ವಡೋದರದ ಲೋಕಲ್ ಮೈದಾನಗಳಲ್ಲಿ ಬ್ಯಾಟ್ ಬೀಸುತ್ತಿದ್ದ ಆ ಸಣಕಲು ದೇಹದ ಹುಡುಗ ಮುಂದೆ ಟೀಂ ಇಂಡಿಯಾಗೆ ಆಡುತ್ತಾನೆ ಎಂದು ಬಹುಶಃ ಆತನೂ ನಂಬಿರಲಿಕ್ಕಿಲ್ಲ. ಬೆಳಗ್ಗೆ ಮೈದಾನಕ್ಕೆ ಅಭ್ಯಾಸಕ್ಕೆಂದು ಸಹೋದರನ ಜತೆ ಹೋದರೆ ಮತ್ತೆ ಬರುವುದು ಕತ್ತಲಾದ ಮೇಲೆಯೇ. ಮೈದಾನದ ಮೂಲೆಯಲ್ಲಿ ಬೇಯಿಸಿ ತಿನ್ನುತ್ತಿದ್ದ ಐದು ರೂಪಾಯಿಯ ಮ್ಯಾಗಿಯೇ ಇಬ್ಬರ ಊಟ. ಅಪ್ಪ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಕಾರಣ ಮೈದಾನದಿಂದ ಹೊರಗೆ ಹೋದರೆ ಸಾಲಗಾರರ ಕಾಟ.. ಹೀಗೆ ಸಂಕಷ್ಟಗಳ ಬೌನ್ಸರ್ ಗಳಿಗೆ ಪುಲ್ ಶಾಟ್ ಹೊಡೆದು ಸಾಧನೆಯ ಶಿಖರ ಏರಿದವ ಹಾರ್ದಿಕ್ ಹಿಮಾಂಶು ಪಾಂಡ್ಯ.
ಶನಿವಾರ ಬ್ರಿಜ್ ಟೌನ್ ನ ಕೆನ್ನಿಂಗ್ಸ್ಟನ್ ಮೈದಾನದಲ್ಲಿ ಕೊನೆಯ ಓವರ್ ಎಸೆದು ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದ ಹಾರ್ದಿಕ್ ಪಾಂಡ್ಯ ಗಳಗಳನೆ ಅಳುತ್ತಿದ್ದ. ಆತನ ಕಣ್ಣಿಂದ ಹೊರಡುತ್ತಿದ್ದ ಪ್ರತಿಯೊಂದು ಹನಿಯು ಆತನ ಎದೆಯಲ್ಲಿ ಹೂತಿದ್ದ ನೋವಿನ ಒಂದೊಂದೇ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿತ್ತು.
ಐಪಿಎಲ್ ನ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಮೂಲಕ ಟೀಂ ಇಂಡಿಯಾ ಪ್ರವೇಶ, ಹಣ, ಸಂಪತ್ತು ಎಲ್ಲವನ್ನೂ ಅನುಭವಿಸಿದ ಹಾರ್ದಿಕ್ ಪಾಂಡ್ಯಗೆ ಮುಂದೆ ಅದೇ ಮುಂಬೈ ಇಂಡಿಯನ್ಸ್ ಕಾರಣದಿಂದ ಚಪ್ರಿ ಎಂಬ ಪಟ್ಟವೂ ಸಿಕ್ಕಿತ್ತು. ಕಾರಣ 2024ರ ಐಪಿಎಲ್ ಗೆ ಮೊದಲು ಹಾರ್ದಿಕ್ ಪಾಂಡ್ಯ ಅವರು ಅಚ್ಚರಿಯ ರೀತಿಯಲ್ಲಿ ತಾನು ನಾಯಕನಾಗಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ಸೇರಿದ್ದು. ಅಷ್ಟೇ ಅಲ್ಲದೆ ಮುಂದೆ ಕೆಲವೇ ದಿನಗಳಲ್ಲಿ ಯಶಸ್ವಿ ನಾಯಕ ರೋಹಿತ್ ಶರ್ಮಾ ಇರುತ್ತಲೇ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿತ್ತು. ಇದು ಗಾಯದ ಮೇಲೆ ಉಪ್ಪು ಸುರಿದಂತೆ ಆಗಿತ್ತು.
