Advertisement

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಧರ್ಮಪ್ರಭುತ್ವ ಸವಾರಿ

03:19 PM May 07, 2017 | |

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅಧಿಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಧರ್ಮ ಪ್ರಭುತ್ವ ಸವಾರಿ ಮಾಡುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ಅರವಿಂದ ಮಾಲಗತ್ತಿ ಹೇಳಿದರು. 

Advertisement

ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ನಡೆದ “ಮೇ ಸಾಹಿತ್ಯ ಮೇಳ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಪ್ರಜಾಪ್ರಭುತ್ವ ಧರ್ಮಪ್ರಭುತ್ವದ ಎದುರು ಮಂಡಿಯೂರಿ ನಿಂತಿದೆ. ರಾಜಕಾರಣದಲ್ಲಿ ಧರ್ಮ ಪ್ರವೇಶ ಮಾಡುತ್ತಿದ್ದು, ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ.

ಆರಂಭದಲ್ಲಿ ಇದು ಕೆಲವರಿಗೆ ಹಿತಕರವೆನಿಸಿದರೂ ಮುಂದೆ ಇದರ ಕರಾಳ ಸ್ವರೂಪ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಜಾ ಪ್ರಭುತ್ವದಲ್ಲಿ ಧರ್ಮಕ್ಕೆ ಅವಕಾಶ ನೀಡುವುದು ಉಡಿಯಲ್ಲಿ ಪೆಟ್ರೋಲ್‌ ಕಟ್ಟಿಕೊಂಡು ಬೆಂಕಿಯ ಮುಂದೆ ಆಟವಾಡಿದಂತೆ. ನೆರೆ ದೇಶ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದಲ್ಲಿ ಧರ್ಮ ಪ್ರವೇಶಿಸಿದ್ದರಿಂದ ಅಲ್ಲಿ ಅಯೋಮಯ ಸ್ಥಿತಿ ಉಂಟಾಗಿದೆ ಎಂದರು. 

ಕಾವಿ ತ್ಯಜಿಸಿ ರಾಜಕೀಯಕ್ಕೆ ಬರಲಿ: ಸನ್ಯಾಸಿಗಳು ರಾಜಕೀಯಕ್ಕೆ ಬರುವುದು ತಪ್ಪಲ್ಲ. ಆದರೆ ಅವರು ರಾಜಕೀಯ ಕ್ಷೇತ್ರಕ್ಕೆ ಬರುವ ಮುಂಚೆ ತಮ್ಮ ಸನ್ಯಾಸಿ ವಸ್ತ್ರಗಳನ್ನು, ಸಂಕೇತಗಳನ್ನು ತ್ಯಜಿಸಿ ಬರಬೇಕು. ಈ ಕುರಿತು ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ನೂತನ ವಿಧಿಗಳನ್ನು ರೂಪಿಸಬೇಕು.

ಆಗ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದರು. ಕೋಮುವಾದಿ ಪಕ್ಷವೊಂದು ಮುಂದಿನ ವಿಧಾನಸಭಾ ಚುನಾವಣೆಗಾಗಿ 20 ಸನ್ಯಾಸಿಗಳನ್ನು ಹುಡುಕುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಜನಪರ ಹೋರಾಟಗಾರರು ಇದರ ವಿರುದ್ಧ ಧ್ವನಿ ಎತ್ತಬೇಕು.

Advertisement

ಪ್ರಜಾಸತ್ತೆ ಉಳಿಸಿ ಧರ್ಮಾಧಿಪತ್ಯ ಅಳಿಸಿ ಎಂಬುದು ಧ್ಯೇಯವಾಗಬೇಕು. ವೈಶ್ವಿ‌ಕ ಸಾಹಿತ್ಯ ಎಂಬ ಹೊಸ ಸಾಹಿತ್ಯ ಪ್ರಕಾರ ಬರುತ್ತಿದ್ದು, ಸಮಾಜ- ದೇಶಿಯ ನೆಲೆಯಿಂದ ವಿದೇಶಿ ವಿದ್ಯಮಾನಗಳ ಮುಖಾಮುಖೀಯ ಅನುಭವ ಅಭಿವ್ಯಕ್ತಿ ಬರಹವೇ ವೈಶ್ವಿ‌ಕ ಸಾಹಿತ್ಯವಾಗಿದೆ ಎಂದರು.

ಮಧ್ಯಮ ಸಾಹಿತಿಗಳ ಪ್ರಾಮಾಣಿಕತೆ: ಕನ್ನಡ ಸಾಹಿತ್ಯ ಲೋಕ ಬೌದ್ಧಿಕವಾಗಿ ಜರ್ಜರಿತವಾಗಿದೆ. ಎಡ, ಬಲದ ಹೊರತಾಗಿ ಮಧ್ಯಮ ಮಾರ್ಗದ ಸಾಹಿತ್ಯ ಪ್ರಕಾರ ಹೊಸ ಮಾರ್ಗವಾಗಿದ್ದರೂ ಸಾಹಿತಿಗಳ ಪ್ರಾಮಾಣಿಕತೆ ಬಗ್ಗೆ ತಿಳಿಯುವುದು ಅವಶ್ಯ. ನನ್ನ ಪ್ರಕಾರ ಮಾಧ್ಯಮ ಮಾರ್ಗವೆಂಬುದು ಅಫಾÕತ್‌ ಮಾರ್ಗ.

ಇದು ಶರಣಾಗತಿ ಅಥವಾ ಒಪ್ಪಂದ ಮಾರ್ಗ. ಮೃದು ಧೋರಣೆ ಸ್ವಾಗತಾರ್ಹವಾದರೂ ಮಾರ್ಗದ ಅಂತಃಸತ್ವ, ಸಾಹಿತಿಗಳ ಪ್ರಾಮಾಣಿಕತೆ ತಿಳಿಯವುದು ಅವಶ್ಯ. ಅಂತರ್ಜಾತಿ  ವಿವಾಹ ಕುರಿತು ಅವರ ವಿಚಾರ ಅರಿಯಬೇಕು ಎಂದು ವಿವರಿಸಿದರು. 

ಮನುಷ್ಯನ ಜೀವಕ್ಕೂ ಇದೆ ಬೆಲೆ: ಭಾರತದಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ನಿರಂತರ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ದನಗಳ ಜೀವಕ್ಕಿಂತ ಮನುಷ್ಯರ ಜೀವ ಅಗ್ಗವಾಗುತ್ತಿದೆ ಎಂದು ಗೋವುಗಳನ್ನು ಪೂಜಿಸುವ ನೆಪದಲ್ಲಿ ನಿರಂತರ ದಾಳಿ ನಡೆಯುತ್ತಿದೆ.

ಅನೇಕರನ್ನು ಹತ್ಯೆ ಮಾಡಲಾಗಿದೆ. ಗೋವಿನ ಹೆಸರಿನಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಇಂಥ ಘಟನೆಗಳು ಘಟಿಸಲು ಕುಮ್ಮಕ್ಕು ನೀಡಲಾಗುತ್ತಿದೆ. ಗೋವಿಗಾಗಿ ಇನ್ನೊಬ್ಬರ ಜೀವ ತೆಗೆಯುವ ಅವಶ್ಯಕತೆಯಿಲ್ಲ. ಮನುಷ್ಯನ ಜೀವಕ್ಕೂ ಬೆಲೆಯಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next