Advertisement
ತಿ.ನರಸೀಪುರದ ಹೆಳವರಹುಂಡಿ ಗ್ರಾಮದಲ್ಲಿ ಮಾತನಾಡಿದ ಪ್ರಿಯಾಂಕಾ, ರಾಜ್ಯ ಬಿಜೆಪಿ ಸರಕಾರ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ, ಈ ಹಣದಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತು, ಆಸ್ಪತ್ರೆಗಳನ್ನು ನಿರ್ಮಿಸಬಹುದಿತ್ತು, 750 ಕಿ.ಮೀ. ಮೆಟ್ರೋ ರೈಲು ಹಳಿಯನ್ನು ನಿರ್ಮಿಸಬಹುದಿತ್ತು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಿತ್ತು ಎಂದು ಹೇಳಿದರು.
Related Articles
Advertisement
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ, ಈ ರಾಜ್ಯದ ನಂದಿನಿಯನ್ನು ದುರ್ಬಲಗೊಳಿಸಿ ಗುಜರಾತ್‌ನ ಅಮುಲ್ ಸಂಸ್ಥೆಯ ಮಾರಾಟ ಹೆಚ್ಚಳ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಹಾಲಿನ ಉತ್ಪಾದನೆ ಹೆಚ್ಚಾಗಿ ಆ ಹಾಲನ್ನು ಸರಕಾರಿ ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ನಂದಿನಿ ಹಾಲಿನ ಕೊರತೆಯಿದೆ ಎಂಬ ಕಾರಣ ನೀಡುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಉತ್ಪಾದನೆಯಾಗುತ್ತಿದ್ದ ಹಾಲು ಈಗ ಎಲ್ಲಿ ಹೋಗುತ್ತಿದೆ ಎಂದು ಕಿಡಿಕಾರಿದರು.
ಗಿರಿಜನ ಮಹಿಳೆಯರೊಂದಿಗೆ ಪ್ರಿಯಾಂಕಾ ಸಂವಾದ
ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ, ಬಿಡಲಿ. ನಿಮ್ಮ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಿಮ್ಮ ಹೆಸರು ಮತ್ತು ಊರಿನ ಹೆಸರು ಬರೆದುಕೊಡಿ.
-ಹೀಗೆಂದು ಹೇಳಿದ ಪ್ರಿಯಾಂಕಾ ವಾದ್ರಾ ಬೇಡಗಂಪಣ ಮಹಿಳೆಯಿಂದ ಮಾಹಿತಿ ಪಡೆದರು. ಪಟ್ಟಣದಲ್ಲಿ ಚುನಾವಣ ಪ್ರಚಾರ ಸಭೆಯ ಬಳಿಕ ಬೇಡಗಂಪಣ ಮತ್ತು ಗಿರಿಜನ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದದಲ್ಲಿ ಮಲೆ ಮಹದೇಶ್ವರ ಬೆಟ್ಟ ಸಮೀಪದ ಕೊಕ್ಕಬರೆ ಗ್ರಾಮದ ಬೊಮ್ಮಮ್ಮ ಮಾತನಾಡಿ, ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲ, ರಸ್ತೆಯಿಲ್ಲ, ಗ್ರಾಮದಲ್ಲಿ 5ನೇ ತರಗತಿವರೆಗೆ ಮಾತ್ರ ಶಾಲೆಯಿದ್ದು, ಬಳಿಕ ಬೇರೆಡೆಗೆ ಕಳುಹಿಸಬೇಕಿದೆ. ನಮ್ಮ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರಿಯಾಂಕಾ ವಾದ್ರ, ನಮ್ಮ ಸರಕಾರ ಬರಲಿ ಬಿಡಲಿ, ಗ್ರಾಮಕ್ಕೆ ನಮ್ಮ ಜನರನ್ನು ಕಳುಹಿಸಿಕೊಟ್ಟು, ಏನಾಗಬೇಕೋ ಅದನ್ನೆಲ್ಲಾ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಒಡೆಯರಪಾಳ್ಯ ಸಮೀಪದ ಹೊಸಪೋಡು ಗ್ರಾಮದ ಗಿರಿಜನ ಮಹಿಳೆ ತಿರುಮಮ್ಮ ಮಾತನಾಡಿ, ನಮ್ಮ ಗ್ರಾಮಕ್ಕೆ ಸಮರ್ಪಕವಾದ ರಸ್ತೆಯಿಲ್ಲ. ಶಾಲೆಯಿಲ್ಲ ಎಂದು ದೂರಿದರು. ನಾವು ಆದಿವಾಸಿ ಸೋಲಿಗರೆಲ್ಲ ಇಂದಿರಾಗಾಂಧಿ ಮತ್ತು ಅವರ ಪಕ್ಷವನ್ನೇ ಬೆಂಬಲಿಸುವುದು ಎಂದಾಗ ವೇದಿಕೆಯಿಂದ ಕೆಳಗಿಳಿದ ಪ್ರಿಯಾಂಕಾ ವಾದ್ರಾ, ತಿರುಮಮ್ಮ ಅವರನ್ನು ಅಪ್ಪಿಕೊಂಡರು. ನೀವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುವುದು. ನೀವೂ ಸಹ ಮುಂದುವರೆಯಬಹುದು ಎಂದು ನಗುಮೊಗದಿಂದ ಹೇಳಿದರು.ನಾನು ಈ ಹಿಂದೆ ಹುತ್ತೂರು ಗ್ರಾಪಂ ಸದಸ್ಯೆಯಾಗಿದ್ದೆ. ಇದೀಗ ಪ್ರಿಯಾಂಕ ಅವರು ನನ್ನ ಬಳಿ ಮಾತನಾಡಿ ನನ್ನನ್ನು ತಬ್ಬಿಕೊಂಡಿರುವುದು ಸಂತಸವಾಗಿದೆ ಎಂದು ತಿರುಮಮ್ಮ ಹರ್ಷ ವ್ಯಕ್ತಪಡಿಸಿದರು.