Advertisement

ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ರೇಸ್‌: ಪಂತ್‌ಗಿಂತ ಮುಂದಿದ್ದಾರೆ ಅನುಭವಿ ಸಾಹಾ!

09:23 AM Dec 15, 2020 | keerthan |

ಅಡಿಲೇಡ್‌: ಭಾರತ- ಆಸೀಸ್ ನಡುವಿನ ಅಡಿಲೇಡ್‌ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಇನ್ನು ಎರಡೇ ದಿನ. ಎರಡೂ ತಂಡಗಳು ತಮ್ಮ ಹನ್ನೊಂದರ ಕಾಂಬಿನೇಶನ್‌ ಕುರಿತು ದೊಡ್ಡ ಮಟ್ಟದಲ್ಲೇ ಯೋಜನೆ ರೂಪಿಸುತ್ತಿವೆ. ಯಾರನ್ನು ಆಡಿಸುವುದು, ಯಾರನ್ನು ಬಿಡುವುದು ಎಂಬ ಲೆಕ್ಕಾಚಾರ ಜೋರಾಗಿಯೇ ಸಾಗುತ್ತಿದೆ. ಪ್ರವಾಸಿ ಭಾರತದ ವಿಷಯದತ್ತ ಬಂದಾಗ ಮುಖ್ಯವಾಗಿ ಎರಡು ಅಂಶಗಳನ್ನು ಬಗೆಹರಿಸಿ ಕೊಳ್ಳಬೇಕಿದೆ. ಓಪನಿಂಗ್‌ ಜೋಡಿ ಯಾವುದು ಹಾಗೂ ವಿಕೆಟ್‌ ಕೀಪರ್‌ ಯಾರು ಎಂಬುದನ್ನು ಇತ್ಯರ್ಥಗೊಳಿಸುವುದು ಸವಾಲಾಗಿ ಪರಿಣಮಿಸಿದೆ. ಈ ಎರಡೂ ಸಂಗತಿ ತಂಡದ ಆಡಳಿತ ಮಂಡಳಿಯ ತಲೆ ಕೊರೆಯುತ್ತಿದೆ.

Advertisement

ಪಂತ್‌ ಅಸ್ಥಿರ ಪ್ರದರ್ಶನ
ವಿಕೆಟ್‌ ಕೀಪಿಂಗ್‌ ಆಯ್ಕೆಯಲ್ಲಿ ಮೊನ್ನೆ ಮೊನ್ನೆಯ ತನಕ ಟೀಮ್‌ ಇಂಡಿಯಾದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ ಯಾವಾಗ ರಿಷಭ್‌ ಪಂತ್‌ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದರೋ, ಸಮಸ್ಯೆಯೊಂದು ಉದ್ಭವಿಸಿತು! ಸಾಹಾ-ಪಂತ್‌ ನಡುವೆ ಪೈಪೋಟಿ ತೀವ್ರಗೊಂಡಿತು.

ರಿಷಭ್‌ ಪಂತ್‌ ಇಲ್ಲಿಯ ತನಕ ಅಸ್ಥಿರ ಪ್ರದರ್ಶನ ನೀಡುತ್ತ ಬಂದ ಕ್ರಿಕೆಟಿಗ. ಬಹುಶಃ ಅವರಿಗೆ ಲಭಿಸಿದಷ್ಟು ಅವಕಾಶ ಇತ್ತೀಚೆಗೆ ಭಾರತ ತಂಡದಲ್ಲಿ ಬೇರೆ ಯಾರಿಗೂ ಸಿಕ್ಕಿಲ್ಲ. ಆದರೆ ಪಂತ್‌ ಇವನ್ನೆಲ್ಲ ಕೈಚೆಲ್ಲಿದ್ದೇ ಹೆಚ್ಚು. ಬೇಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಸಾಮಾನ್ಯ ಮಟ್ಟದ ಕೀಪಿಂಗ್‌ ಪಂತ್‌ ಪಾಲಿನ ಮೈನಸ್‌ ಪಾಯಿಂಟ್ಸ್‌. ಹೀಗಿರುವಾಗ ಅಭ್ಯಾಸ ಪಂದ್ಯದಲ್ಲಿ ಸೆಂಚುರಿಯೊಂದನ್ನು ಬಾರಿಸಿ ದೊಡನೆಯೇ ಅವರು ಟೆಸ್ಟ್‌ ತಂಡಕ್ಕೆ ಫಿಟ್‌ ಆಗಬಲ್ಲರೇ ಎಂಬುದೊಂದು ಪ್ರಶ್ನೆ.

