Advertisement

ನೀರಿಗಾಗಿ ಕಲ್ಲೂರು ಗ್ರಾಮಸ್ಥರ ಪರದಾಟ

01:25 PM Mar 20, 2020 | Naveen |

ರಿಪ್ಪನ್‌ಪೇಟೆ: ಕಳೆದ ಹದಿನೆಂಟು ವರ್ಷಗಳ ಹಿಂದೆ ಗ್ರಾಮಸ್ಥರಿಗೆ ನೀರಿನ ಬವಣೆ ನೀಗಿಸಲು ಸರಕಾರದಿಂದ ಕೊರೆಸಲಾದ ಬೋರ್‌ ವೆಲ್‌ ಶಿಥಿಲಗೊಂಡು ನೀರೆತ್ತಲು ಅಳವಡಿಸಲಾಗಿದ್ದ ಪಂಪ್‌ ಮೋಟಾರ್‌ ಹಾಳಾದ ಪರಿಣಾಮ ಕಲ್ಲೂರು ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.

Advertisement

ಗ್ರಾಮಸ್ಥರ ಬೇಡಿಕೆಯಂತೆ 2005-06 ನೇ ಸಾಲಿನಲ್ಲಿ ಸ್ವಜಲಧಾರ ಯೋಜನೆಯಡಿ ಅನುಷ್ಠಾನಗೊಂಡ ನೀರು ಸಬರಾಜು ಯೋಜನೆ ಯಾವುದೇ ತೊಂದರೆಯಿಲ್ಲದೆ ನಿರಾತಂಕವಾಗಿ ನಡೆಯುತ್ತಿತ್ತು. ಕಳೆದ ಮುಂಗಾರಿನಲ್ಲಿ ಸುರಿದ ಭಾರೀ ಮಳೆಯಿಂದ ಬೋರ್‌ವೆಲ್‌ಗೆ ನೀರು ನುಗ್ಗಿತ್ತು. ನೀರಿನ ಜೊತೆಗೆ ಅಪಾರ ಪ್ರಮಾಣದ ಮಣ್ಣು ಸಹಿತ ಕೊಳವೆಯೊಳಗೆ ಸೇರಿತ್ತು. ಪರಿಣಾಮ ಕೆಲದಿನಗಳಲ್ಲಿಯೇ ನೀರೆತ್ತುವ ಮೋಟಾರ್‌ ಕೆಟ್ಟು ನಿಂತಿತ್ತು. ಈ ಸಂದರ್ಭದಲ್ಲಿ ಗ್ರಾಮಾಡಳಿತ ಹಾಗೂ ಸರ್ಕಾರಕ್ಕೆ ನೀರಿಗಾಗಿ ಮನವಿ ಮಾಡಿದ ಗ್ರಾಮಸ್ಥರು ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌ನಿಂದ ಕೆಲ ತಿಂಗಳಿನವರೆಗೆ ಸಂಪರ್ಕ ಕಲ್ಪಿಸಿಕೊಂಡು ನೀರು ಪಡೆಯುತ್ತಿದ್ದರು.

ಬಿರು ಬೇಸಿಗೆ ಹೆಚ್ಚಾದಂತೆಲ್ಲಾ ರೈತರ ಅಡಕೆ ಬೆಳೆಗೆ ನೀರು ಹೆಚ್ಚು ಬಿಡಬೇಕಾದ ಅನಿವಾರ್ಯತೆಯಿಂದ ಸಾರ್ವಜನಿಕರಿಗೆ ನೀರು ಕೊಡುತ್ತಿದ್ದ ರೈತ ನೀರು ನೀಡುತ್ತಿದ್ದುದನ್ನು ಸ್ಥಗಿತಗೊಳಿಸಿದ್ದಾರೆ. ಈ ಕಾರಣದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದೊಂದೇ ಬೋರಿನಿಂದ ಕಲ್ಲೂರು ಹಾಗೂ ಮಜರೆ ಗ್ರಾಮಗಳಾದ ಯಲಕ್ಕಿಕೊಪ್ಪ, ತೊರೆಗದ್ದೆ, ಬಿಕ್ಕಳ್ಳಿದಿಂಬ, ಹರಿಜನ ಕಾಲೋನಿ ಸೇರಿದಂತೆ ಸುಮಾರು 180 ಮನೆಗಳಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಈಗ ಸಂಪರ್ಕ ಕಡಿತಗೊಂಡ ಪರಿಣಾಮ ಮಹಿಳೆಯರಾದಿಯಾಗಿ ಜನ- ಜಾನುವಾರುಗಳು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಗ್ರಾಮಸ್ಥರು ಹಲವು ಬಾರಿ ಆಡಳಿತ ವ್ಯವಸ್ಥೆಯ ಗಮನಕ್ಕೆ ತಂದರೂ ಅ ಧಿಕಾರಿಗಳ ಬೇಜವಾಬ್ದಾರಿಯಿಂದ ಸಮರ್ಪಕ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲವೆಂಬುದು ಗ್ರಾಮಸ್ಥರ ಆರೋಪ. ನೀರಿನ ಸಮಸ್ಯೆಯ ಗಂಭೀರತೆಯನ್ನು ಸರಕಾರದ ಗಮನಕ್ಕೆ ತರಲು ಗ್ರಾಪಂ ಎದುರು ಧರಣಿ ಪ್ರತಿಭಟನೆಯನ್ನು ನಡೆಸಿದರು.

ಆಡಳಿತಗಾರರ ಭರವಸೆಯಂತೆ ತುರ್ತು ಅಗತ್ಯವಾಗಿ ನೂತನ ಬೋರ್‌ವೆಲ್‌ ಕೊರೆಸಿದರೂ ನೀರು ದೊರೆಯದೆ ಇದ್ದುದು ಜನರ ಆತಂಕಕ್ಕೆ ಕಾರಣವಾಗಿದೆ. ಶೀಘ್ರವಾಗಿ ಪರ್ಯಾಯ ವ್ಯವಸ್ಥೆಯೊಂದಿಗೆ ಗ್ರಾಮದ ಜನತೆಗೆ ಸಮಗ್ರ ನೀರು ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

„ನಾಗೇಶ್‌ ಎಸ್‌. ನಾಯಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next