ಮೇಲಕ್ಕೆಸೆದ ಎಲ್ಲ ವಸ್ತುಗಳು ಕೆಳಕ್ಕೆ ಬೀಳಲು ಏನು ಕಾರಣ ಹೇಳಿ?…ಹಾಂ, ಭೂಮಿಯ ಗುರುತ್ವಾಕರ್ಷಣಾ ಶಕ್ತಿಯೇ ಅದಕ್ಕೆ ಕಾರಣ. ಆ ಶಕ್ತಿಗೇ ಚಾಲೆಂಜ್ ಹಾಕಿ, ವಸ್ತುವನ್ನು ಗಾಳಿಯಲ್ಲಿ ಚಲಿಸುವಂತೆ ಮಾಡೋ ಜಾದು ಗೊತ್ತಿದೆಯಾ ನಿಮಗೆ?
ಬೇಕಾಗುವ ವಸ್ತುಗಳು: ರಬ್ಬರ್ ಪೆನ್ಸಿಲ್, ಉಂಗುರ, ಪ್ಲಾಸ್ಟಿಕ್ ಗಮ್ ಟೇಪ್, ಕಪ್ಪು ನೂಲು
ಪ್ರದರ್ಶನ: ಜಾದೂಗಾರ ಕೈಯಲ್ಲಿ ಒಂದು ಪೆನ್ಸಿಲ್ ಹಿಡಿದಿರುತ್ತಾನೆ. ಅದರೊಳಗೆ ಉಂಗುರವಿರುತ್ತದೆ. ಯಾವುದೋ ಮಂತ್ರವನ್ನು ಜಪಿಸುತ್ತಾನೆ. ಆಗ ಪೆನ್ಸಿಲ್‌ನೊಳಗಿದ್ದ ಉಂಗುರ ಮೇಲಕ್ಕೆ ತೇಲುತ್ತದೆ.
ತಯಾರಿ: ಈ ಮ್ಯಾಜಿಕ್‌ನ ರಹಸ್ಯ ಅಡಗಿರುವುದು ಕಪ್ಪು ನೂಲಿನಲ್ಲಿ. ಪ್ಲಾಸ್ಟಿಕ್ ಟೇಪ್‌ನ ಸಹಾಯದಿಂದ ಕಪ್ಪು ನೂಲಿನ ಒಂದು ತುದಿಯನ್ನು ಪೆನ್ಸಿಲ್‌ನ ರಬ್ಬರ್ ಇರುವ ಜಾಗದ ತುಸು ಕೆಳಗೆ ಅಂಟಿಸಿ. ಆ ನೂಲಿನ ಇನ್ನೊಂದು ತುದಿಯನ್ನು ಅಂಗಿಯ ಬಟನ್ ಅಥವಾ ಬೆಲ್ಟ್ನ ತೂತಿಗೆ ನಾಜೂಕಾಗಿ ಸಿಕ್ಕಿಸಿಕೊಳ್ಳಿ. ನೂಲು ತೀರಾ ಉದ್ದ ಇರುವುದು ಬೇಡ. ಪೆನ್ಸಿಲ್‌ಅನ್ನು ಚಿತ್ರದಲ್ಲಿ ತೋರಿಸಿದಂತೆ ಉದ್ದಕ್ಕೆ ಹಿಡಿದು, ಕೈಯನ್ನು ಮುಂಚಾಚಿದಾಗ ಸಿಗುವ ಅಂತರದಷ್ಟೆ ಉದ್ದವಿರಲಿ ನೂಲು.
ಈಗ ಉಂಗುರವನ್ನು ಪೆನ್ಸಿಲ್ ಮತ್ತು ನೂಲಿನ ನಡುವಿಂದ ತೂರಿಸಿ. ಈಗ ಇನ್ನೊಂದು ಕೈಯಿಂದ ನೂಲನ್ನು ಕೆಳಗಿನಿಂದ ಎಳೆದರೆ, ನೂಲು ಬಿಗಿಯಾಗಿ ಉಂಗುರ ಮೇಲಕ್ಕೆ ಚಲಿಸುತ್ತಿದೆಯೆಂದು ಖಾತರಿಪಡಿಸಿಕೊಳ್ಳಿ. ಈಗ ಪ್ರದರ್ಶನ ನೀಡುವ ಸಮಯದಲ್ಲಿ ನೂಲಿನ ಕೆಳತುದಿಯನ್ನು ಬೆಲ್ಟ್ ಅಥವಾ ಅಂಗಿಯ ಗುಂಡಿಗೆ ಕಟ್ಟಿರುವುದರಿಂದ ಯಾವ ಕೈಯಲ್ಲಿ ಪೆನ್ಸಿಲ್ ಹಿಡಿದಿದ್ದೀರೋ, ಅದೇ ಕೈಯನ್ನು ಮುಂದಕ್ಕೆ ಚಾಚಿದಾಗ, ನೂಲು ಬಿಗಿಗೊಂಡು ಉಂಗುರ ಮೇಲಕ್ಕೆ ಏರುತ್ತೆ. ದೂರದಿಂದ ನೋಡಿದಾಗ ಉಂಗುರವು ಗಾಳಿಯಲ್ಲಿ ತೇಲಿದಂತೆ ಕಾಣಿಸುತ್ತದೆ.
ನೂಲು ಕಾಣಿಸದಿರಲೆಂದೇ ಕಪ್ಪು ನೂಲನ್ನು ಬಳಸಬೇಕು. ಗಾಢ ಬಣ್ಣದ ಬಟ್ಟೆ ಧರಿಸುವುದೂ ಮ್ಯಾಜಿಕ್‌ಗೆ ಸಹಾಯಕ. ಜೊತೆಗೆ ಪ್ರದರ್ಶನದ ವೇಳೆ ಬೆಳಕು ಆದಷ್ಟು ಮಂದವಿದ್ದರೆ ಒಳ್ಳೆಯದು. ಪ್ರದರ್ಶನಕ್ಕೂ ಮುನ್ನ ಈ ಜಾದೂವನ್ನು ಅಭ್ಯಾಸ ಮಾಡಿ.
ವಿನ್ಸೆಂಟ್ ಲೋಬೋ