Advertisement

ನದಿ ಜೋಡಣೆಯಿಂದ ಉತ್ತರ ಕರ್ನಾಟಕಕ್ಕೆ ಬಲ

01:14 PM Apr 28, 2019 | Suhan S |

ಬೆಳಗಾವಿ: ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಗಳ ಕುಡಿಯುವ ನೀರಿಗಾಗಿ ಕೆರೆ ತುಂಬಲು ಹಾಗೂ ಜಮೀನುಗಳಿಗೆ ಕಾಳಿ ನದಿಯ ಸುಪಾ ಜಲಾಶಯದಿಂದ ಘಟಪ್ರಭಾ-ಮಲಪ್ರಭಾ ನದಿಗೆ ನೀರು ಹರಿಸಲು ಉದ್ಯಮಿ ಸಂಗಮೇಶ ನಿರಾಣಿ ಸಿದ್ಧಪಡಿಸಿರುವ ಅಮೃತಧಾರೆ ನಿರಾಣಿ ನೀರಾವರಿ ವರದಿ ಕುರಿತು ಸಮಗ್ರ ಚರ್ಚೆ ನಡೆಯಿತು.

Advertisement

ನೆಹರು ನಗರದ ಇನ್‌ಸ್ಟಿಟ್ಯೂಟ್ ಆಫ್‌ ಇಂಜಿನಿಯರಿಂಗ್‌ ಹಾಲ್ನಲ್ಲಿ ಶನಿವಾರ ನಡೆದ ಕಾಳಿ-ಘಟಪ್ರಭಾ-ಮಲಪ್ರಭಾ ನದಿ ಜೋಡಣೆ ವಿಚಾರಗೋಷ್ಠಿಯಲ್ಲಿ ಅನೇಕರು ತಮ್ಮ ಅಭಿಪ್ರಾಯ, ಸಲಹೆ-ಸೂಚನೆ ನೀಡಿದರು.

ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲಕರವಾಗಿರುವ ಈ ಯೋಜನೆಯಿಂದ ಈ ಪ್ರದೇಶವನ್ನು ಬರ ಮುಕ್ತ ಮಾಡಬಹುದಾಗಿದೆ. ನೂರಾರು ಹಳ್ಳಿಗಳಿಗೆ ಕುಡಿಯುವ ನೀರು, 10 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ, ಒಟ್ಟು 1225 ಮೆ.ವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದೆ. ಹೀಗಾಗಿ ಈ ಯೋಜನೆ ಅನುಷ್ಠಾನಗೊಳಿಸುವಂತೆ ಒಕ್ಕೊರಲಿನಿಂದ ಸಭೆ ಆಗ್ರಹಿಸಿತು.

ನಾಗನೂರು ರುದ್ರಾಕ್ಷಿ ಮಠ, ಗದಗ ತೋಂಟದಾರ್ಯ ಮಠದ ಡಾ. ಶ್ರೀ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಬರ ಪೀಡಿತ ಪ್ರದೇಶಗಳಾಗಿವೆ. ಇದೆಲ್ಲವೂ ಮುಕ್ತಿ ಕಾಣಬೇಕಾದರೆ ಶಾಶ್ವತ ಯೋಜನೆಗಳು ಈ ಭಾಗಕ್ಕೆ ಅವಶ್ಯ. ಆದರೆ ನಮ್ಮ ಭಾಗದ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಯಾವುದೇ ಯೋಜನೆಗಳು ಬೇಗ ಕಾರ್ಯರೂಪಕ್ಕೆ ಬರುತ್ತಿಲ್ಲ. ಅನ್ಯಾಯವಾದರೆ ನಮ್ಮ ಜನಪ್ರತಿನಿಧಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಜಿಲ್ಲೆಗಳನ್ನು ನೀರಾವರಿ ಪ್ರದೇಶಗಳನ್ನಾಗಿ ಮಾಡಲು ನಿರಾಣಿಯವರ ವಿಶೇಷ ಪ್ರಯತ್ನದಿಂದ ಈ ವರದಿ ಸಿದ್ಧಪಡಿಸಲಾಗಿದೆ. ಇನ್ನು ತಂತ್ರಜ್ಞರ ಸಲಹೆ ಪಡೆದು ಮುಂದುವರಿಯಬೇಕಾಗಿದೆ. ಸರ್ಕಾರ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಪಡೆದುಕೊಂಡು ವರದಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಕಳಸಾ-ಬಂಡೂರಿ ಯೋಜನೆಯಲ್ಲಿ ಮಹದಾಯಿ ನದಿ ನೀರನ್ನು ಬಳಸಿಕೊಳ್ಳುವಂತೆ ಮಧ್ಯಂತರ ತೀರ್ಪು ಬಂದಿದೆ. ಆದರೆ ತೀರ್ಪಿನಂತೆ 13 ಟಿಎಂಸಿ ಅಡಿ ನೀರನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ರಾಜಕಾರಣಿಗಳು ಆರೋಪ- ಪ್ರತ್ಯಾರೋಪದಲ್ಲಿಯೇ ತೊಡಗಿದ್ದಾರೆ ಎಂದು ಟೀಕಿಸಿದರು. ನಿಡಸೋಸಿ ದುರದುಂಡೇಶ್ವರ ಮಠದ ಜಗದ್ಗುರು ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಎಲ್ಲ ಪಕ್ಷಗಳ ಮುಖಂಡರ ಹಾಗೂ ತಾಂತ್ರಿಕ ತಜ್ಞರ ಸಮಿತಿ ರಚಿಸಿದರೆ ಯೋಜನೆಗೆ ಗತಿ ಸಿಗುತ್ತದೆ. ವ್ಯವಸ್ಥಿತವಾಗಿ ಎಲ್ಲರೂ ಸೇರಿ ಚರ್ಚಿಸಿದರೆ ಆರು ತಿಂಗಳ ಒಳಗೆ ಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಬಹುದಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯೋಜನೆಯನ್ನು ಚೆನ್ನಾಗಿ ತಯಾರಿ ಮಾಡಬೇಕು ಎಂದು ಸಲಹೆ ನೀಡಿದರು.

