ಕಲಬುರಗಿ: ಬಹುತೇಕ ಜನ ಸೈಕ್ಲಿಂಗ್‌ನ್ನು ತಮ್ಮ ಹವ್ಯಾಸಕ್ಕಾಗಿಯೋ ಅಥವಾ ಯಾವುದೋ ದಾಖಲೆ ಸೃಷ್ಟಿ ಮಾಡಲೆಂದೋ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ಕಳೆದ ಎರಡು ತಿಂಗಳ ಹಿಂದೆ ನಿಧನರಾದ ನಟ ಪುನೀತ್ ರಾಜಕುಮಾರ ಸ್ಮರಣೆ ಮತ್ತು ಅವರಿಗೆ ಅರ್ಪಿಸಲೆಂದೇ ಸೈಕ್ಲಿಂಗ್ ಮಾಡುತ್ತಿದ್ದಾರೆ. ಏಕಾಂಗಿಯಾಗಿ ಸೈಕಲ್ ತುಳಿಯುತ್ತಲೇ ರಾಜ್ಯ ಸುತ್ತುತ್ತಿದ್ದಾರೆ.
ಬೆಂಗಳೂರಿನ ಶರತ್ ಕುಮಾರ ಸಿದ್ಧನೂರ ಎಂಬುವವರೇ ಈ ಸಾಹಸಿ. ನ.22ರಂದು ಬೆಂಗಳೂರಿನ ಮಾಗಡಿ ರಸ್ತೆಯಿಂದ ಸೈಕ್ಲಿಂಗ್ ಆರಂಭಿಸಿದ್ದು, ಇದೀಗ ಕಲಬುರಗಿ ನಗರಕ್ಕೆ ತಲುಪಿದ್ದಾರೆ. ಮನೆಯಿಂದ ಹೊರಟು ಈಗಾಗಲೇ 40 ದಿನ ಕಳೆದಿದ್ದು, ಸುಮಾರು ಒಂದು ಸಾವಿರ ಕಿಲೋ ಮೀಟರ್ ಸೈಕ್ಲಿಂಗ್ ಮಾಡಿದ್ದಾರೆ.
ಶುಕ್ರವಾರ ನಗರದ ಯಾತ್ರಿಕ ನಿವಾಸದ ಸಮೀಪ “ಉದಯವಾಣಿ’ ಜತೆ ಶರತ್ ಮಾತಿಗೆ ಸಿಕ್ಕರು. ನಟ ಪುನೀತ್ ಅವರಿಗೆ ಅರ್ಪಿಸುವ ಉದ್ದೇಶದಿಂದ ಸೈಕ್ಲಿಂಗ್ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಅಪ್ಪು ಅವರಿಗೂ ಸೈಕ್ಲಿಂಗ್ ಅಚ್ಚುಮೆಚ್ಚು ಆಗಿದ್ದರಿಂದ ಅವರ ಸ್ಮರಣೆಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದೇನೆ. ಬೆಂಗಳೂರಿನಿಂದ ಹೊರಟು ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸೈಕ್ಲಿಂಗ್ ಮುಗಿಸಿದ್ದೇನೆ ಎಂದು ಹೇಳಿದರು.
