Advertisement

ವಿವಿಗಳಲ್ಲಿ ಚರ್ಚೆಗಷ್ಟೇ ಜಾಗ, ಗಲಭೆಗೆ ಅಲ್ಲ!

11:11 AM Mar 03, 2017 | Harsha Rao |

ಕೊಚ್ಚಿ/ಹೊಸದಿಲ್ಲಿ: ವಿಶ್ವವಿದ್ಯಾಲಯಗಳು ಚರ್ಚೆಗಳಿಗಷ್ಟೇ ಜಾಗ ಆಗಬೇಕು. ಗಲಭೆಗೆ ಅಲ್ಲ. ಆದರೆ, ಈಗ ವಿವಿಗಳ ಆವರಣದಲ್ಲಿ ವಿದ್ಯಾರ್ಥಿಗಳು ದೊಂಬಿ ಎಬ್ಬಿಸುತ್ತಿರುವುದನ್ನು ನೋಡಿದರೆ ದುರಂತ ಎನಿಸುತ್ತದೆ’- ಹೀಗೊಂದು ಬೇಸರ ಹೊರಹಾಕಿದ್ದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ. ಈ ಹೇಳಿಕೆಗೆ ಕಾರಣವೂ ಸ್ಪಷ್ಟ. ಇತ್ತೀಚೆಗೆ ದೆಹಲಿ ವಿವಿ ಆವರಣದಲ್ಲಿ ಎಬಿವಿಪಿ ಮತ್ತು ಎಡಪಂಥೀಯ ಎಐಎಸ್‌ಎ ಬೆಂಬಲಿಗರ ನಡುವಿನ ಗಲಭೆ.

Advertisement

ಕೊಚ್ಚಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಣಬ್‌, “ನಮ್ಮ ಪ್ರತಿಷ್ಠಿತ ವಿವಿಗಳು ಸಮಾಜಕ್ಕೆ ಜ್ಞಾನವನ್ನು ಕೊಂಡೊಯ್ಯುವ ವಾಹಕಗಳು. ಈ ದೇಗುಲಗಳಲ್ಲಿ ಸೃಜನಶೀಲತೆ ಮತ್ತು ಒಳ್ಳೆಯ ಆಲೋಚನೆಗಳಷ್ಟೇ ಪ್ರತಿಧ್ವನಿಸಬೇಕು. ಅಭಿವ್ಯಕ್ತಿ ಸ್ವಾತಂತ್ರದಂಥ ಅತ್ಯಮೂಲ್ಯ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಕಾನೂನಿನ ಚೌಕಟ್ಟಿನೊಳಗೆ ನಾವು ಅದನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. 

ಚುನಾವಣೆಯಲ್ಲೂ ಕೌರ್‌!: “ನನ್ನ ತಂದೆಯನ್ನು ಕೊಂದಿದ್ದು ಪಾಕ್‌ ಅಲ್ಲ, ಯುದ್ಧ’ ಎಂದಿದ್ದ ಗುರ್‌ವೆುಹರ್‌ ಕೌರ್‌ ಪ್ರಕರಣ ಈಗ ಉತ್ತರ ಪ್ರದೇಶ ಚುನಾವಣಾ ವೇದಿಕೆಯನ್ನೂ ಏರಿದೆ. “ರಾಷ್ಟ್ರೀಯತೆ ಎನ್ನುವು ಒಳ್ಳೆಯ ಪದ. ಆದರೆ, ಅದನ್ನು ಕೆಟ್ಟದಾಗಿ ಪರಿಗಣಿಸಿರುವುದು ಭಾರತ ಮಾತ್ರ’ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಬೇಸರ ವ್ಯಕ್ತ ಪಡಿಸಿದ್ದಾರೆ.

“ಬಿಹಾರ ವಿಧಾನಸಭೆ ವೇಳೆ ಪ್ರಶಸ್ತಿ ವಾಪ್ಸಿಯನ್ನು ವಿರೋಧ ಪಕ್ಷಗಳು ಸೃಷ್ಟಿಸಿದ್ದವು. ರಾಮ್ಜಾಸ್‌ ಕಾಲೇಜಿನ ಗಲಭೆಯನ್ನು ಮುಂದಿಟ್ಟುಕೊಂಡು ಈಗ ರಾಷ್ಟ್ರೀಯತೆಯ ಚರ್ಚೆಯನ್ನು ಆರ್ಕೆಸ್ಟ್ರಾದಂತೆ ಮಾಡಿಕೊಂಡಿವೆ. ರಾಜಕೀಯ ಧುರೀಣರೇ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕವಾದಿಗಳೊಂದಿಗೆ ಕಮ್ಯುನಿಸ್ಟರೂ ಸೇರಿಕೊಂಡು ವಿವಿಯೊಳಗೆ ದೇಶವಿರೋಧಿ ಘೋಷಣೆ ಕೂಗುತ್ತಿದ್ದಾರೆ. ನೆಹರು, ಇಂದಿರಾ, ರಾಜೀವ್‌ ಗಾಂಧಿ ಅವರಿದ್ದ ಕಾಂಗ್ರೆಸ್‌ ಪಕ್ಷವೇ ಈಗ ಅಂಥವರ ರ್ಯಾಲಿಗಳಿಗೆ ಬೆಂಬಲ ಸೂಚಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಎಬಿವಿಪಿಗೆ ಪರ್ರಿಕರ್‌ ಬೆಂಬಲ: ಕೇಂದ್ರ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ಕೂಡ ಕೌರ್‌ ಪ್ರಕರಣಕ್ಕೆ ಧ್ವನಿಗೂಡಿಸಿದ್ದು, “ನಮಗೂ ಅಭಿವ್ಯಕ್ತಿ ಸ್ವಾತಂತ್ರದಲ್ಲಿ ನಂಬಿಕೆಯಿದೆ. ಆದರೆ, ಅದು ಕಾನೂನಿನ ಚೌಕಟ್ಟಿನೊಳಗೆ ಇರಲು ಬಯಸುತ್ತೇವೆ’ ಎನ್ನುವ ಮೂಲಕ ಎಬಿವಿಪಿಯ ಬೆಂಬಲಕ್ಕೆ ನಿಂತಿದ್ದಾರೆ. 

