Advertisement
ಹೃಷಿಕೇಶದ ಎಐಐಎಂಎಸ್ ನ್ಪೋರ್ಟ್ಸ್ ಇಂಜ್ಯುರಿ ವಿಭಾಗದ ಡಾ| ಖಮರ್ ಆಜಂ ನೀಡಿರುವ ಹೇಳಿಕೆ ಪ್ರಕಾರ, ರಿಷಭ್ ಪಂತ್ ಮೂರರಿಂದ ಆರು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಅವರು ಆಸ್ಟ್ರೇಲಿಯ ವಿರುದ್ಧದ ಸರಣಿ ಹಾಗೂ 16ನೇ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಯಾವುದೇ ಸಾಧ್ಯತೆ ಇಲ್ಲ.
Related Articles
ರಿಷಭ್ ಪಂತ್ ಆರೋಗ್ಯದಲ್ಲಿ ಗಣನೀಯ ಮಟ್ಟದ ಸುಧಾರಣೆ ಕಂಡುಬಂದಿದೆ ಎಂಬುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿ ರಿಷಭ್ ಅವರ ತಾಯಿ ಸರೋಜಾ ಪಂತ್ ಮತ್ತು ಸಹೋದರಿ ಸಾಕ್ಷಿ ಇದ್ದಾರೆ. ಸಹೋದರನ ಅಪಘಾತದ ಸುದ್ದಿ ಕೇಳಿದ ಸಾಕ್ಷಿ ಲಂಡನ್‌ನಿಂದ ಶನಿವಾರ ಬೆಳಗ್ಗೆ ಧಾವಿಸಿ ಬಂದಿದ್ದರು.
Advertisement
ಹೊಸದಿಲ್ಲಿಗೆ ಏರ್ ಲಿಫ್ಟ್?ಪಂತ್ ಅವರಿಗೆ ಪ್ಲ್ರಾಸ್ಟಿಕ್ ಸರ್ಜರಿ ಅಗತ್ಯವಿರುವುದರಿಂದ ಹೊಸದಿಲ್ಲಿಗೆ ಏರ್‌ಲಿಫ್ಟ್ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮ ಹೇಳಿದ್ದಾರೆ.
“ಡಿಡಿಸಿಎ ತಂಡ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ರಿಷಭ್ ಪಂತ್ ಅವರ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ಪ್ಲ್ರಾಸ್ಟಿಕ್ ಸರ್ಜರಿಗಾಗಿ ಹೊಸದಿಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬಿದ್ದರೆ ಪಂತ್ ಅವರನ್ನು ವಿಮಾನದಲ್ಲಿ ಕೊಂಡೊ ಯ್ಯಲಾಗುವುದು’ ಎಂದಿದ್ದಾರೆ. ಗೆಳೆಯರಿಂದ ಎಚ್ಚರಿಕೆ
ಶುಕ್ರವಾರ ರಾತ್ರಿ ರಿಷಭ್ ಪಂತ್ ತಮ್ಮ ಕಾರಿನಲ್ಲಿ ಒಬ್ಬರೇ ಹೊಸದಿಲ್ಲಿಯಿಂದ ಡೆಹ್ರಾಡೂನ್‌ಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅವರ ಗೆಳೆಯರು, ರಾತ್ರಿ ವೇಳೆ ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಹೋಗುವುದು ಬೇಡ ಎಂದೂ ಸೂಚಿಸಿದ್ದರು. ಆದರೆ ಪಂತ್ ಇದನ್ನು ಕೇಳಲಿಲ್ಲ. ತನಗೆ ಧೈರ್ಯವಿದೆ ಎಂದು ಹೇಳಿ ಹೊರಟಿದ್ದರು. ಹೊಸದಿಲ್ಲಿಯಿಂದ ಡೆಹ್ರಾಡೂನ್‌ಗೆ 282 ಕಿ.ಮೀ. ದೂರ. ರಾಷ್ಟ್ರೀಯ ಹೆದ್ದಾರಿಯಲ್ಲಿ 334ರಲ್ಲಿ ಸಾಗಬೇಕು. ಬೆಳಗಿನ ಜಾವ 5.30ರ ವೇಳೆ ಹರಿದ್ವಾರ ಜಿಲ್ಲೆಯ ಮಂಗ್ಲೌರ್-ನರ್ಸಾನ್ ಹೈವೇಯಲ್ಲಿ ಈ ಅಪಘಾತ ಸಂಭವಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಯಾರು?
