ನಿರ್ದೇಶಕ ಕಮ್ ನಟ ರಿಷಭ್ ಶೆಟ್ಟಿ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಹಾಗಂತ, ಅವರು ಆ ಚಿತ್ರವನ್ನು ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ನಟಿಸುತ್ತಿದ್ದಾರೆ. ಹೌದು, ಆ ಚಿತ್ರಕ್ಕೆ “ನಾಥೂರಾಮ್’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನು ಬಳಂಜ ನಿರ್ದೇಶಿಸುತ್ತಿದ್ದಾರೆ. ಇನ್ನು, “ರಂಗಿತರಂಗ’ ಚಿತ್ರ ನಿರ್ಮಿಸಿದ್ದ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯಕ್ಕೆ “ನಾಥೂರಾಮ್’ ಚಿತ್ರದಲ್ಲಿ ರಿಷಭ್ ನಟಿಸುತ್ತಿದ್ದಾರೆಂಬುದಷ್ಟೇ ಈ ಹೊತ್ತಿನ ಸುದ್ದಿ. ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ತಂತ್ರಜ್ಞರು, ಕಲಾವಿದರ ಆಯ್ಕೆ ನಡೆಯಲಿದ್ದು, ಶೀಘ್ರವೇ ಚಿತ್ರೀಕರಣ ಶುರುವಾಗಲಿದೆ. “ನಾಥೂರಾಮ್’ ಅಂದಾಕ್ಷಣ, ಕೈಯಲ್ಲಿ ಗನ್ ಇದ್ದೇ ಇರುತ್ತೆ ಎಂಬ ಲೆಕ್ಕಾಚಾರ ಎಲ್ಲರಲ್ಲೂ ಇರುತ್ತೆ. ಸದ್ಯಕ್ಕೆ ಕಾಟೂನ್ ಪೋಸ್ಟರ್‌ನಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಗನ್ ಇಟ್ಟುಕೊಂಡಿದ್ದು, ಸುತ್ತಲೂ ಜನರಿರುವ ಚಿತ್ರವೊಂದು ಹರಿದಾಡುತ್ತಿದೆ.
ಆ ಚಿತ್ರ ನೋಡಿದರೆ, ಅದೊಂದು “ಸಂಘರ್ಷ’ ಕುರಿತಾದ ಕಥೆ ಇರಬಹುದೇ ಎಂಬ ಪ್ರಶ್ನೆಯೂ ಹಾಗೊಮ್ಮೆ ಬಂದು ಹೋಗುತ್ತೆ. ಅದೇನೆ ಇರಲಿ, ರಿಷಭ್ ಈಗ ನಿರ್ದೇಶನಕ್ಕಿಂತ ನಟನೆಯತ್ತ ಗಮನಹರಿಸಿದಂತೆ ಕಾಣುತ್ತಿದೆ. ಅಂದಹಾಗೆ, ರಿಷಭ್ ಶೆಟ್ಟಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಲ್ಲದೆ, ಈಗ ನಿರ್ಮಾಣಕ್ಕೂ ಇಳಿದಿರುವುದು ಎಲ್ಲರಿಗೂ ಗೊತ್ತಿದೆ.
“ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. “ಕಥಾಸಂಗಮ’ ಚಿತ್ರಕ್ಕೂ ರಿಷಭ್ ನಿರ್ದೇಶಕರು. ಈ ಚಿತ್ರದಲ್ಲಿ ಏಳು ಕಥೆಗಳಿದ್ದು, ಏಳು ಮಂದಿ ನಿರ್ದೇಶಕರಿದ್ದಾರೆ. ಏಳು ಮಂದಿ ಸಂಗೀತ ನೀಡುತ್ತಿದ್ದು, ಏಳು ಮಂದಿ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರಕ್ಕೂ ರಿಷಭ್ ಶೆಟ್ಟಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಇನ್ನು, “ಬೆಲ್ ಬಾಟಮ್’ ಚಿತ್ರಕ್ಕೂ ರಿಷಭ್‌ಶೆಟ್ಟಿ ಹೀರೋ. ಶನಿವಾರ ಹುಟ್ಟುಹಬ್ಬ ಆಚರಿಸಿಕೊಂಡ ರಿಷಭ್, “ಶ್ರೀಮನ್ನಾರಾಯಣ’ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ “ನಾಥೂರಾಮ್’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಟನಾಗಬೇಕು ಎಂದು ಗಾಂಧಿನಗರಕ್ಕೆ ಬಂದ ರಿಷಭ್‌ಗೆ ಸಿಕ್ಕಿದ್ದು ನಿರ್ದೇಶಕನ ಪಟ್ಟ. ಅದನ್ನು ಯಶಸ್ವಿಯಾಗಿ ನಿರ್ವಹಿಸಿ, ಜೊತೆಗೆ ತಮ್ಮ ನಟನೆ ಆಸೆಯನ್ನೂ ಈಡೇರಿಸಿಕೊಳ್ಳುತ್ತಿದ್ದಾರೆ.