ಕೂಡಲಸಂಗಮದ  ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಿರಾಣಿ ನೀರಾವರಿ ವರದಿ ಅನುಷ್ಠಾನಕ್ಕೆ ಬೇರೆ ರಾಜ್ಯದ ಭಯ ಇಲ್ಲ, ಪರಿಸರಕ್ಕೂ ತೊಂದರೆ ಇಲ್ಲ, ಜಮೀನು ಸ್ವಾಧೀನದ ಅವಶ್ಯಕತೆಯೂ ಇಲ್ಲ. ನಮ್ಮ ರಾಜ್ಯದ ನದಿ ನೀರನ್ನೇ ಬಳಸಿಕೊಳ್ಳಲು ಯಾವುದೇ ಅಡೆತಡೆ ಬರುವುದಿಲ್ಲ. ಹೀಗಾಗಿ ಈ ಒಂದು ವಿನೂತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಎಲ್ಲರೂ ಶ್ರಮಿಸಬೇಕಾಗಿದೆ. ಉತ್ತರ ಕರ್ನಾಟಕಕ್ಕೆ ಪೂರಕವಾದ ಇದನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕ ವಿಷಯ ಬಂದಾಗ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಪಕ್ಷಭೇದ ಮರೆತು ಈ ಭಾಗಕ್ಕೆ ನ್ಯಾಯ ಕೊಡಿಸಲು ಮುಂದಾಗಬೇಕು. ನ್ಯಾಯ ಕೊಡಿಸದಿದ್ದರೆ ಬೆಂಗಳೂರು, ದಿಲ್ಲಿಯಲ್ಲಿ ಹೋರಾಟ ಮಾಡಬೇಕು. ಉ.ಕ.ದಲ್ಲಿ ಏನೇ ಸಮಸ್ಯೆ ಇದ್ದರೂ ಮಠಾಧಿಧೀಶರು ಸದಾ ಮುಂದೆ ನಿಂತು ಬೀದಿಗಿಳಿದು ಹೋರಾಟ ಮಾಡುತ್ತಾರೆ. ನೀರಿನ ವಿಷಯದಲ್ಲಂತೂ ನಾವು ಹಿಂದಕ್ಕೆ ಸರಿಯುವುದಿಲ್ಲ ಎಂದರು.

ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನೀರಾವರಿ ಯೋಜನೆಯ ಹೋರಾಟಕ್ಕೆ ನಾವೆಲ್ಲರೂ ಕೈ ಜೋಡಿಸುತ್ತೇವೆ. ಜನಸಾಮಾನ್ಯರಿಗೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಎಲ್ಲರೂ ಎಚ್ಚೆತ್ತುಕೊಂಡಾಗ ನಮಗೆ ನ್ಯಾಯ ಸಿಗಲು ಸಾಧ್ಯ ಎಂದರು.

