ಫಿನ್‌ಲೆಂಡ್ ಶಿಶಿರ ಋತುವಿನ ದೇಶ. ಈ ಋತುವಿನಲ್ಲಿ ಎಲ್ಲೆಲ್ಲೂ ಬರೀ ಹಿಮಮಯವೇ. ಇದೆಲ್ಲಕ್ಕೆ ಕಳಸವಿಟ್ಟ ಹಾಗೆ ಶೂನ್ಯಕ್ಕಿಂತ ಕಡಿಮೆ ಉಷ್ಣತೆ ಈ ಕಾಲದಲ್ಲಿ ಸರ್ವೇ ಸಾಮಾನ್ಯ. ಚಳಿಗಾಲದ ದಿನಗಳಲ್ಲಿ ವಾರಗಟ್ಟಲೆ ಅತ್ಯಧಿಕ ಉಷ್ಣತೆ 0′ ಅಥವಾ 1′ ಡಿಗ್ರಿ ಇರುತ್ತದೆ. ನಿಮಗೆ ಆಶ್ಚರ್ಯ ಎನಿಸಬಹುದು, ಇಲ್ಲಿನ ಜನರು ಮರಗಟ್ಟಿಸುವ ಈ ಚಳಿ ದಿನಗಳಲ್ಲಿ ಯಾವ ರೀತಿ ಜೀವನ ನಡೆಸುತ್ತಾರೆ ಎಂದು. ಇವರ ಜೀವನೋತ್ಸಾಹ ನಿಮಗೆ ಖಂಡಿತ ಬೆರಗು ಹುಟ್ಟಿಸುತ್ತದೆ. ಕೆಟ್ಟ ಹವಾಗುಣ ಎನ್ನುವುದು ಇಲ್ಲವೇ ಇಲ್ಲ, ಸಮಯೋಚಿತ ಉಡುಪು ಧರಿಸದಿರುವುದೇ ದೋಷ ಎಂಬ ನಂಬಿಕೆ ಫಿನ್‌ಲೆಂಡಿನ ಜನರದ್ದು.
ಅಗಲ ಚಕ್ರದ ಸೈಕಲ್ ಸವಾರಿ, ಬಫìದ ಮೇಲೆ ಜಾರುವ ಆಟ, (ಸ್ಕೀಯಿಂಗ್) ಇಳಿಜಾರಿನಲ್ಲಿ ಜಾರುವ ಆಟ, ಮಂಜು ಮುಸುಕಿದ ಗುಡ್ಡಗಾಡಿನಲ್ಲಿ ಸ್ಕೇಟಿಂಗ್ ಅಥವಾ ವೇಗವಾಗಿ ಸ್ಕೇಟಿಂಗ್ ಮಾಡುವ ನೋರ್ಡಿಕ್ ಸ್ಕೇಟಿಂಗ್, ಹಿಮಗಟ್ಟಿದ ಸರೋವರಗಳ ಮೇಲೆ ಆರಾಮದಾಯಕ ವಿಹಾರ, ಹಬೆಯ ಸ್ನಾನ ಹಾಗೂ ಕೊರೆಯುವ ನೀರಿನಲ್ಲಿ ಈಜಾಡುವುದು ಮುಂತಾದ ಚಟುವಟಿಕೆಗಳು ಚಳಿಗಾಲದ ಹರ್ಷವನ್ನು ಇಮ್ಮಡಿಗೊಳಿಸುತ್ತವೆ. ಫಿನ್‌ಲೆಂಡಿನಲ್ಲಿ ನನ್ನ ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
