Advertisement

ಶೂಟಿಂಗ್‌ ಬಳಿಕ ಲೊಕೇಶನ್‌ ಮರೆಯದ ರಿಷಭ್‌

10:29 AM Oct 16, 2018 | |

ಮಂಗಳೂರು: ಗಡಿನಾಡಿನ ಕನ್ನಡ ಶಾಲೆಗಳ ಸ್ಥಿತಿಗತಿ ಮತ್ತು ರಕ್ಷಿಸಬೇಕಾದ ಆಗತ್ಯವನ್ನು ಭಿನ್ನವಾಗಿ ಮನದಟ್ಟು ಮಾಡಿಸಿದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನೆಮಾ ಚಿತ್ರೀಕರಣದ ಲೊಕೇಶನ್‌ ಕೈರಂಗಳ ಶಾಲೆಯನ್ನು ನಿರ್ದೇಶಕ ರಿಷಭ್‌ ಶೆಟ್ಟಿ ಮರೆತುಬಿಟ್ಟಿಲ್ಲ. ಮುಚ್ಚುವ ಭೀತಿಯಲ್ಲಿರುವ ಈ ಶಾಲೆಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ. 

Advertisement

137 ವರ್ಷಗಳ ಇತಿಹಾಸವಿರುವ ಬಂಟ್ವಾಳ ತಾಲೂಕಿನ ಕೈರಂಗಳ ಸ.ಹಿ.ಪ್ರಾ. ಶಾಲೆ ಮುಚ್ಚುಗಡೆ ಅಪಾಯ ಎದುರಿಸುತ್ತಿದೆ. ಗಡಿನಾಡಿನ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗೆಗಿನ ಸಿನೆಮಾ ಯಶಸ್ವಿಯಾಗಿದ್ದರೆ ಅದರ
ಶೂಟಿಂಗ್‌ ನಡೆದ ಶಾಲೆ ವಿದ್ಯಾರ್ಥಿಗಳಿಲ್ಲದ ಸ್ಥಿತಿ ತಲುಪಿರುವುದು ವಿಪರ್ಯಾಸ.

ಕೈರಂಗಳ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇದ್ದು, ಸದ್ಯ ಕೇವಲ 25 ವಿದ್ಯಾರ್ಥಿಗಳಿದ್ದಾರೆ. 2ನೇ ತರಗತಿಗೆ
ದಾಖಲಾತಿ ಆಗಿಲ್ಲ. ಈಗ ಇರುವುದೊಬ್ಬರೇ ಅಧ್ಯಾಪಕರು. ಹೀಗಾಗಿ ಶಾಲೆ ಮುಚ್ಚುಗಡೆ ಆತಂಕ ಎದುರಿಸುತ್ತಿದೆ.
ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್‌ ಶೆಟ್ಟಿ ಮತ್ತು ತಂಡ ಶಾಲೆಯ ಟ್ರಸ್ಟಿಗಳ ಜತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿ ಸ್ಪಂದಿಸಿದ್ದು, ಮುಂದಿನ ಕಾರ್ಯಯೋಜನೆ ಬಗ್ಗೆ ಇದೇ ತಿಂಗಳಿನಲ್ಲಿ ಮಾತುಕತೆ ನಡೆಸಲಿದ್ದಾರೆ.

ಮಂಗಳೂರು ಮೂಲದ ಅನಿಲ್‌ ಶೆಟ್ಟಿ ಮತ್ತು ತಂಡ ಈಗಾಗಲೇ “ಕನ್ನಡ ಶಾಲೆ ಉಳಿಸಿ ಆಂದೋಲನ’ವನ್ನು ಕೈಗೊಂಡಿದ್ದು, ಪ್ರಶಂಸೆ, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅನಿಲ್‌ ಶೆಟ್ಟಿ ತಂಡದಲ್ಲಿ ಸುಮಾರು 100 ಮಂದಿ ಕಾರ್ಯಕರ್ತರಿದ್ದು, ಅವರೂ ರಿಷಭ್‌ ಶೆಟ್ಟಿಯವರ ಹೊಸ ಪ್ರಯ°ಕ್ಕೆ ಕೈ ಜೋಡಿಸಲಿದ್ದಾರೆ. 

ಪ್ರಿ ಸ್ಕೂಲ್‌ ಆರಂಭಕ್ಕೆ ಚಿಂತನೆ
ಕನ್ನಡ ಶಾಲೆಯಲ್ಲಿ ಕಲಿತರೆ ಮುಂದಿನ ವಿದಾಭ್ಯಾಸಕ್ಕೆ ತೊಡಕು ಎಂಬ ಭಾವನೆ ಕೆಲವರಲ್ಲಿ ಇದೆ. ಇದನ್ನು ತೊಡೆದು ಹಾಕುವ ದೃಷ್ಟಿಯಿಂದ ಶಾಲೆಯಲ್ಲಿ ಪೂರ್ವ ಪ್ರಾಥಮಿಕ (ಪ್ರಿ ಸ್ಕೂಲ್‌) ಆರಂಭಿಸುವ ಚಿಂತನೆ ನಡೆಸಲಾಗಿದೆ. ಕನ್ನಡ ಭಾಷೆಗೆ ಪ್ರಾಶಸ್ತ್ರ ನೀಡಲಿದ್ದು, ಇದನ್ನು ಪ್ರಾರಂಭಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಬಹುದು ಎಂಬ ಯೋಚನೆ ತಂಡದ್ದು.

Advertisement

ಕೈರಂಗಳ ಶಾಲೆಯಲ್ಲಿ ಸದ್ಯ 25 ವಿದ್ಯಾರ್ಥಿಗಳಿದ್ದಾರೆ. ಎರಡನೇ ತರಗತಿಗೆ ಮಕ್ಕಳಿಲ್ಲ. ನಾನೊಬ್ಬನೇ ಶಿಕ್ಷಕ. ಶಾಲೆ ಉಳಿಸುವುದಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಶಾಲಾ ಕಟ್ಟಡ ಸರಿಯಾಗಿದೆ. ಇರುವುದು ಮಕ್ಕಳ ಕೊರತೆ ಮಾತ್ರ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಮನೆಮನೆಗೆ ತೆರಳಿ ಅರಿವು ಮೂಡಿಸಬೇಕು.
ದೇವದಾಸ್‌, ಮುಖ್ಯೋಪಾಧ್ಯಾಯರು, ಸರಕಾರಿ ಹಿ.ಪ್ರಾ. ಶಾಲೆ ಕೈರಂಗಳ

ಒಬ್ಬರಿಂದಾಗುವ ಕೆಲಸವಲ್ಲ
ರಿಷಭ್‌ ಶೆಟ್ಟಿ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಸರಕಾರಿ ಶಾಲೆಯನ್ನು ಉಳಿಸುವುದು ಒಬ್ಬರಿಂದಾಗುವ ಕೆಲಸವಲ್ಲ. ಕೈಯಲ್ಲಿ ಹಣವಿದ್ದರೆ, ಜನರಿದ್ದರೆ ಸಾಲದು. ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡಬೇಕು. ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆತರುವ ವ್ಯವಸ್ಥೆ ಮಾಡಬೇಕು. ಏನೇ ಆಗಲಿ, ಕೈರಂಗಳ ಸ. ಹಿ. ಪ್ರಾ. ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next