ಕ್ಯಾಪ್ಟನ್‌ ಕೊಹ್ಲಿ, ಕೋಚ್‌ ರವಿಶಾಸ್ತ್ರೀ, ಸಹಾಯಕ ಕೋಚ್‌ ವಿಕ್ರಮ್‌ ರಾಠೊಡ್‌, ಭರತ್‌ ಅರುಣ್‌, ಆಯ್ಕೆ ಮಂಡಳಿ ಸದಸ್ಯ ಹರ್ವಿಂದರ್‌ ಸಿಂಗ್‌ ಅವರೆಲ್ಲ ಪಂತ್‌ ಮತ್ತು ಸಾಹಾ ಆಟವನ್ನು ಬಹಳ ಹತ್ತಿರದಲ್ಲಿ ಕುಳಿತು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಇವರ ಪ್ರಕಾರ ಟೆಸ್ಟ್‌ ಆಯ್ಕೆ ರೇಸ್‌ನಲ್ಲಿ ಸಾಹಾ ಅವರೇ ಮುಂದಿದ್ದಾರೆ. ಯಾವುದೇ ರ್ಯಾಶ್‌ ಶಾಟ್‌ಗೆ ಮುಂದಾಗದೆ ನಿಂತು ಆಡುವುದು, ಕೀಪಿಂಗ್‌ ಕೌಶಲದಲ್ಲೂ ಬಹಳ ಮುಂದಿರುವುದು ಸಾಹಾ ಪಾಲಿನ ಪ್ಲಸ್‌ ಪಾಯಿಂಟ್‌ ಎಂಬುದಾಗಿ ತೀರ್ಮಾನಿಸಿದ್ದಾರೆ.

Advertisement

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತೀವ್ರ ಸಂಕಟದಲ್ಲಿದ್ದಾಗ ಸಾಹಾ ಜವಾಬ್ದಾರಿಯುತ ಆಟದ ಮೂಲಕ 54 ರನ್‌ ಹೊಡೆದು ತಂಡವನ್ನು ರಕ್ಷಿಸಿದ್ದರು. ಆಗ ಪ್ಯಾಟಿನ್ಸನ್‌, ನೆಸರ್‌, ಗ್ರೀನ್‌ ಮೊದಲಾದವರ ಘಾತಕ ಎಸೆತಗಳನ್ನು ನಿಭಾಯಿಸಿ ನಿಂತಿದ್ದರು. ದ್ವಿತೀಯ ಪಂದ್ಯದಲ್ಲಿ ಪಂತ್‌ ಆಡುವಾಗ ಭಾರತ ಆತಂಕದಲ್ಲೇನೂ ಇರಲಿಲ್ಲ. ಆಗ ಲೆಗ್‌ ಸ್ಪಿನ್ನರ್‌ ಸ್ವೆಪ್ಸನ್‌, ಪಾರ್ಟ್‌ಟೈಮ್‌ ಬೌಲರ್‌ ಮ್ಯಾಡಿನ್ಸನ್‌ ಬೌಲಿಂಗ್‌ ನಡೆಸುತ್ತಿದ್ದರು. ಪಂತ್‌ಗೂ ಮುನ್ನ ಗಿಲ್‌, ಅಗರ್ವಾಲ್‌, ವಿಹಾರಿ ಸೇರಿಕೊಂಡು ಭಾರತವನ್ನು ಮೇಲೆತ್ತಿ ನಿಲ್ಲಿಸಿದ್ದರು.

