Advertisement

ಮಳೆಗಾಲದಲ್ಲಿ ಸವಾರರಿಗೆ ಕಾದಿದೆ ಅಪಾಯ !

03:49 PM Jun 05, 2017 | |

ಬೈಂದೂರು: ಮೊನ್ನೆಯಷ್ಟೇ ಬಿಸಿಲಿನ ಝಳದಿಂದ ಹೈರಾಣಾದ ಜನರಿಗೆ  ಬಿಸಿಲಿನ ಶಕೆ ಆರುವುದರೊಳಗೆ ಮುಂಗಾರಿನ ಮಳೆ ಹನಿಯ ಸಿಂಚನವಾಗಿದೆ. ಮೇ ಮೊದಲ ವಾರದಿಂದ ಪ್ರಾರಂಭಗೊಂಡ ಮಳೆಯ ಪ್ರಭಾವದಿಂದ ಬಹುತೇಕ ನಿರೀಕ್ಷಿತ ಕಾಮಗಾರಿಗಳು ಅರ್ಧದಲ್ಲೆ ಅಂತ್ಯ ಕಂಡಿವೆ. ಕಳೆದೊಂದು ವರ್ಷದಿಂದ ಮಳೆಯ ಮುನ್ನ ಕಾಮಗಾರಿ ಪೂರ್ತಿಗೊಳಿಸಬೇಕೆನ್ನುವ ಕುಂದಾಪುರ-ಗೋವಾ ಚತುಷ್ಪಥ ಹೆದ್ದಾರಿ ಕಾಮಗಾರಿ ಕಂಪೆನಿಗೆ ಮಾತ್ರ ಕರಾವಳಿಯ ಅನಿಶ್ಚಿತ ವಾತಾವರಣ ಸವಾಲಾಗಿ ಪರಿಣಮಿಸಿದೆ.

Advertisement

ಅತ್ಯಂತ ಅಪಾಯಕಾರಿ ಸವಾಲಾದ ವತ್ತಿನೆಣೆ ಗುಡ್ಡವನ್ನು ಸಮತಟ್ಟಾಗಿ ಮಾರ್ಪಡಿಸಬೇಕೆನ್ನುವ ಕಾಮಗಾರಿ ಕಂಪೆನಿಯ ಅಧಿಕಾರಿಗಳಿಗೆ ಇಲ್ಲಿನ ಭೌಗೋಳಿಕ ಲಕ್ಷಣಗಳು ನಿದ್ದೆ ಕೆಡಿಸಿವೆ. ಮೊದಲ ಮಳೆಯ ಪ್ರಭಾವಕ್ಕೆ ಒತ್ತಿನೆಣೆ ಕೊರೆದ ಗುಡ್ಡದ ಬಲಭಾಗ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಒಂದೊಮ್ಮೆ ಧಾರಾಕಾರ ಮಳೆ ಸುರಿದರೆ ಬಹುತೇಕ ಗುಡ್ಡ ಧರಾಶಾಯಿಯಾಗುವ ಸಾಧ್ಯತೆಯಿದೆ.

ನಿರ್ದಿಷ್ಟ  ಚಿಂತನೆಯ ಕೊರತೆಯೇ?: ಬಹು ತೇಕ ಕಾಮಗಾರಿ ವ್ಯವಸ್ಥಿತ ಯೋಜನೆಯೊಂದಿಗೆ ಸಾಗುತ್ತದೆ.ಆದರೆ ಒತ್ತಿನೆಣೆ ವಿಚಾರದಲ್ಲಿ ಕಂಪೆನಿಗೆ ಪ್ರಾರಂಭದಲ್ಲೆ ವಿಘ್ನ ಪ್ರಾರಂಭವಾಗಿತ್ತು. ಅರಣ್ಯ ಇಲಾಖೆಯಿಂದ ಜಾಗ ತೆರವುಗೊಳಿಸಲು ವಿಳಂಬವಾಗಿ ಹಲವು ನಿಬಂಧನೆಗಳೊಂದಿಗೆ ಸಮ್ಮತಿ ನೀಡಬೇಕಾಗಿದೆ.

