Advertisement

ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯ ಬಿಜೆಪಿಯ ಮೂಲ ಸಿದ್ಧಾಂತ: ಸಿಎಂ ಬೊಮ್ಮಾಯಿ

04:47 PM Oct 12, 2022 | Team Udayavani |

ಹೊಸಪೇಟೆ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯದವೇ ಭಾಜಪ ಸರ್ಕಾರ ಮೂಲ ಸಿದ್ಧಾಂತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಹೊಸಪೇಟೆಯಲ್ಲಿ ಏರ್ಪಡಿಸಲಾಗಿದ್ದ ಜನಸಂಕಲ್ಪಯಾತ್ರೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ ಅವಧಿಯನ್ನು ವಿಸ್ತರಣೆ ಮಾಡುವ ದಿಟ್ಟ ನಿಲುವನ್ನು ತೆಗೆದುಕೊಂಡರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯದ ಆಶಯದಂತೆ ದೀನದಯಾಳ್ ಉಪಾಧ್ಯಾಯ ಅವರು ಅಂತ್ಯೋದಯ ಕಾರ್ಯಕ್ರಮ ಕೈಗೊಂಡರು. ಅಂತ್ಯೋದಯ ಮೂಲ ಸಿದ್ಧಾಂತವೇ ಬಿಜೆಪಿಯದ್ದು. ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿಲ್ಲ ಎಂದರು.

ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಕ್ರಾಂತಿಕಾರಿ ಹೆಜ್ಜೆ
ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದೇವೆ. ಮುಂದಿನ ಹೆಜ್ಜೆಗಳನ್ನು ಕೂಡ ಇಡುತ್ತೇವೆ. ಇದರ ಬಗ್ಗೆ ಸಂಪೂರ್ಣ ಅರಿವಿದೆ. 50 ವರ್ಷ ಈ ನಿರ್ಣಯ ತೆಗೆದುಕೊಳ್ಳಲು ಆಗಿರಲಿಲ್ಲ. ಈಗ ಮುಂದಿನ ಪ್ರಕ್ರಿಯೆಗೆ .ಇಂದಿನ ನಿರ್ಣಯ ಕಾರಣವಾಗುತ್ತದೆ. ಕಾನೂನು ತಜ್ಞರೊಂದಿಗೆ ನಾವು ಚರ್ಚೆ ನಡೆಸಿದ್ದು, ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಮೀಸಲಾತಿ ಹೆಚ್ಚಳ ಸಂವಿಧಾನಬದ್ಧ
ಶಾಸಕ ಅರವಿಂದ ಬೆಲ್ಲದ್ ಅವರ ಧರ್ಮಾಧಾರಿತ ಮೀಸಲಾತಿ ಕಡಿತಗೊಳಿಸಬೇಕೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಏನೇ ಮಾಡಿದರೂ ಸಂವಿಧಾನಬದ್ಧವಾಗಿ ಮಾಡುತ್ತೇವೆ. ಅದನ್ನು ಬಿಟ್ಟು ಏನೂ ಮಾಡಲಾಗುವುದಿಲ್ಲ. ಹಲವಾರು ಜನ ಹಲವಾರು ವಿಚಾರಗಳನ್ನು ಹೇಳುತ್ತಾರೆ. ಆದರೆ ಯಾವುದಾದರೂ ಒಂದು ವರದಿ , ಚಿಂತನೆ , ಅಂಕಿಅಂಶಗಳ ಆಧಾರದ ಮೇಲೆ ಮಾಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವಾಗಲೂ ನ್ಯಾ. ನಾಗಮೋಹನ್ ದಾಸ್ ಅವರ ವರದಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ವೈಯಕ್ತಿಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

‘ಭಾರತ್ ತೋಡೋ’ ಯಾತ್ರೆಗೂ ನಮಗೂ ಸಂಬಂಧವಿಲ್ಲ
ಜನಸಂಕಲ್ಪ ಯಾತ್ರೆಯ ತಯಾರಿ ಒಂದೂವರೆ ತಿಂಗಳ ಮುನ್ನವೇ ಆಗಿತ್ತು. ಮಳೆ ಬಂದಿದ್ದರಿಂದ ಸ್ವಲ್ಪ ಮುಂದೂಡಿಕೆಯಾಯಿತು. ಅಷ್ಟು ಬಿಟ್ಟರೆ, ‘ಭಾರತ್ ತೋಡೋ’ ಯಾತ್ರೆಗೂ ನಮಗೂ ಸಂಬಂಧವಿಲ್ಲ ಎಂದರು.

Advertisement

ಕಾಂಗ್ರೆಸ್ ನವರ ಎಸ್ ಸಿ, ಎಸ್ ಟಿ ವಿರೋಧಿ ಧೋರಣೆ
ಮೀಸಲಾತಿ ಹೆಚ್ಚಳದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪ್ರಿಯಾಂಕ ಖರ್ಗೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 50 ವರ್ಷದ ಬೇಡಿಕೆಯನ್ನು ಅವರು ಈಡೇರಿಸಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಮಿತಿ ರಚಿಸಿದರು. ವರದಿಯನ್ನು ಅನುಷ್ಠಾನ ಮಾಡುವ ಶಕ್ತಿ ಭಾಜಪ ಸರ್ಕಾರಕ್ಕಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಏಳಿಗೆಗೆ ಬದ್ಧತೆ ಇದೆ. ಕಾಂಗ್ರೆಸ್ ಅವರು ಮೀಸಲಾತಿ ಬಗ್ಗೆ ಎತ್ತಿರುವ ಅಪಸ್ವರ, ಅವರ ಎಸ್ ಸಿ, ಎಸ್ ಟಿ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಜನಸಂಕಲ್ಪ ಯಾತ್ರೆಗೆ ಜನರ ಆಶೀರ್ವಾದವಿದೆ
ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಜನಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ. ಅಭೂತಪೂರ್ವ ಉತ್ಸಾಹ , ಬೆಂಬಲ ಮತ್ತು ಸಂಕಲ್ಪ ದೊರೆತಿದೆ. ಇಂದೂ ಕೂಡ ಬಹಳ ದೊಡ್ಡ ಪ್ರಮಾಣದ ಜನಸ್ತೋಮ ಸೇರಿ ಜನಸಂಕಲ್ಪ ಯಾತ್ರೆಗೆ ಆಶೀರ್ವಾದ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರ ಗಳಿಗೂ ನಾವು ಭೇಟಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳು ನಮ್ಮ ರಾಜ್ಯ ಸರ್ಕಾರದ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ಸರ್ಕಾರದ ಕಾರ್ಯಕ್ರಮಗಳು ಎಲ್ಲವೂ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರದ ಕಾರ್ಯಕ್ರಮ ಗಳನ್ನು ಮುಂದಿಟ್ಟು ಕೊಂಡು ನಾವು ಜನರ ಆಶೀರ್ವಾದವನ್ನು ಕೇಳುತ್ತಿದ್ದೇವೆ. ಜನರೂ ಕೂಡ ಸ್ಪಂದಿಸುತ್ತಿದ್ದಾರೆ. ಜನಸಂಕಲ್ಪ ಯಾತ್ರೆ ಅಂತಿಮವಾಗಿ ವಿಜಯಸಂಕಲ್ಪವಾಗಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next