ಇದನ್ನೂ ಓದಿ:ತೆರೆ ಮೇಲೆ ಬರಲಿದೆ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಯೋಪಿಕ್

ಮೊದಲು ಕೀಪಿಂಗ್‌…
ಸಂಜಯ್‌ ಮಾಂಜ್ರೇಕರ್‌, ಅಲನ್‌ ಬೋರ್ಡರ್‌ ಮೊದಲಾದವರು ಹೇಳಿದಂತೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪಿಂಗ್‌ ಕೌಶಲಕ್ಕೇ ಮೊದಲು ಪ್ರಾಧಾನ್ಯ ನೀಡಬೇಕು. ಬ್ಯಾಟಿಂಗ್‌ ಏನಿದ್ದರೂ ಅನಂತರ. ಆಗ 23ರ ಪಂತ್‌ಗಿಂತ 37 ಟೆಸ್ಟ್‌ಗಳ ಅನುಭವಿ, 92 ಕ್ಯಾಚ್‌ ಹಾಗೂ 11 ಸ್ಟಂಪಿಂಗ್‌ ಮಾಡಿರುವ 36 ವರ್ಷದ ಸಾಹಾ ಆಯ್ಕೆಗೆ ಮೊದಲ ಪ್ರಾಶಸ್ತ್ಯ ಲಭಿಸುವ ಸಾಧ್ಯತೆಯೇ ಹೆಚ್ಚು.

ಸೆಂಚುರಿ ಆತ್ಮವಿಶ್ವಾಸ ತುಂಬಿದೆ: ಪಂತ್‌
ಅಭ್ಯಾಸ ಪಂದ್ಯದಲ್ಲಿ ಬಾರಿಸಿದ ಶತಕ ಎನ್ನುವುದು ಅಡಿಲೇಡ್‌ ಟೆಸ್ಟ್‌ ಪಂದ್ಯಕ್ಕೂ ಮೊದಲು ತನ್ನಲ್ಲಿ ಹೊಸ ಆತ್ಮವಿಶ್ವಾಸ  ತುಂಬಿದೆ ಎಂಬುದಾಗಿ ವಿಕೆಟ್‌ ಕೀಪಿಂಗ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಹೇಳಿದ್ದಾರೆ. ಕಳೆದ ಐಪಿಎಲ್‌ನಲ್ಲಿ ತೀವ್ರ ರನ್‌ ಬರಗಾಲದಲ್ಲಿದ್ದ ತನಗೆ ಇದೊಂದು “ಎನರ್ಜಿ ಬೂಸ್ಟ್‌’ ಆಗಿದೆ ಎಂದರು.

“ನಾನು ಬ್ಯಾಟಿಂಗಿಗೆ ಇಳಿದಾಗ ಸಾಕಷ್ಟು ಓವರ್‌ ಬಾಕಿ ಉಳಿದಿದ್ದವು. ಹೀಗಾಗಿ ನಾನು ಮತ್ತು ಹನುಮ ವಿಹಾರಿ ಸೇರಿಕೊಂಡು ಉತ್ತಮ ಜತೆಯಾಟ ನಿಭಾಯಿಸುವ ಯೋಜನೆ ಹಾಕಿಕೊಂಡೆವು. ಮೊದಲು ವಿಹಾರಿಗೆ ಬೆಂಬಲ ನೀಡತೊಡಗಿದೆ, ಬಳಿಕ ಸಹಜ ಆಟಕ್ಕೆ ಕುದುರಿದೆ. ಸೆಂಚುರಿಯಿಂದ ಆತ್ಮವಿಶ್ವಾಸ ಹೆಚ್ಚಿತು. ಕಳೆದೊಂದು ತಿಂಗಳಿಂದ ಆಸ್ಟ್ರೇಲಿಯದಲ್ಲಿದ್ದರೂ ನನಗೆ ಹೆಚ್ಚಿನ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ದುರದೃಷ್ಟವಶಾತ್‌ ಲೆಗ್‌ ಬಿಫೋರ್‌ ಆದೆ. ಆದರೆ ಅದು ನಾಟೌಟ್‌ ಆಗಿತ್ತು’ ಎಂಬುದಾಗಿ 23 ವರ್ಷದ ಎಡಗೈ ಆಟಗಾರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next