ಕಲಬುರಗಿ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೋಳಿ ರಾಯಣ್ಣನವರ ಪ್ರತಿಮೆ ಧ್ವಂಸ ಮಾಡಿ ಅವಮಾನ ಮಾಡಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕರ್ನಾಟಕ ಕೋಲಿ, ಕಬ್ಬಲಿಗ, ಬುಡಕಟ್ಟು ಕ್ಷೇಮಾಭಿವೃದ್ಧಿ ಸಮಿತಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು ಮತ್ತು ಕಾರ್ಯಕರ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಕ್ರಾಂತಿವೀರ ಸಂಗೋಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಿರುವ ಕಿಡಿಗೇಡಿಗಳ ಕೃತ್ಯ ಖಂಡನೀಯವಾಗಿದೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿಯ ಸುವರ್ಣ ಸೌಧದ ಎದುರು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೋಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಬಗ್ಗೆ ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಪ್ರತಿಮೆಗಳ ಪ್ರತಿಷ್ಠಾಪನೆಗೆ ತಕ್ಷಣವೇ ಆದೇಶ ಹೊರಡಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕಕ್ಕೆ ಅಪಮಾನ ಮಾಡಿದಂತಹ ದುಷ್ಟರನ್ನು ಗಡಿಪಾರು ಮಾಡಬೇಕು. ದೇಶದ್ರೋಹ ಮತ್ತು ನಾಡ ದ್ರೋಹ ಪ್ರಕರಣ ದಾಖಲಿಸಿ ಶಿಸ್ತುಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಕನ್ನಡ ಬಾವುಟ ಸುಟ್ಟ ಪುಂಡರು ಮತ್ತು ಕರ್ತವ್ಯ ನಿರತ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂ ಮಾಡಿದ ಶಾಂತಿಗೆ ಭಗ್ನ ತಂದ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಮತ್ತು ಕರ್ನಾಟಕ ಕೋಲಿ, ಕಬ್ಬಲಿಗ, ಬುಡಕಟ್ಟು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ ಹಾಗೂ ಮುಖಂಡರಾದ ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಪೂಜಾರಿ, ಪಿಡ್ಡಪ್ಪ ಜಾಲಗಾರ, ಮಲ್ಲಿಕಾರ್ಜುನ ಗುಡಬಾ, ಪಿಂಟು ಜಮಾದಾರ, ಶಿವಕುಮಾರ ಕಿರಣಗಿ, ವಿನೋದ ಜನೆವರಿ, ಹಣಮಯ್ಯ ಆಲೂರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.