ಭಾರತದಲ್ಲಿ ಕ್ರಿಕೆಟ್ ಎನ್ನುವುದು ಕ್ರೀಡೆಗೂ ಮೀರಿದ ಒಂದು ಭಾವನಾತ್ಮಕತೆ. ಇಲ್ಲಿ ಜನರೊಂದಿಗೆ ಕ್ರಿಕೆಟಿಗರೊಂದಿಗೆ ಭಾವುಕ ಬೆಸುಗೆ ಇರುತ್ತದೆ. ತಮ್ಮ ನೆಚ್ಚಿನ ಆಟಗಾರನ ವಿರುದ್ದದ ಒಂದು ಸೊಲ್ಲು ಕೂಡಾ ಅವರಿಗೆ ಸಹಿಸಲು ಸಾಧ್ಯವಾಗದು. ಈ ಬಾರಿಯ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕ ಹಾರ್ದಿಕ್ ಫೀಲ್ಡಿಂಗ್ ಮಾಡಲು ಬೌಂಡರಿ ಲೈನ್ ಗೆ ಕಳುಹಿಸಿದ್ದು ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗಿರಲಿಲ್ಲ.
ಹಾರ್ದಿಕ್ ಟಾಸ್ ಗೆ ಬಂದಾಗ, ಬ್ಯಾಟಿಂಗ್ ಗೆ ಬಂದಾಗೆಲ್ಲಾ ರೋಹಿತ್ ರೋಹಿತ್ ಎಂಬ ಕೂಗಾಟ ಜೋರಾಗಿ ಕೇಳಿಬರುತ್ತಿತ್ತು. ಇದೇ ವೇಳೆಗೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ, ಮೂರು ಬಣಗಳಿವೆ ಎಂಬ ಸುದ್ದಿಗಳು ಬರುತ್ತಿದ್ದವು. ಯಶಸ್ವಿ ನಾಯಕ, ಮುಂದಿನ ಭಾರತ ತಂಡದ ಮುಂದಿನ ನಾಯಕ, ಕಪಿಲ್ ದೇವ್ ಬಳಿಕ ಭಾರತ ಕಂಡ ಶ್ರೇಷ್ಠ ಆಲ್ ರೌಂಡರ್ ಎಂದೆಲ್ಲಾ ಕಿರೀಟವಿಟ್ಟು ಹೊತ್ತು ತಿರುಗಿದ್ದ ಅದೇ ಅಭಿಮಾನಿಗಳು ಎರಡು ತಿಂಗಳ ಕಾಲ ಹಾರ್ದಿಕ್ ಅವರನ್ನು ತಲೆ ಎತ್ತದಂತೆ ಮಾಡಿಸಿದ್ದರು. ಆದರೂ ಹಾರ್ದಿಕ್ ಒಂದೇ ಒಂದು ಮಾತು ಬಹಿರಂಗವಾಗಿ ಆಡಿರಲಿಲ್ಲ! ಆದರೆ ಹೋಟೆಲ್ ಕೊಠಡಿಯ ಗೋಡೆಗಳು ಅದೆಷ್ಟು ಬಾರಿ ಈ ಹುಡುಗನ ಕಣ್ಣೀರಿಗೆ ಕಣ್ಣಾಗಿದ್ದವೋ… ಹಾರ್ದಿಕ್ ಒಬ್ಬರಿಗೆ ಗೊತ್ತು!
ಐಪಿಎಲ್ ಬಳಿಕ ವಿಶ್ವಕಪ್ ತಂಡಕ್ಕೆ ಉಪ ನಾಯಕನಾಗಿ ಆಯ್ಕೆಯಾದಾಗ ಮರುಗಿದವರೆಷ್ಟು, ಯಾಕೆ ಸುಮ್ಮನೆ ಆತನಿಗೆ ಅವಕಾಶ ನೀಡುತ್ತೀರಿ ಎಂದು ಹೇಳಿದವರೆಷ್ಟೋ. ಇದೇ ವೇಳೆ ಪ್ರೀತಿಸಿ ಮದುವೆಯಾಗಿದ್ದ ಮಡದಿ ಜೊತೆಗೆ ಹಾರ್ದಿಕ್ ಸಂಬಂಧ ಸರಿ ಇಲ್ಲವಂತೆ ಎನ್ನುವ ವರದಿಗಳು! ಸುಮಾರು ಮೂರು ತಿಂಗಳು ಯಾವುದೂ ಹಿಮಾಂಶು ಪಾಂಡ್ಯರ ಕಿರಿಯ ಪುತ್ರ ಅಂದುಕೊಂಡಂತೆ ಆಗಲೇ ಇಲ್ಲ.
