ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್, ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಟೀಂ ಇಂಡಿಯಾದ ಮುಖ್ಯ ತರಬೇತುದಾರ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಬಿಸಿಸಿಐ ಕೂಡಾ ಈ ಬಗ್ಗೆ ಆಸೀಸ್ ದಿಗ್ಗಜನನ್ನು ಸಂಪರ್ಕ ಮಾಡಿತ್ತು. ಆದರೆ ರಿಕಿ ಪಾಂಟಿಂಗ್ ಅವರು ಟೀಂ ಇಂಡಿಯಾ ಕೋಚ್ ಆಗಲು ಒಲ್ಲೆ ಎಂದಿದ್ದಾರೆ.
ಭಾರತೀಯ ಪುರುಷರ ತಂಡದ ಮುಂದಿನ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಳ್ಳಲು ತನ್ನನ್ನು ಸಂಪರ್ಕಿಸಲಾಗಿದೆ ಎಂದು ಪಾಂಟಿಂಗ್ ಬಹಿರಂಗಪಡಿಸಿದರು ಆದರೆ ಅದು ಅವರ “ಸದ್ಯದ ಜೀವನಶೈಲಿಗೆ” ಸರಿಹೊಂದುವುದಿಲ್ಲ ಎಂದು ಹೇಳಿದರು.
ಸದ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿಯು ಟಿ20 ವಿಶ್ವಕಪ್ ಗೆ ಅಂತ್ಯವಾಗಲಿದೆ. ಹೀಗಾಗಿ ಬಿಸಿಸಿಐ ಹೊಸ ಕೋಚ್ ಗಾಗಿ ಅರ್ಜಿ ಆಹ್ವಾನ ಮಾಡಿದೆ. ಮೇ 27ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
“ನಾನು ರಾಷ್ಟ್ರೀಯ ತಂಡದ ಹಿರಿಯ ತರಬೇತುದಾರನಾಗಲು ಇಷ್ಟಪಡುತ್ತೇನೆ, ಆದರೆ ನನ್ನ ಜೀವನದಲ್ಲಿ ನಾನು ಹೊಂದಿರುವ ಇತರ ವಿಷಯಗಳೊಂದಿಗೆ ಮತ್ತು ಮನೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ಬಯಸುತ್ತೇನೆ. ನೀವು ಭಾರತೀಯ ತಂಡದೊಂಧಿಗೆ ಕೆಲಸ ಮಾಡಿದರೆ ಐಪಿಎಲ್ ತಂಡದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ರಾಷ್ಟ್ರೀಯ ಮುಖ್ಯ ತರಬೇತುದಾರನ ಕೆಲಸ ವರ್ಷದ 10 ಅಥವಾ 11-ತಿಂಗಳ ಇರುತ್ತದೆ. ಆದರೆ ಇದು ಇದೀಗ ನನ್ನ ಜೀವನಶೈಲಿಗೆ ಮತ್ತು ನಾನು ನಿಜವಾಗಿಯೂ ಆನಂದಿಸುವ ವಿಷಯಗಳಿಗೆ ಹೊಂದಿಕೆಯಾಗುವುದಿಲ್ಲ” ಎಂದು ಪಾಂಟಿಂಗ್ ಹೇಳಿದರು.
ಇದೇ ವೇಳೆ ಆರ್ ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. “ನಾನು ಅರ್ಜಿ ಹಾಕಿಲ್ಲ, ಹಾಕುವುದು ಇಲ್ಲ. ಸದ್ಯ ನಾನು ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಖುಷಿಯಾಗಿದ್ದೇನೆ” ಎಂದು ಫ್ಲವರ್ ಹೇಳಿದ್ದಾರೆ.