ಡಿಸೆಂಬರ್ 6 ಫಿನ್‌ಲೆಂಡಿನ ರಾಷ್ಟ್ರೀಯ ದಿನ. ಆ ದಿನದ ರಜೆಯೂ ಸೇರಿ ನನಗೆ ಒಂದು ದೀರ್ಘ ವಾರಾಂತ್ಯದ ರಜೆ ದೊರಕಿತು. ಫಿನ್‌ಲೆಂಡಿನ ಉತ್ತರದಲ್ಲಿರುವ ಲಾಪ್‌ಲ್ಯಾಂಡ್ ಪ್ರಾಂತ್ಯದ ರಾಜಧಾನಿಯಾದ ರೊವೆನೆಮಿಗೆ ನಾನು ಪ್ರಯಾಣ ಮಾಡಿದೆ. ಮಂಜಿನಲ್ಲಿ ಸೈಕ್ಲಿಂಗ್ ನನ್ನ ಅಪೇಕ್ಷೆಗಳ ಪಟ್ಟಿಯಲ್ಲಿದ್ದ ಒಂದು ಅಂಶ. ರೋಲ್ ಔಟ್ ಡೋರ್ಸ್ ಸಂಸ್ಥೆ ನನ್ನ ಚಳಿಗಾಲದ ಸೈಕಲ್ ಸವಾರಿಗೆ ಬೇಕಾಗಿದ್ದ ಸಮಗ್ರ ಸಾಮಗ್ರಿಗಳನ್ನು ಒದಗಿಸಿತು. ಮೊದಲಿಗೆ ಅಗಲ ಚಕ್ರದ ಸೈಕಲ್‌ಗೆ ನನ್ನನ್ನು ನಾನು ಹೊಂದಿಸಿಕೊಳ್ಳಲು ಅಲ್ಲಿನ ಗ್ಯಾರೇಜ್‌ನಲ್ಲಿಯೇ ಸ್ವಲ್ಪ ಅಭ್ಯಾಸ ಮಾಡಿಕೊಂಡೆ. ಆನಂತರ ರೊವೆನೆಮಿ ಸಮೀಪದ ಮಂಜು ಮುಸುಕಿದ ಕಾಡಿನ ದಾರಿಯನ್ನು ಶೋಧಿಸುತ್ತ ಸಾಗಿದೆ.
ಹಾಗೆಯೇ ಏರುದಾರಿಯಲ್ಲಿ ಸಾಗಿ ಹತ್ತಿರದ ಬೆಟ್ಟದ ತುತ್ತತುದಿ ಸ್ಥಳವಾದ ಟೊಟ್ಟೋರಕ್ಕಾ ವನ್ನು ತಲುಪಿದೆ. ಈ ಪರ್ವತಾಗ್ರದಿಂದ ಕಾಣುವ ನೋಟ ಮನಮೋಹಕವಾಗಿತ್ತು. ಈ ಎತ್ತರದಿಂದ ಕಂಡ ಸಂಪೂರ್ಣ ಹಿಮ ಕವಿದ ಅರಣ್ಯಗಳ ನೋಟ ನನ್ನ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಇಳಿಜಾರಿನ ಸವಾರಿಯಂತೂ ಬಹಳ ಸವಾಲಿನದಾಗಿತ್ತು. ಕೆಲವು ಪ್ರಯಾಸಕರ ತಿರುವುಗಳಲ್ಲಿ ಬಂಡೆಗಲ್ಲು ಮತ್ತು ಮರಗಳನ್ನು ಸಂಭಾಳಿಸಿಕೊಂಡು ಸಾಗಬೇಕಿತ್ತು. ಆಗ ಒಂದೆರಡು ಬಾರಿ ಜಾರಿ ಬಿದ್ದೆನಾದರೂ ಮೆತ್ತನೆಯ ಹಿಮದ ಹಾಸು ನನ್ನನ್ನು ಕಾಪಾಡಿತು. ಮಂಜು ನಿಸರ್ಗವೇ ಒದಗಿಸಿದ ಅಪಘಾತ ತಡೆ ಎನಿಸಿತು.
