ಲಂಡನ್: ಬ್ರಿಟನ್‌ನಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೋವಿಡ್ ಸಾಂಕ್ರಾಮಿಕ ಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯ ಸಾರ್ವತ್ರಿಕಗೊಂಡಿದ್ದು, . ಭಾರತೀಯ ಮೂಲದ ವಿತ್ತ ಸಚಿವ, ಇನ್ಫಿ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಮುಂದಿನ ಪ್ರಧಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ.
ಈ ನಡುವೆ ತನಗೆ ಲಭಿಸುತ್ತಿರುವ ವೇತನವೂ ಸಾಕಷ್ಟು ಕಡಿಮೆ ಇದ್ದು, ಜೀವನ ನಡೆಸಲು ಕಷ್ಟವಾಗುತ್ತಿದೆ ಎಂಬುದಾಗಿ ಬೋರಿಸ್ ಜಾನ್ಸನ್ ಖಾಸಗಿಯಾಗಿ ಹೇಳಿ ಕೊಂಡಿರುವುದು ಅವರ ಪದತ್ಯಾಗದ ಸಾಧ್ಯತೆಗಳಿಗೆ ಪುಷ್ಟಿ ನೀಡಿದೆ. ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ಸಂಸದರಲ್ಲೂ ರಿಷಿ ಸುನಾಕ್ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ.
ಒಂದು ವೇಳೆ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮುಂದೆ ಯಾರು ಎಂಬ ಬಗ್ಗೆ ಚರ್ಚೆ ಆರಂಭವಾಗಿವೆ. ಇವರಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರದ್ದು. ಸದ್ಯ ಹಣಕಾಸು ಖಾತೆ ನಿಭಾಯಿಸುತ್ತಿರುವ ರಿಷಿ, ಕೊರೊನಾ ಕಾಲದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಹೀಗಾಗಿ ಇವರ ಬಗ್ಗೆಯೇ ಹೆಚ್ಚು ಒಲವಿದೆ ಎನ್ನಲಾಗುತ್ತಿದೆ.
ಜಾನ್ಸನ್‌ಗೆ ಸಂಬಳ ಸಾಲುತ್ತಿಲ್ಲವಂತೆ!
ಬೋರಿಸ್ ಜಾನ್ಸನ್ ಅವರಿಗೆ ಈಗ ಪ್ರಧಾನಿಯಾಗಿ ಪಡೆಯುತ್ತಿರುವ ವೇತನ ಯಾವುದಕ್ಕೂ ಸಾಲುತ್ತಿಲ್ಲವಂತೆ. ಹೀಗಾಗಿ ಮುಂದಿನ ಮಾರ್ಚ್-ಏಪ್ರಿಲ್ ವೇಳೆಗೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಬೋರಿಸ್ ಜಾನ್ಸನ್ ಹೇಳಿರುವುದಾಗಿ ಅವರದ್ದೇ ಪಕ್ಷದ ಸಂಸದರೊಬ್ಬರು ಲಂಡನ್‌ನ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಸದ್ಯ ಬೋರಿಸ್ ಜಾನ್ಸನ್ ವಾರ್ಷಿಕವಾಗಿ ಪಡೆಯುತ್ತಿರುವ ವೇತನ 1.43 ಕೋಟಿ ಪೌಂಡ್. ಪ್ರಧಾನಿಯಾಗುವ ಮುನ್ನ ಪತ್ರಿಕೆಯೊಂದಕ್ಕೆ ಅಂಕಣಕಾರರಾಗಿದ್ದ ಬೋರಿಸ್, ಆಗಲೇ 2.62 ಕೋಟಿ ಪೌಂಡ್ ಸಂಪಾದನೆ ಮಾಡುತ್ತಿದ್ದರಂತೆ.