Advertisement

ಸಾರ್ವಜನಿಕ ಆಸ್ತಿ ನಷ್ಟಕ್ಕೆ ಗಲಭೆ ಮಾಡಿದವರೇ ಹೊಣೆ

06:10 AM Nov 29, 2017 | Harsha Rao |

ಹೊಸದಿಲ್ಲಿ: ಗಲಭೆ, ಮುಷ್ಕರ, ಬಂದ್‌ಗೆ ಕರೆ ನೀಡಿ, ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವವರೇ ಎಚ್ಚರ! ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವುಂಟುಮಾಡಿ, ಯಾರಧ್ದೋ ಜೀವಗಳ ಜತೆ ಚೆಲ್ಲಾಟವಾಡುವವರಿಗೆ ಸರಿಯಾದ ಪಾಠ ಕಲಿಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ.

Advertisement

ಗಲಭೆ, ಮುಷ್ಕರಗಳ ಸಂದರ್ಭಗಳಲ್ಲಿ ಆಗುವ ಸಾರ್ವಜನಿಕ ಅಥವಾ ಖಾಸಗಿ ಆಸ್ತಿ ಪಾಸ್ತಿ ನಷ್ಟವನ್ನು ಅಂದಾಜು ಮಾಡಲು ಹಾಗೂ ಇಂಥ ಸಂದರ್ಭಗಳಲ್ಲಿ ಸಾವಿಗೀಡಾದವರಿಗೆ, ಗಾಯಗೊಂಡವರಿಗೆ ಪರಿಹಾರ ನಿಗದಿಗೊಳಿಸಲು ಪ್ರತಿ ರಾಜ್ಯದಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳ ವಾರ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಸಂಘಟನೆಗಳು, ಸದಸ್ಯರನ್ನೇ ತಪ್ಪಿಗೆ ಹೊಣೆಯಾಗಿಸಿ, ಅವರ ವಿರುದ್ಧ ಕ್ರಿಮಿನಲ್‌ ಕ್ರಮ ಜರಗಿಸುವಂತೆಯೂ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

2009ರಲ್ಲಿ ಹಿಂಸಾತ್ಮಕ ಗಲಭೆಗಳ ವಿಚಾರಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕೆಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವು ಇನ್ನೂ ಜಾರಿಗೊಂಡಿಲ್ಲ ಎಂದು ಕೋಶಿ ಜಾಕೋಬ್‌ ಎಂಬ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರುಳ್ಳ ನ್ಯಾಯಪೀಠ, ಕೇಂದ್ರ ಸರಕಾರಕ್ಕೆ ಈ ಸೂಚನೆ ನೀಡಿತು.

ಇಂಥ ನ್ಯಾಯಾಲಯಗಳಲ್ಲಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ನೇಮಿಸಬೇಕು. ಅಲ್ಲದೆ, ಈ ನ್ಯಾಯಾಲಯಗಳು ಆಯಾ ರಾಜ್ಯಗಳ ಹೈಕೋರ್ಟ್‌ಗಳ ಸಲಹೆಗಳ ಮೇರೆಗೆ ಆಸ್ತಿಪಾಸ್ತಿ ನಷ್ಟವನ್ನು ಅಂದಾಜಿಸಿ, ಘಟನೆಯಲ್ಲಿ ಜೀವ ಕಳೆದುಕೊಂಡ, ಅಂಗವಿಕಲರಾದ ದುರ್ದೈವಿಗಳಿಗೆ ಪರಿಹಾರ ನಿಗದಿಗೊಳಿಸಿ ತನ್ನ ಅನಿಸಿಕೆ ಯನ್ನು ಸಂಬಂಧಪಟ್ಟ ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ 
ಹೇಳಿದೆ. ಅಲ್ಲದೆ, ಗಲಭೆಗಳಿಗೆ ಕಾರಣವಾದ ಸಂಘಟನೆಗಳ ನಾಯಕರು, ಸದಸ್ಯರ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಸೂಚಿಸಿದೆ.

ಸಲಹೆ ಸ್ವೀಕಾರ: ವಿಚಾರಣೆ ವೇಳೆ ಸರಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ನ್ಯಾಯಾಲಯದ ಸೂಚನೆಯನ್ನು ಸ್ವಾಗತಿಸಿದರಲ್ಲದೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ಕೇಂದ್ರ ಕಾನೂನು ಸಚಿವಾಲಯದ ಜಾಲತಾಣದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next