ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ತಡೆ ಸಂಬಂಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನೂತನ ಕಾರ್ಡಿಯಾಕ್ ಎಂಆರ್‌ಐ ವಿಭಾಗ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಬೇಕೆಂದು ಕಾಯ್ದೆ ರೂಪಿಸಲಾಗಿತ್ತು. ಅದು ಪರಿಣಾಮಕಾರಿಯಾಗಿಲ್ಲದ ಕಾರಣ, ಮತ್ತಷ್ಟು ಬಲಪಡಿಸಲಾಗುವುದು.
ಸರ್ಕಾರದ ಉಚಿತ ವೈದ್ಯಕೀಯ ಸೀಟು ಪಡೆದುಕೊಂಡು ವೈದ್ಯರಾದವರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸಿಬ್ಬಂದಿ ಕೊರತೆ ಹಾಗೂ ಸೌಲಭ್ಯಗಳ ಬಗ್ಗೆ ಚರ್ಚಿಸಲು ಆಗಸ್ಟ್ ಮೊದಲ ವಾರದಲ್ಲಿ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕಿದ್ವಾಯಿ, ಜಯದೇವ, ಸಂಜಯ ಗಾಂಧಿ ಸೇರಿದಂತೆ ವಿವಿಧ ಆಸ್ಪತ್ರೆಗಳ ನಿರ್ದೇಶಕರು ಭಾಗವಹಿಸಬೇಕು ಎಂದರು.
ರಾಜ್ಯವನ್ನು ವೈದ್ಯಕೀಯ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವ ಉದ್ದೇಶವಿದ್ದು, ಇದಕ್ಕೆ ವೈದ್ಯರಿಗಿಂತ ಹೆಚ್ಚಾಗಿ ಪೋಷಕ ಸಿಬ್ಬಂದಿಯ ಅವಶ್ಯಕತೆ ಇದೆ. ಹೀಗಾಗಿ 10ನೇ ತರಗತಿ ಉತ್ತೀರ್ಣರಾದವರಿಗೆ ವೈದ್ಯಕೀಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಬಳಸಿಕೊಳ್ಳುವ ಚಿಂತನೆ ಇದೆ.
-ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