Advertisement

16 ಮಿಲಿಯನ್ ಹಾಡು! ರಿಲಯನ್ಸ್ ಜಿಯೋ ಜತೆ ಸಾವನ್ ವಿಲೀನ

02:02 PM Mar 27, 2018 | Sharanya Alva |

ಬೆಂಗಳೂರು:ಡಿಜಿಟಲ್ ಮ್ಯೂಸಿಕ್ ಕ್ಷೇತ್ರದಲ್ಲಿ ಹೆಸರುಮಾಡಿರುವ ‘ಸಾವನ್’ ಹಾಗೂ ರಿಲಯನ್ಸ್ ಜಿಯೋ ಒಡೆತನದ ‘ಜಿಯೋಮ್ಯೂಸಿಕ್’ ಪರಸ್ಪರ ಜೊತೆಗೂಡಲಿದ್ದು ಆ ಮೂಲಕ ಒಂದು ಬಿಲಿಯನ್ ಡಾಲರುಗಳಿಗೂ ಹೆಚ್ಚು ಮೌಲ್ಯದ ಜಾಗತಿಕ ವೇದಿಕೆ ರೂಪುಗೊಳ್ಳಲಿದೆ. ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ನೇತೃತ್ವದಲ್ಲಿ ಏರ್ಪಟ್ಟಿರುವ ಈ ಒಪ್ಪಂದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇತ್ತೀಚೆಗೆ ಸಹಿಮಾಡಿದೆ. ಈ ಒಪ್ಪಂದದ ಮೂಲಕ ಜಿಯೋ ಸಾವನ್ ಜೋಡಿ ಇನ್ನೂ ಹೆಚ್ಚಿನ ಕೇಳುಗರನ್ನು ತಲುಪಲಿದ್ದು ಆ ಮೂಲಕ ಭಾರತೀಯ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ನಮ್ಮ ಮುಂಚೂಣಿ ಸ್ಥಾನ ಇನ್ನಷ್ಟು ಸದೃಢವಾಗಲಿದೆ ಎಂದು ಈ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಪ್ರಕಟಣೆಯಲ್ಲಿ ಆಕಾಶ್ ಅಂಬಾನಿ ಹೇಳಿದ್ದಾರೆ. 

Advertisement

ರಿಲಯನ್ಸ್ ಸಮೂಹದ ಜಿಯೋಮ್ಯೂಸಿಕ್ ಸತತ 60 ಕ್ಕೂ ಹೆಚ್ಚು ವಾರಗಳಿಂದ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 20 ಭಾಷೆಗಳಲ್ಲಿ 16 ಮಿಲಿಯನ್‌ಗಿಂತ ಹೆಚ್ಚಿನ ಎಚ್‌ಡಿ ಹಾಡುಗಳ ಸಂಗ್ರಹ ಜಿಯೋಮ್ಯೂಸಿಕ್‌ನಲ್ಲಿರುವುದು ವಿಶೇಷ.

 
2007 ರಲ್ಲಿ ಪ್ರಾರಂಭವಾದ ಸಾವನ್ ಡಿಜಿಟಲ್ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮುಂಚೂಣಿ ಸ್ಥಾನದಲ್ಲಿದೆ.

 ಜಿಯೋಮ್ಯೂಸಿಕ್‌ನ 670 ಮಿಲಿಯನ್ ಡಾಲರ್ ಸೂಚಿತ ಮೌಲ್ಯ ಸೇರಿ ಈ ಹೊಸ ಘಟಕದ ಮೌಲ್ಯ ಒಂದು ಬಿಲಿಯನ್ ಡಾಲರಿಗೂ ಹೆಚ್ಚಾಗಲಿದೆ. ಈ ಮೂಲಕ ಜಾಗತಿಕ ವ್ಯಾಪ್ತಿಯಿರುವ, ಅತಿದೊಡ್ಡ ಮೊಬೈಲ್ ಜಾಹೀರಾತು ಮಾಧ್ಯಮಗಳ ಪೈಕಿ ಸ್ಥಾನಪಡೆಯಲಿರುವ ಭವಿಷ್ಯದ ಮಾಧ್ಯಮ ವೇದಿಕೆಯನ್ನು ರೂಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

 ಈ ಒಪ್ಪಂದದ ಅಂಗವಾಗಿ ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್, ಲಿಬರ್ಟಿ ಮೀಡಿಯಾ ಹಾಗೂ ಬರ್ಟಲ್ಸ್‌ಮ್ಯಾನ್ ಸಂಸ್ಥೆಗಳಿಂದ ಸಾವನ್‌ನ ಭಾಗಶಃ ಒಡೆತನವನ್ನು 104 ಮಿಲಿಯನ್ ಡಾಲರುಗಳ ವೆಚ್ಚದಲ್ಲಿ ರಿಲಯನ್ಸ್ ಸಂಸ್ಥೆ ಪಡೆದುಕೊಳ್ಳಲಿದೆ. ಪ್ರಪಂಚದ ಅತಿದೊಡ್ಡ ಸ್ಟ್ರೀಮಿಂಗ್ ಸೇವೆಗಳಲ್ಲೊಂದಾಗಲಿರುವ ಈ ಹೊಸ ಘಟಕದ ಅಭಿವೃದ್ಧಿಗಾಗಿ ರಿಲಯನ್ಸ್ ಸಂಸ್ಥೆ ನೂರು ಮಿಲಿಯನ್ ಡಾಲರುಗಳಷ್ಟು ಹೆಚ್ಚುವರಿ ಬಂಡವಾಳ ಹೂಡಿಕೆಯನ್ನೂ ಮಾಡಲಿದೆ. 

Advertisement

ಸಾವನ್‌ನ ಸಹಸ್ಥಾಪಕರಾದ ರಿಷಿ ಮಲ್ಹೋತ್ರಾ, ಪರಮ್‌ದೀಪ್ ಸಿಂಗ್ ಹಾಗೂ ವಿನೋದ್ ಭಟ್ ತಮ್ಮ ಸ್ಥಾನಗಳಲ್ಲಿ ಮುಂದುವರೆಯಲಿದ್ದಾರೆ. ಸಂಗೀತ ಕ್ಷೇತ್ರದ ನಮ್ಮ ಪಾಲುದಾರರು, ನಮ್ಮ ವೇದಿಕೆ ಬಳಸುವ ಸ್ವತಂತ್ರ ಕಲಾವಿದರು ಹಾಗೂ ಒಟ್ಟಾರೆಯಾಗಿ ಜಾಗತಿಕ ಸಂಗೀತೋದ್ಯಮದ ಕುರಿತು ನಮಗಿರುವ ಬದ್ಧತೆಯನ್ನು ರಿಲಯನ್ಸ್ ಜೊತೆಗಿನ ಒಡನಾಟ ಹೆಚ್ಚು ಶಕ್ತಿಯುತಗೊಳಿಸಲಿದೆ ಎಂದು ಪರಮ್‌ದೀಪ್ ಸಿಂಗ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next