ರಿಷಭ್ ಪಂತ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ. ಆದರೆ ಮುಂದಿನ ಸೀಸನ್‌ನಿಂದ ಬಹುತೇಕ ಹೊರಗುಳಿಯುವ ಕಾರಣ ಡೆಲ್ಲಿ ಫ್ರಾಂಚೈಸಿ ನೂತನ ನಾಯಕನನ್ನು ನೇಮಿಸುವುದು ಅನಿವಾರ್ಯವಾಗಲಿದೆ. ಆಗ ಈ ಅವಕಾಶ ಯಾರಿಗೆ ಲಭಿಸೀತು ಎಂಬುದೊಂದು ಕುತೂಹಲ. ನಾಯಕತ್ವದ ಅನುಭವದ ದೃಷ್ಟಿಯಲ್ಲಿ ಡೇವಿಡ್ ವಾರ್ನರ್ ಮುಂಚೂಣಿಯಲ್ಲಿದ್ದಾರೆ. ಅವರು ದೀರ್ಘ ಕಾಲ ಸನ್‌ರೈಸರ್ ಹೈದರಾಬಾದ್ ತಂಡದ ನಾಯಕರಾಗಿದ್ದರು. ಪ್ರಶಸ್ತಿಯನ್ನೂ ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ವಾರ್ನರ್ ಉತ್ತಮ ಆಯ್ಕೆಯಾಗಬಹುದು. ಭಾರತೀಯರನ್ನೇ ನಾಯಕತ್ವಕ್ಕೆ ಆಯ್ಕೆ ಮಾಡುವುದಾದರೆ ಆರಂಭಕಾರ ಪೃಥ್ವಿ ಶಾ ಅವರಿಗೆ ಈ ಅವಕಾಶ ಸಿಕ್ಕೀತು. ಅವರು 2018ರಿಂದಲೂ ಡೆಲ್ಲಿ ತಂಡದಲ್ಲಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವವೂ ಇದೆ. ಭಾರತದ ಮತ್ತೋರ್ವ ಅಭ್ಯರ್ಥಿ ಅಕ್ಷರ್ ಪಟೇಲ್. ಡೆಲ್ಲಿ ಪರ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಆದರೆ ಎಲ್ಲಿಯೂ ನಾಯಕನಾಗಿ ಕರ್ತವ್ಯ ನಿಭಾಯಿಸಿದ ಅನುಭವ ಇಲ್ಲ.
ಮಿಚೆಲ್ ಮಾರ್ಷ್ 4ನೇ ಆಯ್ಕೆ ಆಗಬಹುದು. ಅವರು ಆಸ್ಟ್ರೇಲಿಯ ತಂಡದ ಉಪನಾಯಕನೂ ಆಗಿದ್ದರು. ಬಾಲಿವುಡ್ ತಾರೆಗಳ ಭೇಟಿ
ಕಾರು ಅಪಘಾತಕ್ಕೆ ಸಿಲುಕಿ ಡೆಹ್ರಾಡೂನ್‌ನ “ಮ್ಯಾಕ್ಸ್ ಹಾಸ್ಪಿಟಲ್’ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅವರನ್ನು ಬಾಲಿವುಡ್ ತಾರೆಗಳಾದ ಅನಿಲ್ ಕಪೂರ್, ಅನುಪಮ್ ಖೇರ್ ಮೊದಲಾದವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಶೀಘ್ರ ಚೇತರಿಕೆಯನ್ನು ಹಾರೈಸಿದರು. “ಪಂತ್ ದೊಡ್ಡ ಅವಘಢದಿಂದ ಪಾರಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಅಭಿಮಾನಿಗಳಾಗಿ ನಾವು ಈ ಭೇಟಿ ಮಾಡಿದ್ದೇವೆ. ಅವರು ಬೇಗನೇ ಗುಣಮುಖರಾಗಿ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳಲೆಂಬುದೇ ನಮ್ಮ ಪ್ರಾರ್ಥನೆ’ ಎಂಬುದಾಗಿ ಆಸ್ಪತ್ರೆಯ ಹೊರಗೆ ನೆರೆದ ಮಾಧ್ಯಮದವರನ್ನು ಉದ್ದೇಶಿಸಿ ಅನಿಲ್ ಕಪೂರ್ ಮಾತಾಡಿದರು.
“ಪಂತ್ ಚೆನ್ನಾಗಿದ್ದಾರೆ. ಅವರ ತಾಯಿ, ಕುಟುಂಬದ ಕೆಲವು ಸದಸ್ಯರು ಆಸ್ಪತ್ರೆಯಲ್ಲಿದ್ದಾರೆ. ಪಂತ್ ಜತೆ ಸಾಕಷ್ಟು ತಮಾಷೆ ಮಾಡಿ ಬಂದೆವು’ ಎಂದು ಅನುಪಮ್ ಖೇರ್ ಹೇಳಿದರು.
ರಿಷಭ್ ಪಂತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮ್ಯಾಕ್ಸ್ ಹಾಸ್ಪಿಟಲ್‌ನ ಆಡಳಿತ ಮಂಡಳಿ ತಿಳಿಸಿದೆ.