ಆದರೆ ಈಗ ಎಲ್ಲವೂ ಬದಲಾಗಿದೆ. ಎಲ್ಲವನ್ನೂ ವಿಷಕಂಠನಂತೆ ನುಂಗಿಕೊಂಡ ಹಾರ್ದಿಕ್ ಈಗ ಮತ್ತೆ ದೇಶದ ಕಣ್ಮಣಿಯಾಗಿದ್ದಾನೆ. ಇಡೀ ದೇಶವೇ ಕನಸು ಕಣ್ಣಿನೊಂದಿಗೆ ನೋಡುತ್ತಿದ್ದ ಆ ಕೊನೆಯ ಓವರ್ ಎಸೆಯುವ ವೇಳೆ ಹಾರ್ದಿಕ್ ತಲೆಯಲ್ಲಿ ಏನು ಓಡಿರಬಹುದು! 20ನೇ ಓವರ್ ನ ಕೊನೆಯ ಚೆಂಡು ಎಸೆಯಲು ಓಡಿ ಬರುತ್ತಿರುವ ವೇಳೆಗೆ ಅಂದು ತಿನ್ನುತ್ತಿದ್ದ ಮ್ಯಾಗಿ, 400 ರೂ ಹಣಕ್ಕಾಗಿ ಟೂರ್ನಮೆಂಟ್ ನಲ್ಲಿ ಆಡುತ್ತಿದ್ದ ಆ ದಿನಗಳು, ರೋಹಿತ್ ರೋಹಿತ್ ಎನ್ನುತ್ತಿದ್ದ ಆ ವಾಂಖೆಡೆ ಸ್ಟೇಡಿಯಂ…. ಎಷ್ಟೊಂದು ಚಿತ್ರಗಳು ಕಣ್ಣಮುಂದೆ ಸಾಗಿರಬಹುದು. ಬಹುಶಃ ಇಷ್ಟೆಲ್ಲಾ ಭಾರ ತಡೆಯಲಾರದೆ ಕಣ್ಣ ಆಣೆಕಟ್ಟು ಒಡೆದು ಧಾರಕಾರವಾಗಿ ಸುರಿದಿರಬೇಕು.
“ಒಬ್ಬ ವ್ಯಕ್ತಿಯಾಗಿ ನನ್ನ ಬಗ್ಗೆ 1% ಕೂಡಾ ತಿಳಿಯದ ಜನರು ಬಹಳಷ್ಟು ಮಾತನಾಡಿದ್ದಾರೆ. ಜನರು ಮಾತನಾಡುತ್ತಾರೆ, ಅದೇನು ಸಮಸ್ಯೆಯಲ್ಲ ನನಗೆ, ಆದರೆ ಎಂದೂ ಮಾತಿನಿಂದ ಪ್ರತಿಕ್ರಿಯಿ ನೀಡುವುದಕ್ಕಿಂತ ಸಂದರ್ಭಗಳು ಉತ್ತರಿಸುತ್ತವೆ ಎಂದು ನಾನು ಯಾವಾಗಲೂ ನಂಬಿದವ. ಕಷ್ಟದ ಸಮಯಗಳು ಶಾಶ್ವತವಾಗಿ ಉಳಿಯುವುದಿಲ್ಲ.” ಎಂದು ಹಾರ್ದಿಕ್ ಪಾಂಡ್ಯ ಫೈನಲ್ ಪಂದ್ಯದ ಬಳಿಕ ಹೇಳಿದರು.
“ಅಭಿಮಾನಿಗಳು ಮತ್ತು ಎಲ್ಲರೂ ಸೌಮ್ಯತೆಯನ್ನು ಕಲಿಯುವ ಸಮಯ ಇದು. ಅದೇ ಜನರು ಈಗ ಸಂತೋಷ ಪಡುತ್ತಾರೆ ಎಂದು ನನಗೆ ಗೊತ್ತಿದೆ” ಎಂದ ಹಾರ್ದಿಕ್ ಪಾಂಡ್ಯ ಕಣ್ಣುಗಳಲ್ಲಿ ಸಮಾಧಾನ ಕಾಂತಿಯೊಂದಿತ್ತು.
ಕೀರ್ತನ್ ಶೆಟ್ಟಿ ಬೋಳ