ಹಿರಿಯ ವಕೀಲ ಬಿ.ಡಿ. ಹಿರೇಮಠ ಮಾತನಾಡಿ, ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ವಿಧಾನಸೌಧ ಒಳಗೆ ಹೋಗುತ್ತೇವೆ. ಉ.ಕ.ಕ್ಕೆ ಕಚೇರಿಗಳನ್ನು ಸ್ಥಳಾಂತರಿಸುವ ತೀರ್ಮಾನವನ್ನು ಸರ್ಕಾರ ತಿರಸ್ಕರಿಸಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರದ ಗಮನಕ್ಕೆ ತರುವ ಕೆಲಸ ಆಗಬೇಕು ಎಂದ ಅವರು, ನಿರಾಣಿ ವರದಿ ಜಾರಿಗಾಗಿ ಎಲ್ಲರೂ ಶ್ರಮಿಸಬೇಕಾದ ಅನಿವಾರ್ಯತೆ ಇದೆ ಎಂದರು.

ನೀರಾವರಿ ಇಲಾಖೆಯ ನಿವೃತ್ತ ಉಪ ಮುಖ್ಯ ಇಂಜಿನಿಯರ್‌ ಮನೋಹರ ಚರಂತಿಮಠ ಮಾತನಾಡಿ, ಈ ಯೋಜನೆಯನ್ನು ಭಾವನಾತ್ಮಕವಾಗಿ ನೋಡದೇ ತಾಂತ್ರಿಕವಾಗಿ ಅನುಷ್ಠಾನ ಗೊಳಿಸಬೇಕಾಗಿದೆ. ಡ್ಯಾಂದಿಂದ ನೀರನ್ನು ಎಷ್ಟು ಲಿಫ್ಟ್‌ ಮಾಡಬೇಕಾಗುತ್ತದೆ. ಲಿಫ್ಟ ಇರಿಗೇಶನ್‌ ಅಂದರೆ ಹೆಚ್ಚಿನ ವೆಚ್ಚದ ಬಾಬತ್ತು ಎಂದರ್ಥ. ಹೀಗಾಗಿ ಎಲ್ಲವನ್ನು ಅಳೆದು ತೂಗಿ ಏನೇನು ಮಾಡಬೇಕು ಎಂಬದನ್ನು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ನಿರಾಣಿ ಉದ್ಯಮ ಸಮೂಹ ಸಂಸ್ಥೆ ಕಾರ್ಯನಿವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಕರ್ನಾಟಕದಲ್ಲಿಯೇ ಹರಿಯುತ್ತಿರುವ ಕಾಳಿ ನದಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿದೆ. ಇದನ್ನು ನಮ್ಮಲ್ಲಿಯೇ ಬಳಸಿಕೊಳ್ಳಬೇಕೆಂಬ ಯೋಚನೆ ಬಂದಾಗ ಇದನ್ನು ಸಿದ್ಧಪಡಿಸಲು ಮುಂದಾದೆ. ಅನುಷ್ಠಾನಕ್ಕೆ ಕಾನೂನಿನ ಸಮಸ್ಯೆ ಎದುರಾಗುವುದಿಲ್ಲ. ಹೇಗೆ ನೀರು ತರುವುದು, ಯಾವ ಸ್ಥಳದಲ್ಲಿ ಜೋಡಿಸುವುದು, ಎಲ್ಲಿ ಸಂಗ್ರಹ ಮಾಡುವುದು, ಎಷ್ಟು ವಿದ್ಯುತ್‌ ಉತ್ಪಾದನೆ ಮಾಡುವುದು ಎಂಬ ಬಗ್ಗೆ ಖಾಸಗಿ ಸಂಸ್ಥೆಯ ನೆರವಿನೊಂದಿಗೆ ಪ್ರಾಥಮಿಕ ವರದಿ ರೂಪಿಸಲಾಗಿದೆ ಎಂದು ತಿಳಿಸಿದರು.

ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಬಾಗೋಜಿಕೊಪ್ಪ ಶಿವಯೋಗಿ ಮಠದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ರೈತ ಹೋರಾಟಗಾರ ವಿಜಯ ಕುಲಕರ್ಣಿ, ನಿವೃತ್ತ ಅಧಿಕಾರಿ ಖನಗಾಂವಿ, ವಾಸುದೇವ ಹೆರಕಲ್, ಯು.ವಿ. ಕುಲಕರ್ಣಿ, ಲಿಂಗರಾಜ ಪಾಟೀಲ, ರಾಜು ಟೋಪಣ್ಣವರ ಸೇರಿದಂತೆ ಇತರರು ಇದ್ದರು. ವೆಂಕಟೇಶ ಜಂಬಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next