತ್ತು – 137

ಲಿಸ್‌ ಟ್ರಸ್‌
1ನೇ ಸುತ್ತು – 50
2ನೇ ಸುತ್ತು – 64
3ನೇ ಸುತ್ತು – 71
4ನೇ ಸುತ್ತು – 86
5ನೇ ಸುತ್ತು – 113

ಭಾರತ ಮೂಲದ ಮೊದಲ ಪ್ರಧಾನಿ
ಪ್ರಧಾನಿ ಹುದ್ದೆ ರೇಸಿನಲ್ಲಿ ಅಧಿಕೃತವಾಗಿ ಉಳಿದಿರುವ ರಿಷಿ ಸುನಕ್‌ ಅವರೇನಾದರೂ ಬ್ರಿಟನ್‌ ಪ್ರಧಾನಿಯಾದರೆ, ಭಾರತ ಮೂಲದ ವ್ಯಕ್ತಿಯೊಬ್ಬರು ಈ ಹುದ್ದೆಗೇರಿದ ಮೊದಲ ವ್ಯಕ್ತಿ ಎಂದು ಅನ್ನಿಸಿಕೊಳ್ಳಲಿದ್ದಾರೆ. ಸದ್ಯ ಬ್ರಿಟನ್‌ನಲ್ಲಿ ಅತ್ಯುನ್ನತ ಹುದ್ದೆಗೇರಿದ ವ್ಯಕ್ತಿಯ ದಾಖಲೆಯೂ ಅವರ ಹೆಸರಿನಲ್ಲಿಯೇ ಇದೆ. ಅಂದರೆ, ಇತ್ತೀಚಿನವರೆಗೂ ಜಾನ್ಸನ್‌ ಸಂಪುಟದಲ್ಲಿ 2ನೇ ಸ್ಥಾನ ಎಂದೇ ಬಿಂಬಿಸಲಾಗಿದ್ದ ವಿತ್ತ ಸಚಿವ ಹೊಣೆಗಾರಿಕೆ ರಿಷಿಅವರ ಬಳಿಯೇ ಇತ್ತು.

ಒಂದು ತಿಂಗಳ ಪ್ರಕ್ರಿಯೆ
ಅಂತಿಮ ಕಣದಲ್ಲಿ ಉಳಿದಿರುವ ರಿಷಿ ಸುನಕ್‌ ಮತ್ತು ಲಿಸ್‌ ಟ್ರಸ್‌ ಅವರ ಹೆಸರುಗಳುಳ್ಳ ಬ್ಯಾಲೆಟ್‌ ಪೇಪರ್‌ಗಳನ್ನು ಕನ್ಸರ್ವೇಟೀವ್‌ ಪಕ್ಷದ 2 ಲಕ್ಷ ಸದಸ್ಯರಿಗೆ ಕಳುಹಿಸಲಾಗುತ್ತದೆ. ಅವರು ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅಂಚೆ ಮೂಲಕವೇ ವಾಪಸ್‌ ಕಳಿಸಬೇಕು. ಇದು ಜುಲೈ ಅಂತ್ಯದಲ್ಲಿ ಆರಂಭವಾಗಿ ಸೆ.5ಕ್ಕೆ ಹೊಸ ನಾಯಕನ ಆಯ್ಕೆ ಘೋಷಣೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next