ಹೆಲ್ಸಿಂಕಿಯಲ್ಲಿನ ಒಂದು ಶುಭ ಮುಂಜಾನೆಯಲ್ಲಿ ನನ್ನ ಮತ್ತೂಂದು ಚಳಿಗಾಲದ ಅನ್ವೇಷಣೆ ಮೊದಲಾಯಿತು. ಆ ದಿನ ನುಕ್ಸಿಯೋದಲ್ಲಿನ ಫಿನಿಶ್ ಪ್ರಕೃತಿ ಕೇಂದ್ರ ಹಲ್ಟಿಯಾ ಗೆ ಭೇಟಿ ಕೊಡುವುದು ನನ್ನ ಉದ್ದೇಶವಾಗಿತ್ತು. ಹಲ್ಟಿಯಾಕ್ಕೆ ಸಾಗುವ ಮಾರ್ಗದ ಬಸ್ ಪ್ರಯಾಣ ಒಂದು ಸುಂದರ ಅನುಭವ. ಕಳೆದ ಹತ್ತು ದಿನಗಳಿಂದ ಬೀಳುತ್ತಿದ್ದ ಮಂಜಿನ ಕಾರಣದಿಂದ ಅಲ್ಲಿನ ವಿಸ್ತಾರವಾದ ಕೃಷಿ ಭೂಮಿಗಳು ಸರೋವರಗಳು ಹಾಗೂ ಎಲ್ಲಾಭೂಪ್ರದೇಶಗಳು ಬಿಳಿಯ ಚಾದರ ಹೊದ್ದಂತೆ ಇತ್ತು. ಹಲ್ಟಿಯಾದ ಪ್ರಕೃತಿ ಕೇಂದ್ರದಲ್ಲಿನ ಸ್ನೇಹಪೂರ್ಣ ವ್ಯಕ್ತಿ ನನಗೆ ಅಲ್ಲಿ ದೊರಕುವಂಥ ವಿವಿಧ ಸೇವೆಗಳ ಬಗ್ಗೆ ವಿವರಿಸಿದರು. ನನ್ನ ಅಲ್ಲಿನ ಅಲೆದಾಟಕ್ಕೆ ಸಹಾಯ ಆಗುವ ಒಂದು ನಕ್ಷೆಯನ್ನು ಒದಗಿಸಿದರು. ನಕ್ಷೆ ಮತ್ತು ಅದರಲ್ಲಿನ ಗುರುತುಗಳ ಸಹಾಯದಿಂದ ಪ್ರವಾಸಿಗರು ತುಂಬ ಸುಲಭವಾಗಿ ಕಾಡಿನ ದಾರಿಯಲ್ಲಿ ಅಲೆದಾಡಬಹುದು.
ಹಿಮಾವೃತವಾದ ಅಲ್ಲಿನ ಪ್ರದೇಶಗಳನ್ನು ಕಂಡಾಗ ರೋಮಾಂಚನದಿಂದ ನನ್ನ ಹೃದಯದ ಮಿಡಿತ ಒಂದು ಕ್ಷಣ ಸ್ತಬ್ದವಾಯಿತು. ಮಂಜು ಮುಸುಕಿದ ಮರಗಳು, ಮಂಜನ್ನೇ ಹಾಸಿ ಹೊದ್ದಂಥ ಹಾದಿ ನನ್ನ ಸಂಚಾರವನ್ನು ಸುಂದರ ಮತ್ತು ವಿಸ್ಮಯಗೊಳಿಸಿತು. ನಾನು ನಕ್ಷೆಯಲ್ಲಿನ ಗುರುತುಗಳ ಜಾಡುಹಿಡಿದು ಅಲ್ಲಿನ ಸಮಗ್ರ ಅವಲೋಕನದ ಶೃಂಗಸ್ಥಳವನ್ನು ತಲುಪಿದೆ. ಅಲ್ಲಿಂದ ಕಂಡ ದೃಶ್ಯಕಾವ್ಯದಂತಹ ರಾಷ್ಟ್ರೀಯ ಉದ್ಯಾನವನ ಮತ್ತು ಹೆಪ್ಪುಗಟ್ಟಿದ ಸರೋವರದ ನೋಟ. ಪ್ರಕೃತಿ ಇಲ್ಲದಿದ್ದರೆ ನಾವು ಶೂನ್ಯ ಎಂಬ ಮಾತು ಎಷ್ಟೊಂದು ಸತ್ಯ ಎನಿಸಿತು.
– ರಮೇಶಬಾಬು ಪಿ. ವಿ.