ರಿಷಭ್ ಶೆಟ್ಟಿ ನಿರ್ದೇಶಕರಾಗಿ ಗೆಲುವು ಕಂಡಿದ್ದು ಗೊತ್ತು. ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಅಷ್ಟೇ ಆಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ. ಅವರು ನಟರಾಗಿಯೂ ಯಶಸ್ಸು ಪಡೆದಿರುವುದು ವಿಶೇಷತೆಗಳಲ್ಲೊಂದು. ಅವರ ಅಭಿನಯದ “ಬೆಲ್ ಬಾಟಂ’ ಶತದಿನೋತ್ಸವ ಆಚರಿಸಿಕೊಂಡಿದೆ. ಆ ಖುಷಿಯಲ್ಲಿರುವ ರಿಷಭ್ ಶೆಟ್ಟಿ ಮುಂದೆ ಸಿನಿಮಾ ನಿರ್ದೇಶನ ಮಾಡುತ್ತಾರೋ ಅಥವಾ ಅವರು ಹೀರೋ ಆಗಿಯೇ ಮುಂದುವರೆಯುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.
ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಅವರೀಗ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ಈ ಬಾರಿ ನಟನೆ ಅಲ್ಲ, ಅವರು ನಿರ್ದೇಶನಕ್ಕಿಳಿದಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರಕ್ಕೆ “ರುದ್ರಪ್ರಯಾಗ’ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರನ್ನು ಎಲ್ಲೋ ಕೇಳಿರುವಂತಿದೆಯಲ್ಲಾ ಎಂಬ ಪ್ರಶ್ನೆ ಎದುರಾಗಬಹುದು. ನಿಜ.
ಇದು ಉತ್ತರಾಖಂಡ ರಾಜ್ಯದಲ್ಲಿರುವ ಜಿಲ್ಲೆಯ ಹೆಸರು. ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಸ್ಥಾನವೇ ಈ “ರುದ್ರಪ್ರಯಾಗ’. ರುದ್ರಪ್ರಯಾಗವು ಹಿಮಾಲಯದ ಪವಿತ್ರ ನದಿಗಳ ಐದು ಸಂಗಮ ಕ್ಷೇತ್ರಗಳ ಪೈಕಿ ಒಂದು. ಈ ಹೆಸರನ್ನೇ ಈಗ ರಿಷಭ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರಕ್ಕೆ ಇಡುವ ಮೂಲಕ ಒಂದಷ್ಟು ಕುತೂಹಲ ಕೆರಳಿಸಿದ್ದಾರೆ.
ಜು.7 ರಂದು ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಿಂದಿನ ರಾತ್ರಿ ಅವರು ಟ್ವಿಟ್ಟರ್‌ನಲ್ಲೊಂದು ಪೋಸ್ಟರ್ ಹರಿಬಿಟ್ಟಿದ್ದಾರೆ. “ರುದ್ರಪ್ರಯಾಗ’ ಶೀರ್ಷಿಕೆ ಹೊತ್ತು ಬಂದಿರುವ ಆ ಪೋಸ್ಟರ್‌ನಲ್ಲಿ ಹೊಸತನ ಕಾಣಿಸುತ್ತಿದೆ. ಅದರಲ್ಲಿ ಒಂದು ಚಿರತೆ, ದಟ್ಟ ಕಾನನ, ಒಂದು ನದಿ, ನಗರ, ರಾಣಿ ಚೆನ್ನಮ್ಮ ಪ್ರತಿಮೆ, ವಿಧಾನ ಸೌಧ ಹೀಗೆ ಈ ಎಲ್ಲವನ್ನೂ ಒಳಗೊಂಡು ಹೊರಬಂದಿರುವ ಪೋಸ್ಟರ್ ಹೊಸದೊಂದು ನಿರೀಕ್ಷೆಗೆ ಕಾರಣವಾಗಿರುವುದಂತೂ ಸತ್ಯ.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು “ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾರೆ. ರಿಷಭ್‌ಶೆಟ್ಟಿ, ಆ ಪುಸ್ತಕ ಹಿಡಿದು ಚಿತ್ರ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಇದೆ. ಆದರೆ, ಪೋಸ್ಟರ್‌ನಲ್ಲಿ ಸ್ಪಷ್ಟವಾಗಿ ಸಿನಿಮಾ ಕಥೆ ಹಾಗೂ ನಿರ್ದೇಶನ ಎಂಬುದಿದೆ.
ಹಾಗಾಗಿ, ಇದು ಪುಸ್ತಕ ಕಥೆ ಆಧರಿಸಿದ ಚಿತ್ರವಲ್ಲ ಎಂಬುದೂ ಸ್ಪಷ್ಟವಾದಂತಿದೆ. ಇನ್ನು, ಚಿತ್ರದಲ್ಲಿ ಹೀರೋ ಯಾರಿರುತ್ತಾರೆ, ನಾಯಕಿ ಯಾರು, ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬುದಕ್ಕಿನ್ನೂ ಉತ್ತರವಿಲ್ಲ. ಆದರೆ, ಚಿತ್ರವನ್ನು ಜಯಣ್ಣ ಹಾಗು ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ಈ ಹೊತ್ತಿನ ವಿಶೇಷ.