ಬೆಂಗಳೂರು: ಹನ್ನೊಂದು ವರ್ಷಗಳ ಹಿಂದೆ ಇಂದಿರಾನಗದಲ್ಲಿನ ಯುಟಿವಿ ಕಚೇರಿಗೆ ನುಗ್ಗಿ ಹಫ್ತಾ ನೀಡುವಂತೆ ಬೆದರಿಕೆ ಹಾಕಿ ದಾಂಧಲೆ ಮಾಡಿದ ಆರೋಪ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2009ರ ಜುಲೈ 11ರಂದು ಇಂದಿರಾ ನಗರ ಸಿಎಂಎಚ್ ರಸ್ತೆಯಲ್ಲಿನ ಯುಟಿವಿ ಕಚೇರಿಗೆ ನುಗ್ಗಿದ್ದ ಪೂಜಾರಿ ಸಹಚರರು ಪೀಠೊಪಕರಣಗಳನ್ನು ಧ್ವಂಸಗೊಳಿಸಿ ಅಲ್ಲಿನ ಇಬ್ಬರು ಉದ್ಯೋಗಿಗಳ ಮೇಲೆ ಹಲ್ಲೆ ಮಾಡಿದ್ದರು. ಜತೆಗೆ ರವಿ ಪೂಜಾರಿಗೆ ಕರೆ ಮಾಡಬೇಕು ಎಂದು ನಿಮ್ಮ ಮಾಲೀಕರಿಗೆ ತಿಳಿಸಿ ಎಂದು ಫೋನ್ ನಂಬರ್ ಇಟ್ಟು ಹೋಗಿ ಬೆದರಿಕೆ ಹಾಕಿದ್ದರು.
ಈ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರವಿ ಪೂಜಾರಿ ಕೂಡ ಆರೋಪಿಯಾಗಿದ್ದ.ಆತನ ಸಹಚರರನ್ನು ಪೊಲೀಸರು ಆಗಲೇ ಬಂಧಿಸಿದ್ದರು. ಸೆನೆಗಲ್ ನಿಂದ ರವಿ ಪೂಜಾರಿಯನ್ನು ಕರೆ ತಂದ ಬಳಿಕ ಒಂದೊಂದೇ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಇದೀಗ ಯುಟಿವಿ ಕಚೇರಿ ಮೇಲಿನ ದಾಳಿ ಹಫ್ತಾಗೆ ಬೇಡಿಕೆ ಇಟ್ಟ ಆರೋಪ ಸಂಬಂಧದ ಕೇಸ್ ನಲ್ಲಿಯೂ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ನನಗೂ ಹಫ್ತಾ ಸಿಗಬೇಕು ಎಂದಿದ್ದ ರವಿ ಪೂಜಾರಿ!: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಉದ್ಯಮಿ ರೋನಿ ಸೂðವಾಲ ಹತ್ತಿರವಾಗಿದ್ದರು. ಇಬ್ರಾಹಿಂಗೆ ಮಾತ್ರ ಹಫ್ತಾ ನೀಡುತ್ತಿದ್ದರು ಎಂದು ತಿಳಿದಿದ್ದ ರವಿಪೂಜಾರಿ, ತನಗೂ ಹಫ್ತಾ ನೀಡಬೇಕು ಎಂದು ಸಹಚರರ ಮೂಲಕ ರೋನಿ ಸೂ ವಾಲನ ಮಾಲೀಕತ್ವದ ಯುಟಿವಿ ಕಚೇರಿಗೆ ನುಗ್ಗಿಸಿ ಬೆದರಿಕೆ ಹಾಕಿಸಿದ್ದ.
ಜತಗೆ ಸಹಚರರ ಮೂಲಕ ಮುಂಬೈನಲ್ಲಿನ ಯುಟಿವಿ ಕಚೇರಿಗೂ ಬೆದರಿಕೆ ಪತ್ರ ಕರೆ ಮಾಡಿಸಿದ ತಿಂಗಳಲ್ಲೇ ದಾಂಧಲೆ ಮಾಡಿಸಿದ್ದ ಎಂದು ಅಧಿಕಾರಿ ಹೇಳಿದರು. ರವಿ ಪೂಜಾರಿ ವಿರುದ್ಧ ಈಗಾಗಲೇ ತಿಲಕ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶಬನಮ್ ಡೆವಲಪರ್ಸ್ ಜೋಡಿ ಕೊಲೆ, ವೈಟ್ ಫೀಲ್ಡ್ ವ್ಯಾಪ್ತಿಯ ಸುಲಿಗೆ ಪ್ರಕರಣಗಳ ತನಿಖೆ ಮುಗಿಸಿರುವ ಸಿಸಿಬಿ ಪೊಲೀಸರು ಎರಡೂ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.