ಈಗಾಗಲೇ ಪ್ರಾರಂಭದಲ್ಲಿ ನೀಡಿದ ರಸ್ತೆ ನಕ್ಷೆ ಬದಲಾವಣೆ ಕಂಡಿದೆ. ಒತ್ತಿನೆಣೆ ಸೇರಿದಂತೆ ಹಲವು ಭಾಗಗಳಲ್ಲಿ ಡಿಸೈನ್‌ ಬದಲಾವಣೆಯಾದ ಕಾರಣ ಗೊಂದಲ ಉಂಟಾಗಿದೆ.ಆದರೆ ಗುಡ್ಡವನ್ನು ಕೊರೆದು ಮಾಡಿದ ಅಧಿಕಾರಿಗಳ ಲೆಕ್ಕಾಚಾರ ಮಾತ್ರ ತಲೆಕೆಳಗಾಗಿದೆ. ದಿನದಿಂದ ದಿನಕ್ಕೆ ಗುಡ್ಡದ ಒಂದೊಂದೆ ಮಜಲುಗಳು ಕುಸಿಯಲು ಪ್ರಾರಂಭವಾಗಿದೆ. ಗುಡ್ಡ ಕುಸಿಯಬಾರದೆಂದು ಗುಡ್ಡಕ್ಕೆ ಕಬ್ಬಿಣದ ಸಲಾಕೆಗಳನ್ನು ಪೊಣಿಸಿ ಕಾಂಕ್ರೀಟ್‌ ಮಾಡುವ ಪ್ರಯತ್ನ ಕೂಡ ವಿಫಲವಾಗಿದೆ. ಒಂದೊಮ್ಮೆ ಭಾರೀ ಕುಸಿತ ಉಂಟಾದರೆ ಹೆದ್ದಾರಿ ಸಂಚಾರಿಗಳಿಗೆ ಅಪಾಯವಾಗುವ ಸಾಧ್ಯತೆಯಿದೆ.

ಬದಲಿ ರಸ್ತೆ ವ್ಯವಸ್ಥೆ
ಈಗಾಗಲೇ ಅಪಾಯದ ಮುನ್ಸೂಚನೆ ಅರಿತ ಅಧಿಕಾರಿಗಳು ತರಾತುರಿಯಲ್ಲಿ ಬದಲಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಕಳೆದೊಂದು ವಾರದಿಂದ ಅಹೋರಾತ್ರಿ ರಸ್ತೆ ಕಾಮಗಾರಿ ನಡೆಯುತ್ತಿದೆ.ಆದರೆ ಈ ರಸ್ತೆಯು ಸಹ ಪೂರ್ಣ ಪ್ರಮಾಣದ ಭದ್ರತೆ ಹೊಂದಿಲ್ಲ.
ಆಶ್ಚರ್ಯವೆಂದರೆ ಬೇರೆಲ್ಲಾ  ವಿಚಾರದಲ್ಲಿ ಅಬ್ಬರದ ಪ್ರತಿಭಟನೆಗೆ ಮುಂದಾಗುವ ಬೈಂದೂರು ವ್ಯಾಪ್ತಿಯ ಜನಪ್ರತಿನಿಧಿಗಳು, ಮುಖಂಡರು ಕಣ್ಣೆದುರಿಗೆ ವತ್ತಿನೆಣೆ ಗುಡ್ಡದಿಂದ ಬಾರೀ ಅಪಾಯ ಎದುರಾಗಿ ಪಡುವರಿ, ಯಡ್ತರೆ, ಬೈಂದೂರು ಗ್ರಾಮಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದರು ಸಹ ಧ್ವನಿ ಎತ್ತುತ್ತಿಲ್ಲ. ಸಂಸದರು ಆಗಮಿಸಿದ ಸಂಧರ್ಭದಲ್ಲಿಯೂ ಹೆದ್ದಾರಿ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಲಾಖೆಗಳು ಸಹ ಈ ಬಗ್ಗೆ ನಿರ್ಲಕ್ಷ ವಹಿಸುತ್ತಿದೆ.ಹೀಗಾಗಿ ಮಳೆಗಾಲದಲ್ಲಿ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ, ಕಂಪೆನಿಗಳು ಹಾಗೂ ಜನಪ್ರತಿನಿಧಿಗಳು ಮುಂಜಾಗೃತೆ ವಹಿಸಬೇಕಾಗಿದೆ.

Advertisement

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next