Advertisement

ಸಚಿವನ ಕ್ಷಮೆಗೆ ಆಗ್ರಹ: ಹರ್ಯಾಣ ವಿಧಾನಸಭೆಯಲ್ಲೂ ಕೌರ್‌ ಪರ ಧ್ವನಿ ಮೊಳಗಿತ್ತು. “ಎಬಿವಿಪಿ ವಿರೋಧಿಗಳೆಲ್ಲ ಪಾಕ್‌ ಮೇಲೆ ಕಾಳಜಿ ಇಟ್ಟುಕೊಂಡವರು. ಅಂಥವರನ್ನು ದೇಶದಿಂದ ಹೊರಗಟ್ಟಬೇಕು’ ಎಂದು ಟ್ವೀಟಿಸಿದ್ದ ಹರ್ಯಾಣ ರಾಜ್ಯ ಸಚಿವ ಅನಿಲ್‌ ವಿಜಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಲೋಕದಳ ಪಕ್ಷದವರು ಪಟ್ಟು ಹಿಡಿದರು.

ಎಬಿವಿಪಿ ವಿರುದ್ಧ ದೂರು
ರಾಮ್‌ಜಾಸ್‌ ಕಾಲೇಜಿನ ಕಾಲೇಜಿನಲ್ಲಿ ಎಬಿವಿಪಿಯಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಇಬ್ಬರು ವಿದ್ಯಾರ್ಥಿಗಳಿಂದ ದೆಹಲಿ ಪೊಲೀಸರು ಹೇಳಿಕೆ ಸಂಗ್ರಹಿಸಿದ್ದಾರೆ. ರಾಮ್ಜಾಸ್‌ ಕಾಲೇಜಿನ ಕ್ಯಾಂಟೀನಿನಲ್ಲಿ ಎಬಿವಿಪಿ ಬೆಂಬಲಿಗರು ನಮ್ಮನ್ನು ಥಳಿಸಿದ್ದು, ಕಲ್ಲಿನಿಂದಲೂ ಹೊಡೆದಿದ್ದಾರೆ ಎಂದು ಆಪಾದಿಸಿದ್ದಾರೆ. ಗಲಭೆ ಸಂಬಂಧ ಒಟ್ಟಾರೆ ಪೊಲೀಸರಿಗೆ 25 ದೂರುಗಳು ಬಂದಿವೆ. ಆದರೆ, ಯಾರು ಕೂಡ ಪೊಲೀಸರಿಂದ ಹಿಂಸಾಚಾರವಾಗಿದೆ ಎಂಬುದನ್ನು ಹೇಳಿಲ್ಲ ಎಂದು ಅಪರಾಧ ಪತ್ತೆ ದಳ ತಿಳಿಸಿದೆ.

ಪೋಸ್ಟರ್‌ ತೆರವಿಗೆ ಆದೇಶ
ದಿಲ್ಲಿಯ ಜವಾಹರ್‌ಲಾಲ್‌ ನೆಹರೂ ವಿವಿ ಆವರಣದಲ್ಲಿ ಕಾಶ್ಮೀರಕ್ಕೆ ಸ್ವಾತಂತ್ರ ನೀಡಬೇಕು ಎಂಬ ಪೋಸ್ಟರ್‌ ತೆರವುಗೊಳಿಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಡೆಮಾಕ್ರಟಿಕ್‌ ಸ್ಟೂಡೆಂಟ್‌ ಯೂನಿಯನ್‌ ಎಂಬ ವಿದ್ಯಾರ್ಥಿ ಸಂಘಟನೆ ಅದನ್ನು ಅಂಟಿಸಿತ್ತು ಎಂದು ಹೇಳಲಾಗಿದೆ. ಸ್ಕೂಲ್‌ ಆಫ್ ಸೋಶಿಯಲ್‌ ಸೈನ್ಸ್‌ನ ಹೊಸ ಬ್ಲಾಕ್‌ ಬಳಿ ಈ ಪೋಸ್ಟರ್‌ ಇದ್ದುದನ್ನು ವಿದ್ಯಾರ್ಥಿಗಳು ವಿಭಾಗ ಮುಖ್ಯಸ್ಥರ ಗಮನಕ್ಕೆ ತಂದರು. ವಿವಿ ಆಡಳಿತ ಮಂಡಳಿ ಅದನ್ನು ತೆರವುಗೊಳಿಸುವಂತೆ ಆದೇಶ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next