ಮುಂಬಯಿ: ಖ್ಯಾತ ಕಾದಂಬರಿಕಾರ್ತಿ ಮಂಜು ಕಪೂರ್ ಅವರ ಕಾದಂಬರಿ ‘ಎ ಮ್ಯಾರೀಡ್ ವುಮನ್’ ಕಾದಂಬರಿಯನ್ನು ಆಧರಿಸಿ ನಿರ್ಮಾಪಕಿ ಮತ್ತು ನಿರ್ದೇಶಕಿ ಹೊಸ ವೆಬ್ ಸಿರೀಸ್ ಪ್ರಾರಂಭಿಸಲಿದ್ದಾರೆ. ಈ ವೆಬ್ ಚಿತ್ರದಲ್ಲಿ ಸಲಿಂಗಿ ಜೋಡಿಯಾಗಿ ರಿಧಿ ಧೋಗ್ರಾ ಹಾಗೂ ಮೋನಿಕಾ ಧೋಗ್ರಾ ಅವರು ನಟಿಸುತ್ತಿದ್ದಾರೆ.
ತಮ್ಮ ಈ ಹೊಸ ಪ್ರಾಜೆಕ್ಟ್ ಕುರಿತಾದ ಮೊದಲ ವಿಡಿಯೋ ಒಂದನ್ನು ಏಕ್ತಾ ಕಪೂರ್ ಅವರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ನಾವು ಆದ್ಯಾತ್ಮದ ಅನುಭವ ಹೊಂದಿರುವ ಮನುಷ್ಯರಲ್ಲ ; ಬದಲಾಗಿ ಮನುಷ್ಯ ಅನುಭವಗಳನ್ನು ಹೊಂದಿರುವ ಆಧ್ಯಾತ್ಮ ಜೀವಿಗಳು’ ಎಂಬ ಫ್ರೆಂಚ್ ತತ್ವಜ್ಞಾನಿ ಪೀರೆ ಡಿ ಚಾರ್ಡಿನ್ ನ ಹೇಳಿಕೆಯನ್ನು ಬಳಸಿಕೊಂಡು ತಮ್ಮ ಈ ಹೊಸ ಪ್ರಾಜೆಕ್ಟ್ ನ ಸಂಕ್ಷಿಪ್ತ ಪರಿಚಯವನ್ನು ಏಕ್ತಾ ಮಾಡಿಕೊಂಡಿದ್ದಾರೆ.
ದೇಶದೆಲ್ಲೆಡೆ ರಾಜಕೀಯ ಅಸ್ಥಿರತೆ ಇದ್ದಂತಹ ಸಂದರ್ಭದಲ್ಲಿ ಹುಟ್ಟಿಕೊಂಡಂತಹ ಒಂದು ವಿಶಿಷ್ಟ ಪ್ರೇಮ ಕಥೆ – ಮಂಜು ಕಪೂರ್ ಅವರ ಜನಪ್ರಿಯ ಕೃತಿ ‘ಎ ಮ್ಯಾರೀಡ್ ವುಮನ್’ ಆಧಾರಿತ. ಧಾರ್ಮಿಕ, ಲೈಂಗಿಕ ಮತ್ತು ಸಾಮಾಜಿಕ ಗಡಿಗಳನ್ನು ದಾಟಿನಿಂತ ಎರಡು ಸುಂದರ ಆತ್ಮಗಳು ಪರಸ್ಪರ ಒಬ್ಬರನ್ನೊಬ್ಬರು ಕಂಡುಕೊಳ್ಳುವ ಅನುಪಮ ಕಥೆ ಇದು. ಎಂದು ಏಕ್ತಾ ಕಪೂರ್ ಅವರು ಬರೆದುಕೊಂಡಿದ್ದಾರೆ.
ಪತಿ ಮತ್ತು ಪ್ರೀತಿ ಪಾತ್ರ ಮಗುವನ್ನು ಹೊಂದಿರುವ ದೆಹಲಿವಾಸಿ ವಿವಾಹಿತೆಯೊಬ್ಬಳು ತನಗಿಂತ ಸಣ್ಣ ವಯಸ್ಸಿನ ಯುವತಿಯೊಂದಿಗೆ ಸಂಬಂಧವನ್ನು ಹೊಂದುವ ಕಥೆ ಇದಾಗಿದೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ದೇಶಾದ್ಯಂತ ಕಾಣಿಸಿಕೊಂಡಿದ್ದ ರಾಜಕೀಯ ಅಸ್ಥಿರತೆಯ ಹಿನ್ನಲೆಯಲ್ಲಿ ಈ ಕಥೆ ಸಾಗುವುದು ವಿಶೇಷವಾಗಿದೆ.
ಈ ಹಿಂದೆ ಮಂಜು ಕಪೂರ್ ಅವರ ಇನ್ನೊಂದು ಜನಪ್ರಿಯ ಕೃತಿ ‘ಕಸ್ಟಡಿ’ಯನ್ನು ‘ಎ ಹೈ ಮೊಹಬ್ಬತೇ’ ಹೆಸರಿನಲ್ಲಿ ಏಕ್ತಾ ಕಪೂರ್ ತೆರೆಗೆ ತಂದಿದ್ದರು.
ಒಟ್ಟಿನಲ್ಲಿ ಸಲಿಂಗಕಾಮದ ಹಿನ್ನಲೆಯಲ್ಲಿ 1996ರಲ್ಲಿ ತೆರೆಕಂಡು ಭಾರೀ ಸುದ್ದಿಯಾಗಿದ್ದ ದೀಪಾ ಮೆಹ್ತಾ ನಿರ್ದೇಶನದಲ್ಲಿ ಮೂಡಿಬಂದಿದ್ದ ಶಬನಾ ಅಜ್ಮಿ ಮತ್ತು ನಂದಿತಾ ದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಫೈರ್’ ಚಿತ್ರದ ಬಳಿಕ ಮಹಿಳೆಯರಿಬ್ಬರ ನಡುವಿನ ಸಂಬಂಧದ ಕುರಿತಾಗಿ ತೆರೆಗೆ ಬರುತ್ತಿರುವ ಈ ವೆಬ್ ಸಿರೀಸ್ ಕುರಿತಾಗಿ ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಗರಿಗೆದರಿದೆ.