ಪಡುಬಿದ್ರಿ: ರಿಕ್ಷಾ ಚಾಲಕರೂ ನಮ್ಮಂತೆಯೇ ಖಾಕಿ ಧರಿಸಿ ತಮ್ಮ ಕರ್ತವ್ಯ ನಿಭಾಯಿಸಬೇಕು. ನಿಮ್ಮ ದಾಖಲೆಗಳು ರಿಕ್ಷಾದಲ್ಲಿರಲಿ. ಜನತೆಯ ಸನಿಹ ಸದಾ ತಾವು ಇರುತ್ತಿದ್ದು ರಾತ್ರಿಯ ವೇಳೆ ಯಾವುದೇ ಅನುಮಾನಾಸ್ಪದ ವ್ಯಕ್ತಿಯ ಕುರಿತಾಗಿ ತಮಗೆ ಸಂಶಯ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿರಿ. ಹಾಗೆಯೇ ಮಾನವೀಯ ನೆಲೆಯಲ್ಲಿ ಹೆದ್ದಾರಿ ಅಪಘಾತ ಸಂಭವಿಸಿದಲ್ಲಿ ಗಾಯಾಳುಗಳ ರಕ್ಷಣೆಗಾಗಿ ಸಹಕರಿಸಿ ಎಂದು ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ಅವರು ಹೇಳಿದರು.
ಅವರು ಜೂ. 26ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ, ಪಲಿಮಾರು, ಎರ್ಮಾಳು, ಬಡಾ ಹಾಗೂ ಪಡುಬಿದ್ರಿ ರಿಕ್ಷಾ ಚಾಲಕ -ಮಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಒಯ್ಯಲಾಗುತ್ತದೆ. ಇದನ್ನು ತಾವೂ ಗಮನಿಸಿದ್ದು ಆದರೆ ಮಕ್ಕಳ ಪ್ರಾಣ ರಕ್ಷಣೆ ನಿಮ್ಮ ಹೊಣೆಯಾಗುತ್ತದೆ. ಮಿತಿಮೀರಿ ಮಕ್ಕಳನ್ನು ರಿಕ್ಷಾದಲ್ಲಿ ತುಂಬಿಸಿಕೊಂಡು ಹೋಗುವಾಗ ಓವರ್‌ಸ್ಪೀಡ್, ಓವರ್‌ಟೇಕ್‌ಗಳು ಖಂಡಿತಾ ಬೇಡ. ಪುಟಾಣಿಗಳ ಹೊಣೆ ನಿಮ್ಮದಾಗುತ್ತದೆ. ಈ ವೇಳೆ ರಿಕ್ಷಾ ಚಾಲಕರೂ ಕಾನೂನಿನ ಪರಿವೆಯಿಲ್ಲದೇ ವ್ಯವಹರಿಸುವಂತಿಲ್ಲ ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರಿಕ್ಷಾ ಚಾಲಕರು ತಮ್ಮ ಸಮಸ್ಯೆಗಳ ಕುರಿತಾಗಿಯೂ ಪೊಲೀಸರ ಗಮನ ಸೆಳೆದರು. ರಿಕ್ಷಾ ಸ್ಟ್ಯಾಂಡ್‌ಗೆ ಬರದೇ ಬಾಡಿಗೆ ಮಾಡುತ್ತಿರುವುದು. ಪಡುಬಿದ್ರಿಯಲ್ಲಿ ಸಂತೆ ದಿನವಾದರೂ ಕಾರ್ಕಳ ಮಾರ್ಗದಿಂದ ಬರುವಾಗ ಅಮರ್ ಕಂಫರ್ಟ್ಸ್ವರೆಗೆ ಹೋಗಿ ತಿರುಗಿ ಬರುವುದು, ಪಡುಬಿದ್ರಿಯ ಹೆದ್ದಾರಿ ವ್ಯವಸ್ಥೆಗಳು ಸರಿ ಹೊಂದುವಲ್ಲಿಯವರೆಗೆ ಪರಿಸ್ಥಿತಿಯ ನಿಭಾವಣೆಗಳಿಗೆ ಪರಸ್ಪರ ಒಪ್ಪಿಕೊಳ್ಳಲಾಯಿತು.ಪಡುಬಿದ್ರಿಯಲ್ಲಿ ಕಾರ್ಕಳ ರಸ್ತೆ ಹೆದ್ದಾರಿ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್‌ಗೆ ಬೇಡಿಕೆ, ಉಡುಪಿ, ಕಾರ್ಕಳ ಬಸ್ ನಿಲುಗಡೆಯನ್ನು ವ್ಯವಸ್ಥಿತಗೊಳಿಸುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರೊಬೆಶನರಿ ಪಿಎಸ್‌ಐ ಉದಯರವಿ ಸ್ವಾಗತಿಸಿ ವಂದಿಸಿದರು.