ಒಂದು ಲವ್‌ಸ್ಟೋರಿ, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ, ಭರ್ಜರಿ ಆ್ಯಕ್ಷನ್, ಗುನುಗುಡುವ ಹಾಡುಗಳು, ಅದ್ಧೂರಿ ಮೇಕಿಂಗ್, ಔಟ್ ಆ್ಯಂಡ್ ಔಟ್ ಮಾಸ್ ಎಲಿಮೆಂಟ್ಸ್ ಹೀಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಲಾದ ಸಿನಿಮಾ “ರೈಡರ್’ ಈ ವಾರ ತೆರೆಗೆ ಬಂದಿದೆ. “ಸೀತಾರಾಮ ಕಲ್ಯಾಣ’ ಸಿನಿಮಾದ ನಂತರ, “ರೈಡರ್’ ನಿಖೀಲ್ ಕುಮಾರ್ ಅಭಿನಯದ ಮತ್ತೂಂದು ಮಾಸ್ ಎಂಟರ್ ಟೈನ್ಮೆಂಟ್ ಸಿನಿಮಾ ಎನ್ನಲು ಅಡ್ಡಿಯಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, “ರೈಡರ್’ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಪ್ಯಾಕ್ ಸಿನಿಮಾ.
ಇನ್ನು ಸಿನಿಮಾದ ಕಥೆಯ ಬಗ್ಗೆ ಹೇಳುವುದಾದರೆ, ಅನಾಥ ಆಶ್ರಮದಲ್ಲಿ ಪರಿಚಯವಾಗುವ ಕಿಟ್ಟಿ ಮತ್ತು ಚಿನ್ನು ನಂತರ ಸನ್ನಿವೇಶವೊಂದರಲ್ಲಿ ಬೇರೆ ಬೇರೆಯಾಗುತ್ತಾರೆ. ಆದರೆ ಅವರಿಬ್ಬರ ನಡುವೆ ಚಿಗುರೊಡೆದ ಸ್ನೇಹ, ಇಬ್ಬರೂ ಕಾಣದಂತೆ ದೂರವಿದ್ದರೂ, ವರ್ಷಗಳು ಉರುಳಿದರೂ ಹೆಮ್ಮರವಾಗಿ ಬೆಳೆಯುತ್ತದೆ. ದೊಡ್ಡವರಾದ ಮೇಲೆ ಒಬ್ಬರನ್ನು ಒಬ್ಬರು ಹುಡುಕಿಕೊಂಡು ಹೊರಡುತ್ತಾರೆ. ಇವರಿಬ್ಬರ ಪ್ರೀತಿಯ ಹುಡುಕಾಟ, ತಳಮಳದ ಸುತ್ತಾಟವೇ “ರೈಡರ್’. ಅಂತಿಮವಾಗಿ ಕಿಟ್ಟಿ-ಚಿನ್ನು ಇಬ್ಬರೂ ಒಂದಾಗುತ್ತಾರಾ, ಅವರಿಬ್ಬರ ಪರಸ್ಪರ ಹುಡುಕಾಟ “ರೈಡಿಂಗ್’ ಎಲ್ಲಿಗೆ ಬಂದು ನಿಲ್ಲುತ್ತದೆ ಅನ್ನೋದೆ “ರೈಡರ್’ ಚಿತ್ರದ ಕ್ಲೈಮ್ಯಾಕ್ಸ್. ಅದು ಹೇಗೆ ಇರುತ್ತದೆ ಅನ್ನೋದನ್ನ ನೀವು ತೆರೆಮೇಲೆ ನೋಡುವುದೇ ಒಳ್ಳೆಯದು.
ಇದನ್ನೂ ಓದಿ:“ಬಡವ ರಾಸ್ಕಲ್” ಚಿತ್ರವಿಮರ್ಶೆ: ಬಡವನ ಜೊತೆಗೊಂದು ಸುಖಕರ ಪ್ರಯಾಣ
ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಿಖೀಲ್ ಕುಮಾರ್, ಮತ್ತೂಮ್ಮೆ ಮಾಸ್ ಹೀರೋ ಆಗಿ “ರೈಡರ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಯ ಮಗನಾಗಿ, ಸ್ನೇಹಿತನಾಗಿ, ಹುಡುಕಾಟದ ಪ್ರೇಮಿಯಾಗಿ ನಿಖೀಲ್ ಕುಮಾರ್ ತಮ್ಮ ಪಾತ್ರ ವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆ್ಯಕ್ಷನ್, ಡ್ಯಾನ್ಸ್ ಮತ್ತು ತಮ್ಮ ಮ್ಯಾನರಿಸಂ ಮೂಲಕ ತಾವು ಮಾಸ್ ಹೀರೋ ಎನ್ನುವುದನ್ನು ಮತ್ತೂಮ್ಮೆ ನಿರೂಪಿಸಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ ನಾಯಕಿ ಕಶ್ಮೀರಾ ಅಂದ ಮತ್ತು ಅಭಿನಯ ಎರಡರಿಂದಲೂ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಮತ್ತು ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ರಾಜೇಶ್ ನಟರಂಗ, ಶೋಭ ರಾಜ್, ಗರುಡ ರಾಮ್ ಹೀಗೆ ಬೃಹತ್ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಬಹುತೇಕ ಎಲ್ಲ ಕಲಾವಿದರದ್ದು ಪಾತ್ರಕ್ಕೆ ತಕ್ಕಂತೆ ಒಪ್ಪುವಂಥ ಅಭಿನಯ.
ತಾಂತ್ರಿಕವಾಗಿ ಚಿತ್ರದ ಮೇಕಿಂಗ್ ಕಡೆಗೆ ನಿರ್ಮಾಪಕರು ಮತ್ತು ನಿರ್ದೇಶಕರು ಹೆಚ್ಚಿನ ಗಮನ ಕೊಟ್ಟಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ, ಕಲರಿಂಗ್, ಸುಂದರ ಲೊಕೇಶನ್ಸ್ ಎಲ್ಲವೂ ತೆರೆಮೇಲೆ ಗಮನ ಸೆಳೆಯುತ್ತದೆ. ಚಿತ್ರದ ಎರಡು ಹಾಡುಗಳು ಗುನುಗುಡವಂತಿದೆ. ಎಲ್ಲ ಥರದ ಮನರಂಜನಾತ್ಮಕ ಅಂಶಗಳು ಇರಬೇಕು ಎಂದು ಬಯಸುವ ಪ್ರೇಕ್ಷಕರು “ರೈಡರ್’ಗಾಗಿ ಥಿಯೇಟರ್ ಕಡೆಗೆ ಒಂದು “ರೈಡಿಂಗ್’ ಹೋಗಿ ಬರಲು ಯಾವುದೇ ಅಡ್ಡಿಯಿಲ್ಲ
ಜಿ.ಎಸ್.ಕಾರ್ತಿಕ ಸುಧನ್