ನವದೆಹಲಿ: ಭೀಕರ ಅಪಘಾತದಲ್ಲಿ ಬದುಕುಳಿದಿರುವ ಕ್ರಿಕೆಟಿಗ ರಿಷಭ್ ಪಂತ್‌ರನ್ನು ಡೆಹ್ರಾಡೂನಿನ ಮ್ಯಾಕ್ಸ್ ಆಸ್ಪತ್ರೆಯಿಂದ ಏರ್ ಆ್ಯಂಬುಲೆನ್ಸ್ ಮೂಲಕ ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರನ್ನು ಅಲ್ಲಿನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸಿದ್ಧ ಮೂಳೆಶಾಸ್ತ್ರಜ್ಞ ಡಾ.ದಿನ್ಶಾ ಪರ್ದಿವಾಲ ಅಸ್ಥಿರಜ್ಜುವಿನ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದ್ದಾರೆ.
ರಿಷಭ್ ಪಂತ್ ಬಿಸಿಸಿಐನ ಕೇಂದ್ರೀಯ ಗುತ್ತಿಗೆಗೆ ಸೇರಿರುವುದರಿಂದ ಅವರ ಚಿಕಿತ್ಸೆಯ ಪೂರ್ಣ ಜವಾಬ್ದಾರಿ, ಬಿಸಿಸಿಐಗೆ ಸೇರಿದೆ. ಅವರಿಗೆ ಆಗಿರುವ ಸಮಸ್ಯೆಯೇನು? ಮುಂದಿನ ಕ್ರಮಗಳೇನು ಎಂದು ಬಿಸಿಸಿಐನ ವೈದ್ಯರೇ ನಿರ್ಣಯ ಮಾಡುತ್ತಾರೆ. ಇದರ ಆಧಾರದ ಮೇಲೆ ದಿನ್ಶಾ ಶಸ್ತ್ರಚಿಕಿತ್ಸೆ ನೆರವೇರಿಸುತ್ತಾರೆ. ದಿನ್ಶಾ ಕ್ರೀಡಾಪಟುಗಳಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ವಿಶೇಷ ತಜ್ಞತೆ ಹೊಂದಿದ್ದಾರೆ.
ಅದಾದ ಮೇಲೆ ರಿಷಭ್ ಪಂತ್‌ರನ್ನು ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಗೆ ಕರೆ ತರಲಾಗುತ್ತದೆ. ಅಲ್ಲಿ ಅವರಿಗೆ ತರಬೇತಿ ಇನ್ನಿತರೆ ಸಂಗತಿಗಳನ್ನು ಗಮನಿಸಲಾಗುತ್ತದೆ. ಸದ್ಯ ಅವರ ತಲೆ, ಬೆನ್ನಿಗೆ ಆಗಿರುವ ಗಾಯ ತೀರಾ ಗಂಭೀರವಲ್ಲ. ಮಂಡಿ ಅಸ್ಥಿರಜ್ಜು ಹಾಗೂ ಹಿಮ್ಮಡಿಗೆ ಆಗಿರುವ ಗಾಯ ಗಂಭೀರವಾಗಿವೆ. ಸದ್ಯ ಊತವಿರುವುದರಿಂದ ಮಂಡಿಯಲ್ಲಿ ಮೂಳೆಗಳನ್ನು ಕೂಡಿಸಿರುವ ಸ್ನಾಯುವಿನ ಹರಿತದ ತೀವ್ರತೆಯೇನು ಎಂದು ಖಚಿತವಾಗಿ ಗೊತ್ತಾಗಿಲ್ಲ.
ಇದರಿಂದ ಖಚಿತವಾಗಿರುವ ಒಂದು ಸಂಗತಿಯೆಂದರೆ ಅವರು ಅನಿರ್ದಿಷ್ಟಾವಧಿವರೆಗೆ ಕ್ರಿಕೆಟ್‌ನಿಂದ ದೂರವಿರಬೇಕಾಗುತ್ತದೆ. ಡಿ.30ರಂದು ಬೆಳಗ್ಗೆ ಐದು ಗಂಟೆಗೆ ರಿಷಭ್ ಪಂತ್ ದೆಹಲಿಯಿಂದ ಉತ್ತರಾಖಂಡದಲ್ಲಿರುವ ರೂರ್ಕಿಗೆ ತಾವೇ ಮರ್ಸಿಡೆಸ್ ಕಾರು ಓಡಿಸಿಕೊಂಡು ಹೋಗುತ್ತಿದ್ದರು. ತಾಯಿಗೆ ಹೊಸವರ್ಷದ ಅಚ್ಚರಿಯನ್ನು ನೀಡುವುದು ಅವರ ಉದ್ದೇಶವಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ 58ರಲ್ಲಿ ಚಲಿಸುತ್ತಿದ್ದಾಗ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಅದರ ರಭಸಕ್ಕೆ ಕಾರು ಬೆಂಕಿ ಹೊತ್ತಿಕೊಂಡು ಉರಿಯಿತು. ರಿಷಭ್ ಕಿಟಕಿಯನ್ನು ಒಡೆದರು. ಅದೇ ವೇಳೆ ಬಸ್ ಚಾಲಕರೊಬ್ಬರು ಅವರನ್ನು ಹೊರಕ್ಕೆಳೆದುಕೊಂಡರು. ಅವರು ಬದುಕಿ ಉಳಿದಿದ್ದೇ ಒಂದು ಪವಾಡವಾಗಿದೆ.