ಜಾಮ್ ನಗರ್: ಉದ್ಯಮ ರಂಗದ ದಿಗ್ಗಜ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಮತ್ತು ಅವರ ನಿಶ್ಚಿತ ವಧು ರಾಧಿಕಾ ಮರ್ಚೆಂಟ್ ಅವರ ಅದ್ದೂರಿ ವಿವಾಹ ಪೂರ್ವ ಸಂಭ್ರಮಾಚರಣೆಯ ಮೊದಲ ದಿನದಂದು ಪಾಪ್ ತಾರೆ ರಿಹಾನ್ನಾ ವೇದಿಕೆಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ಸದ್ಯ ಅವರು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಬಾರ್ಬಡಿಯನ್ ಗಾಯಕಿಗೆ ಒಂದು ದಿನದ ಪ್ರದರ್ಶನ ನೀಡಲು 74 ಕೋಟಿ ರೂ.ಸಂಭಾವನೆ ನೀಡಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಅಂತಾರಾಷ್ಟ್ರೀಯ ಮಟ್ಟದ ರಾಕ್ ಸ್ಟಾರ್ 38ರ ಹರೆಯದ ರಿಹಾನ್ನಾ ಭಾರತದಲ್ಲಿ ತನ್ನ ಮೊದಲ ಪ್ರದರ್ಶನ ನೀಡಲು ಅವಕಾಶ ಮಾಡಿ ಕೊಟ್ಟಿದುದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.”ಅನಂತ್ ಮತ್ತು ರಾಧಿಕಾ ಅವರ ಗೌರವಾರ್ಥ ನಾನು ಇಂದು ರಾತ್ರಿ ಇಲ್ಲಿದ್ದೇನೆ ಅಂಬಾನಿ ಕುಟುಂಬಕ್ಕೆ ಧನ್ಯವಾದಗಳು. ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸುತ್ತಾನೆ. ನಾನು ನಿಮಗೆ ಶುಭ ಹಾರೈಸುತ್ತೇನೆ. ಅಭಿನಂದನೆಗಳು” ಎಂದರು. “ಡೈಮಂಡ್ಸ್”, “ವೇರ್ ಹ್ಯಾವ್ ಯು”, “ರೂಡ್ ಬಾಯ್” ಮತ್ತು “ಪೋರ್ ಇಟ್ ಅಪ್” ನಂತಹ ಹಿಟ್ ಹಾಡುಗಳನ್ನು ಹಾಡಿ ಗಣ್ಯಾತೀಗಣ್ಯರನ್ನು ರಂಜಿಸಿದರು.
ಶಾರುಖ್ ಖಾನ್-ಗೌರಿ ಖಾನ್ ದಂಪತಿ , ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ದಂಪತಿ, ಶ್ರೇಯಾ ಘೋಷಾಲ್ ಮತ್ತು ಶಿಯಾಮಕ್ ದಾವರ್ ಅವರಂತಹ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಸಂಭ್ರಮಕ್ಕೆ ಸಾಕ್ಷಿಯಾದರು.
ರಿಹಾನ್ನಾ ಶನಿವಾರ ಬೆಳಗ್ಗೆ ಜಾಮ್ ನಗರ್ ನಿಂದ ಹೊರಡುವ ಮೊದಲು ಮಹಿಳಾ ಪೊಲೀಸರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು. ಮಹಿಳಾ ಪೊಲೀಸರೊಂದಿಗೆ ಸಂಭ್ರಮಿಸುತ್ತಿರುವ ಫೋಟೋಗಳು ವೈರಲ್ ಆಗಿವೆ.
2018 ರಲ್ಲಿ ನಡೆದ ಮುಕೇಶ್ ಅಂಬಾನಿ ಅವರ ಮಗಳು ಇಶಾ ಅವರ ಮದುವೆಯಲ್ಲಿ ಸಂಗೀತ ಐಕಾನ್ ಬೆಯೋನ್ಸ್ ಪ್ರದರ್ಶನ ನೀಡಿದ್ದರು.