Advertisement

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

11:23 AM Dec 07, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಕೇವಲ ತರಕಾರಿ ಬೆಲೆಗಳ ಮೇಲೆ ಅಷ್ಟೇ ಪರಿಣಾಮ ಬೀರಿಲ್ಲ. ಬದಲಾಗಿ ಈಗ ಮೆಣಸಿನ ಕಾಯಿ, ಅಲಸಂದಿ ಕಾಳು, ಅವರೆಕಾಳು, ಹೆಸರುಬೇಳೆ, ಹೆಸರು ಕಾಳು ಸೇರಿದಂತೆ ಬೇಳೆ ಕಾಳು, ಆಹಾರ ಧಾನ್ಯ ಸೇರಿ ಇತರೆ ಅಗತ್ಯ ಪದಾರ್ಥಗಳ ಬೆಲೆ ದುಪ್ಪಟ್ಟಿಗೂ ಕಾರಣವಾಗಿದೆ. ಈ ಹಿಂದೆ ಕೆ.ಜಿಗೆ 80 ರೂ. ಇದ್ದ ಅಲಸಂದಿಕಾಳು 102 ರೂ.ಗೆ ಏರಿಕೆ ಆಗಿದೆ. ಕೆಜಿಗೆ 52 ರಿಂದ 55 ರೂ. ವರೆಗೆ ಇದ್ದ ಅವರೆಕಾಳು 62ರೂ. ದಿಂದ 65 ರೂ. ವರೆಗೂ ಮಾರಾಟವಾಗುತ್ತಿದೆ.

Advertisement

85ರೂ. ದರ ಇದ್ದ ಹೆಸರು ಬೇಳೆ ಈಗ 93 ರೂ.ಗೆ ಏರಿದೆ. ಈ ಹಿಂದೆ ಕಡಲೆಕಾಳು ಕೆಜಿಗೆ 58 ರೂ. ಇದ್ದ ಈಗ 64 ರೂ.ಗೆ ಮಾರಾಟವಾಗುತ್ತಿದೆ. 105 ರೂ.ಗೆ ಮಾರಾಟವಾಗುತ್ತಿದ್ದ ಕಡ್ಲೆ ಬೀಜ ಈಗ 115 ರೂ. ತಲುಪಿದೆ. ಜತೆಗೆ ಹುರುಳಿಕಾಳು ಬೆಲೆ 38 ರಿಂದ 43 ರೂ. ವರೆಗೆ ಜಿಗಿತ ಕಂಡಿದೆ ಎಂದು ಯಶವಂತಪುರ ಮಾರುಕಟ್ಟೆಯ ಬೆಳೆಕಾಳು ಪದಾರ್ಥಗಳ ಹೋಲ್‌ ಸೇಲ್‌ ವ್ಯಾಪಾರಿ ನೀಲಾದ್ರಿ ಎಂಟರ್‌ ಪ್ರೈಸಸ್‌ ಮಾಲೀಕ ಸಂದೇಶ್‌ ಹೇಳುತ್ತಾರೆ.

ಇದನ್ನೂ ಓದಿ:- ದೇಶದ ದಿಕ್ಕು ಬದಲಿಸಿದ್ದು ಅಂಬೇಡ್ಕರ್

ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ಬೆಲೆಯಲ್ಲೂ ಹೆಚ್ಚಳವಾಗಿದೆ. ಯಶವಂತಪುರ ಮಾರುಕಟ್ಟೆಯಲ್ಲಿ ಈ ಹಿಂದೆ ಕ್ವಿಂಟಲ್‌ಗೆ 25 ಸಾವಿರ ರೂ. ದರ ಇದ್ದ ಉತ್ತಮ ಗುಣಮಟ್ಟದ ಬ್ಯಾಡಗಿ ಮೆಣಸಿನ ಕಾಯಿ ಇದೀಗ 27 ರಿಂದ 30 ಸಾವಿರ ರೂ. ವರೆಗೂ ಏರಿಕೆಯಾಗಿದೆ. 12 ಸಾವಿರ ರೂ. ಇದ್ದ ಗುಂಟೂರು ಮೆಣಸಿನಕಾಯಿ 15 ಸಾವಿರ ರೂ. ವರೆಗೂ ತಲುಪಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮೆಣಸಿನ ಬೆಳೆ ಹಾಳಾಗಿದೆ. ಜತೆಗೆ ಇಳುವರಿ ಕೂಡ ಕಡಿಮೆ ಆಗಿದೆ. ಆ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಯಶವಂತಪುರ ಎಪಿಎಂಸಿಯ ಮೆಣಸಿನಕಾಯಿ ವ್ಯಾಪಾರಿ ಆನಂದ್‌ ಹೇಳುತ್ತಾರೆ.

ಬಾಸುಮತಿ ಅಕ್ಕಿ ಬೆಲೆ ಏರಿಕೆ

Advertisement

ಬಿರಿಯಾನಿ, ಪಲಾವ್‌ಗೆ ಬಳಕೆ ಮಾಡುವ ಬಾಸುಮತಿ ಅಕ್ಕಿ (ಸ್ಟೀಮ್‌ ರೈಸ್‌)ಬೆಲೆಯಲ್ಲಿ 5 ರಿಂದ 10 ರೂ. ಹೆಚ್ಚಳವಾಗಿದೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ಹಿಂದೆ ಬಾಸುಮತಿ ಅಕ್ಕಿ ಕೆ.ಜಿಗೆ 80 ರೂ.ಗೆ ಖರೀದಿ ಆಗುತ್ತಿತ್ತು. ಆದರೆ ಈಗ 90 ರೂ. ಆಗಿದೆ. ಹರಿಯಾಣ ಮತ್ತು ಪಂಜಾಬ್‌ ರಾಜ್ಯಗಳಿಂದ ಬಾಸುಮತಿ ರೈಸ್‌ ಬೆಂಗಳೂರಿಗೆ ಪೂರೈಕೆ ಆಗುತ್ತದೆ. ಆದರೆ ಮಳೆಯಿಂದಾಗಿ ಆ ಭಾಗಗಳಲ್ಲಿ ಕೊಯ್ಲು ತಡವಾಗಿದೆ.

ಅಕ್ಕಿ ದಾಸ್ತಾನು ಇಲ್ಲದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎಂದು ಎಫ್ಕೆಸಿಸಿಐನ ಎಪಿಎಂಸಿ ಸಮಿತಿಯ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ತಿಳಿಸಿದ್ದಾರೆ. ಬಾಸುಮತಿ ಅಕ್ಕಿ ಬಿಟ್ಟರೆ ಉಳಿದ ಅಕ್ಕಿಗಳ ಬೆಲೆಯಲ್ಲಿ ಅಷ್ಟೊಂದು ರೀತಿಯ ವ್ಯತ್ಯಾಸವಾಗಿಲ್ಲ. ವಿಮಾನ ವೆಚ್ಚ ಮತ್ತು ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲವೇ ಕೆಲವು ಅಕ್ಕಿಗಳ ಬೆಲೆಯಲ್ಲಿ 4ರಿಂದ 10ರೂ. ವರೆಗೂ ಏರಿಕೆ ಕಂಡು ಬಂದಿದೆ. ಆದರೆ ಸ್ಥಳೀಯ ಅಕ್ಕಿಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next