Advertisement

ಮತ್ತೆ ಐಪಿಎಲ್‌ ಮೇಲೆ ರೈಡ್‌ ಮಾಡೀತೇ ನೈಟ್‌ರೈಡರ್?

11:37 PM Apr 02, 2021 | Team Udayavani |

ಒಂದೇ ಮಾತಲ್ಲಿ ಹೇಳುವುದಾದರೆ ಗೌತಮ್‌ ಗಂಭೀರ್‌ ಬೇರ್ಪಟ್ಟ ಬಳಿಕ ಕೋಲ್ಕತಾ ನೈಟ್‌ರೈಡರ್ ಹಳಿ ತಪ್ಪಿದೆ. ಇಂಗ್ಲೆಂಡಿಗೆ ಮೊದಲ ವಿಶ್ವಕಪ್‌ ತಂದಿತ್ತ ನಾಯಕ ಇಯಾನ್‌ ಮಾರ್ಗನ್‌ ಕೋಲ್ಕತಾ ತಂಡವನ್ನು ಮತ್ತೆ ಹಳಿಗೆ ಏರಿಸುವರೇ? ಇದು ಈ ಬಾರಿಯ ಕುತೂಹಲ.

Advertisement

ಮಾರ್ಗನ್‌ ಗೆಲುವಿನ ಮಾರ್ಗ?
ಶಾರೂಖ್‌ ಖಾನ್‌ ಒಡೆತನದ ಕೆಕೆಆರ್‌ ಈ ವರೆಗೆ ಎರಡು ಸಲ ಐಪಿಎಲ್‌ ಚಾಂಪಿಯನ್‌ ಆಗಿದೆ. 2012 ಮತ್ತು 2014ರಲ್ಲಿ. ಎರಡೂ ಸಲ ತಂಡದ ಸಾರಥಿಯಾಗಿದ್ದವರು ಗೌತಮ್‌ ಗಂಭೀರ್‌. ಅನಂತರ ಅದು ಫೈನಲ್‌ನತ್ತವೂ ಮುಖ ಮಾಡಿಲ್ಲ. ಕೆಕೆಆರ್‌ಗೆ ಗಂಭೀರ್‌ ಅವ ರಂಥ ಕ್ಯಾಪ್ಟನ್‌ ಲಭಿಸದಿದ್ದುದು ದೊಡ್ಡ ಹಿನ್ನಡೆ.

ಕೀಪರ್‌ ದಿನೇಶ್‌ ಕಾರ್ತಿಕ್‌ “ಕ್ಯಾಪ್ಟನ್ಸಿ ಮೆಟಿರಿಯಲ್‌’ ಅಲ್ಲವೇ ಅಲ್ಲ. ಹೀಗಾಗಿ ಕಳೆದ ಸಾಲಲ್ಲಿ ಇವರನ್ನು ಅರ್ಧದಲ್ಲೇ ಈ ಪಟ್ಟದಿಂದ ಕೆಳಗಿಳಿಸಿ ಇಯಾನ್‌ ಮಾರ್ಗನ್‌ಗೆ ಸಾರಥ್ಯ ವಹಿಸಲಾಯಿತು. ತಂಡ ಗೆಲ್ಲಲಾರಂಭಿಸಿತು. ಈ ಸಲ ಮಾರ್ಗನ್‌ ಪೂರ್ಣ ಪ್ರಮಾಣದ ನಾಯಕನಾಗಿ ಕರ್ತವ್ಯ ನಿಭಾಯಿಸಲಿರುವುದರಿಂದ ಕೆಕೆಆರ್‌ ಮೇಲೆ ನಂಬಿಕೆ ಹೆಚ್ಚಿದೆ.

7 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಮಾರ್ಗನ್‌ ಬ್ಯಾಟಿಂಗ್‌ನಲ್ಲೂ ಯಶಸ್ಸು ಕಂಡರು. 14 ಇನ್ನಿಂಗ್ಸ್‌ಗಳಿಂದ 418 ರನ್‌ ಪೇರಿಸಿದ್ದು, ತಂಡದ ಪರ ಸರ್ವಾಧಿಕ 24 ಸಿಕ್ಸರ್‌ ಸಿಡಿಸಿದ್ದೆಲ್ಲ ಮಾರ್ಗನ್‌ ಸಾಹಸಕ್ಕೆ ಸಾಕ್ಷಿ.

ಹಾಗೆಯೇ ಕಳೆದ ವರ್ಷದ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ 17 ಆಟಗಾರರನ್ನು ಉಳಿಸಿಕೊಳ್ಳುವ ಮೂಲ ಕೆಕೆಆರ್‌ ತನ್ನ ಮೇಲೆ ಹೆಚ್ಚಿನ ನಂಬಿಕೆ ಇರಿಸಿಕೊಂಡಿರುವುದು ಗಮನಾರ್ಹ.

Advertisement

ನಾಯಕತ್ವದಿಂದ ಮುಕ್ತಿ ಪಡೆದ ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬಹುದಾಗಿದೆ.

ನಾಲ್ವರ ಫಾರ್ಮ್ ನಿರ್ಣಾಯಕ
“ಪರ್ಪಲ್‌ ಬ್ರಿಗೇಡ್‌’ ಕೆಕೆಆರ್‌ ಗೆಲ್ಲಬೇಕಾದರೆ ಕೆರಿಬಿಯನ್‌ ಸ್ಟಾರ್ ಮಿಂಚಬೇಕು. ಇಲ್ಲಿನ ಆಲ್‌ರೌಂಡರ್‌ಗಳಾದ ಆ್ಯಂಡ್ರೆ ರಸೆಲ್‌ ಮತ್ತು ಸುನೀಲ್‌ ನಾರಾಯಣ್‌ ಕ್ಲಿಕ್‌ ಆದರೆ ತಂಡದ ಅರ್ಧ ಸಮಸ್ಯೆ ಬಗೆಹರಿದಂತೆ. ಕಳೆದ ಯುಎಇ ಆವೃತ್ತಿಯಲ್ಲಿ ಇವರಿಬ್ಬರದೂ ಘೋರ ವೈಫಲ್ಯವಾಗಿತ್ತು.

ತಂಡದ ಪ್ರಧಾನ ವೇಗಿ, ಬಹು ಕೋಟಿ ಮೊತ್ತದ ಪ್ಯಾಟ್‌ ಕಮಿನ್ಸ್‌ ಫಾರ್ಮ್ ಕೂಡ ಕೆಕೆಆರ್‌ ಯಶಸ್ಸಿನಲ್ಲಿ ನಿರ್ಣಾಯಕ. 2020ರಲ್ಲಿ ಈ ಆಸೀಸ್‌ ವೇಗಿಯ ವೈಫಲ್ಯ ಎನ್ನುವುದು ತಂಡಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು.
ಬಾಂಗ್ಲಾದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಮೇಲೂ ತಂಡ ಹೆಚ್ಚಿನ ನಂಬಿಕೆ ಇರಿಸಿದೆ.

ಭಾರತದ ಹೀರೋಗಳು
ಕೆಕೆಆರ್‌ ತಂಡದಲ್ಲಿ ಭಾರತದ ಹೀರೋಗಳು ಬಹಳಷ್ಟು ಮಂದಿ ಇದ್ದಾರೆ. ಇವರಲ್ಲಿ ಪ್ರಸಿದ್ಧ್ ಕೃಷ್ಣ, ಶುಭಮನ್‌ ಗಿಲ್‌, ವರುಣ್‌ ಚಕ್ರವರ್ತಿ ಪ್ರಮುಖರು. ಪ್ರಸಿದ್ಧ್ ಕೃಷ್ಣ ಮತ್ತು ಗಿಲ್‌ ಟೀಮ್‌ ಇಂಡಿಯಾವನ್ನು ಪ್ರತಿನಿಧಿಸಿದ ಆತ್ಮವಿಶ್ವಾಸದಲ್ಲಿದ್ದಾರೆ. ಮಿಸ್ಟರಿ ಸ್ಪಿನ್ನರ್‌ ಚಕ್ರವರ್ತಿಗೆ ಈ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿತು. ಆದರೂ 2020ರಲ್ಲಿ ಸರ್ವಾಧಿಕ 17 ವಿಕೆಟ್‌ ಉರುಳಿಸಿದ್ದನ್ನು ಮರೆಯುವಂತಿಲ್ಲ.

ತಂಡದ ದೌರ್ಬಲ್ಯ
ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಮತ್ತು ಪ್ರಧಾನ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಅವರ ಅವರ ಕಳಪೆ ಫಾರ್ಮ್. ತಂಡಕ್ಕೆ ಹೊಸತಾಗಿ ಸೇರ್ಪಡೆಯಾಗಿರುವ ಹರ್ಭಜನ್‌ ಸಿಂಗ್‌ ಸ್ಪಿನ್‌ ಅಸ್ತ್ರವನ್ನು ಪ್ರಯೋಗಿಸಬೇಕಿದೆ.

ಯುವ ಪ್ರತಿಭೆಗಳು
ಹಿಮಾಚಲ ಪ್ರದೇಶದ ಮಧ್ಯಮ ವೇಗಿ ವೈಭವ ಅರೋರಾ, ಮಧ್ಯಪ್ರದೇಶದ ಎಡಗೈ ಬ್ಯಾಟ್ಸ್‌ಮನ್‌ ವೆಂಕಟೇಶ್‌ ಅಯ್ಯರ್‌ ಈ ಬಾರಿಯ ಅಚ್ಚರಿಯ ಹೊಸ ಮುಖಗಳು. ಇವರಲ್ಲಿ ಆಯ್ಯರ್‌ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಪಂಜಾಬ್‌ ಎದುರು 198 ರನ್‌ ಸಿಡಿಸಿದ್ದಾರೆ. ಅರೋರಾ ಮಹಾರಾಷ್ಟ್ರ ಎದುರು ತಮ್ಮ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್‌ ಸಾಧನೆಗೈದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next