ನಿತ್ಯ 50 ಕಿ.ಮೀ ಸಂಚಾರ
ಗೂಗಲ್ ಸರ್ಚ್ ಇಂಜಿನ್‌ನ ಪರಿಣಿತರಾದ ಶರತ್ ಅವರಿಗೆ ಸೈಕ್ಲಿಂಗ್ ಹವ್ಯಾಸವಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೈಕಲ್ ಮೂಲಕವೇ ಸಂಚರಿಸುತ್ತಿರುವ ಇವರು ನಿತ್ಯವೂ ಸರಿಸುಮಾರು 50 ಕಿ.ಮೀ ಸೈಕಲ್ ತುಳಿಯುತ್ತಿದ್ದಾರೆ. ಎಲ್ಲೆಡೆ “ರೈಡ್ ಫಾರ್ ಅಪ್ಪು’ ಎಂದು ಹೊರಟಿದ್ದಾರೆ. ಪುನೀತ್ ಸ್ಮರಣೆಯಲ್ಲಿ ಮಾಡುತ್ತಿರುವ ಈ ಸೈಕ್ಲಿಂಗ್‌ಗೆ ಇದುವರೆಗೆ ಸಂಚಾರ ಮಾಡಿದ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸೈಕಲ್ ಮೇಲಿನ “ರೈಡ್ ಫಾರ್ ಅಪ್ಪು’ ಬರಹ ನೋಡಿಯೇ ಅವರ ಅಭಿಮಾನಿಗಳು ಆತ್ಮೀಯವಾಗಿ ತಮ್ಮ ಜಿಲ್ಲೆಗೆ ಸ್ವಾಗತಿಸುತ್ತಿದ್ದಾರೆ. ಅಲ್ಲದೇ, ಕೆಲವು ಕಡೆಗಳಲ್ಲಿ ರಾತ್ರಿ ವಸತಿ ವ್ಯವಸ್ಥೆಯನ್ನು ಅಪ್ಪು ಅಭಿಮಾನಿಗಳೇ ಮಾಡಿದ್ದರು. ಉಳಿದಂತೆ ಮಠ ಮಾನ್ಯಗಳಲ್ಲಿ ರಾತ್ರಿ ಕಳೆದು ಮುಂದೆ ಸಂಚರಿಸುತ್ತಿದ್ದೇನೆ ಎನ್ನುತ್ತಾರೆ ಅವರು.
ತಾಣಗಳ ಪರಿಚಯಿಸುವ ಗುರಿ
ಸೈಕ್ಲಿಂಗ್ ಮೂಲಕ ತಾವು ಸಂಚರಿಸುವ ಜಿಲ್ಲೆ ಮತ್ತು ಪ್ರದೇಶದ ಸ್ಥಳೀಯ ತಾಣಗಳು, ವಿಶೇಷ ಆಹಾರ ಪದ್ಧತಿ ಪರಿಚಯಿಸುವ ಉದ್ದೇಶ ಹೊಂದಿದ್ದೇನೆ. ಮೊಬೈಲ್‌ನಲ್ಲಿ ಸ್ಥಳೀಯ ವಿಶೇಷತೆಗಳನ್ನು ಚಿತ್ರೀಕರಿಸಿ ಅದನ್ನು ಯೂ-ಟೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಮುಂದೆ ಬೀದರ್, ವಿಜಯಪುರ, ಬೆಳಗಾವಿ, ಕಾರವಾರ, ಮಂಗಳೂರು… ಹೀಗೆ ಎಲ್ಲ ಜಿಲ್ಲೆಗಳಲ್ಲಿ ಸೈಕ್ಲಿಂಗ್ ಮೂಲಕ ಸಂಚರಿಸಿ ಬೆಂಗಳೂರಿಗೆ ತಲುಪಲಾಗುತ್ತದೆ ಎಂದು ಶರತ್ ಹೇಳುತ್ತಾರೆ.
ನಟ ಪುನೀತ್ ರಾಜಕುಮಾರ ಅವರ ಸ್ಮರಣೆ ಮತ್ತು ಈ ಸೈಕ್ಲಿಂಗ್ ಅವರಿಗೆ ಅರ್ಪಿಸಲು ರಾಜ್ಯ ಸುತ್ತುತ್ತಿದ್ದೇನೆ. ಒಟ್ಟಾರೆ ಅಂದಾಜು 4 ಸಾವಿರಕ್ಕೂ ಅಧಿಕ ಕಿ.ಮೀ ಆಗಲಿದ್ದು, ಮೂರೂವರೆ ತಿಂಗಳ ಕಾಲ ಈ ಸಂಚಾರ ನಡೆಯಲಿದೆ. ರಾಜ್ಯ ಸುತ್ತಿದ ಮೇಲೆ ಅಪ್ಪು ಸಮಾಧಿಗೆ ಹೋಗಿ ನಮನ ಸಲ್ಲಿಸಲಿದ್ದೇನೆ.
–ಶರತ್ ಸಿದ್ದನೂರ, ಸೈಕ್ಲಿಂಗ್ ಸಾಹಸಿ
-ರಂಗಪ್ಪ ಗಧಾರ