Advertisement

ರಿಕ್ಷಾ ಚಾಲಕನ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

11:04 AM May 10, 2017 | |

ಮಂಗಳೂರು: ಬಾರ್‌ನಲ್ಲಿ  ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ಕಾರಣದಿಂದ ರಿಕ್ಷಾ ಚಾಲಕನ  ಕೊಲೆಗೈದ ಆರೋಪಿಗಳಾದ  ಕೋಟೆಕಾರು ಬಗಂಬಿಲದ ಉದಯ ಅಲಿಯಾಸ್‌ ಉದಯರಾಜ್‌ ಅಲಿಯಾಸ್‌ ಬಾಬು (38) ಹಾಗೂ ಪೆರ್ಮನ್ನೂರು 
ಪಂಡಿತ್‌ಹೌಸ್‌ ಸಂತೋಷ ನಗರದ  ಲ್ಯಾನ್ಸಿ ಡಿ’ಸೋಜಾ ಅಲಿಯಾಸ್‌ ಲ್ಯಾನ್ಸಿ ಅಲಿಯಾಸ್‌ ಮಾಮು (35) ಅವರಿಗೆ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಕೋಟೆಕಾರು  ಕೊಲ್ಯ  ಸಾರಸ್ವತ  ಕಾಲನಿ ನಿವಾಸಿ   ರಿಕ್ಷಾ ಚಾಲಕ  ಯತೀಶ್‌ ಕುಮಾರ್‌ ನನ್ನು   2014ರ ಆಗಸ್ಟ್‌ 15ರಂದು ಅಪರಾಧಿಗಳು   ತೊಕ್ಕೊಟ್ಟಿನ ಬಾರೊಂದರ ಎದುರು  ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಪ್ರಕರಣದಲ್ಲಿ  3ನೇ ಆರೋಪಿಯಾಗಿದ್ದ   ವಿನಯ ಅಲಿಯಾಸ್‌ ವಿನಯ ಕುಮಾರ್‌  ಮೇಲಿನ ಆರೋಪ ಸಾಬೀತಾಗದ ಕಾರಣ ನ್ಯಾಯಾಲಯ ಆತನನ್ನು  ಖುಲಾಸೆಗೊಳಿಸಿದೆ.

 ಪ್ರಕರಣದ ಬಗ್ಗೆ   ವಿಚಾರಣೆ ನಡೆಸಿದ  1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ. ಜೋಶಿ ಅವರು  ಆರೋಪಿಗಳ ಮೇಲಿನ ಅಪರಾಧ ಸಾಬೀತು ಆಗಿರುವ ಹಿನ್ನೆಲೆಯಲ್ಲಿ  ಜೀವಾವಧಿ ಶಿಕ್ಷೆ ಹಾಗೂ  ತಲಾ ರೂ. 20,000 ದಂಡ ವಿಧಿಸಿ ತೀರ್ಪು ನೀಡಿದರು. ದಂಡ ತೆರಲು ತಪ್ಪಿದಲ್ಲಿ   ಮತ್ತೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ  ಆದೇಶಿಸಿದ್ದಾರೆ. 

ಅಪರಾಧಿಗಳಲ್ಲಿ  ಉದಯ 2014ರಿಂದ ನ್ಯಾಯಾಂಗ ಬಂಧನದಲ್ಲಿದ್ದು  ಈ ಅವಧಿಯನ್ನು  ಶಿಕ್ಷೆಯ ಅವಧಿಯಲ್ಲಿ ಪರಿಗಣಿಸಲಾಗಿದೆ. ಇದೇ ರೀತಿಯಾಗಿ  ಲ್ಯಾನ್ಸಿ ಡಿ’ಸೋಜಾ 2014ರ ಅ.27ರಿಂದ 2015ರ ಮಾರ್ಚ್‌ 20ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು ಬಳಿಕ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದ. ಆತ ನ್ಯಾಯಾಂಗ ಬಂಧನದಲ್ಲಿದ್ದ  ಅವಧಿಯನ್ನು  ಶಿಕ್ಷೆ  ಅವಧಿಯಲ್ಲಿ  ಪರಿಗಣಿಸ‌ಲಾಗಿದೆ. 

ಮೃತ ಯತೀಶ್‌ ಕುಮಾರ್‌ನ  ಪತ್ನಿ  ಹಾಗೂ ಮಗುವಿಗೆ ಪರಿಹಾರಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀ ಶರು ಶಿಫಾರಸು ಮಾಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ  ವಾದಿಸಿದ್ದರು. ಆಗ ಉಳ್ಳಾಲದ ಪಿಎಸ್‌ಐ  ಧರ್ಮೇಂದ್ರ  ಮುಖ್ಯ ತನಿಖಾಧಿಕಾರಿಯಾಗಿ  ನ್ಯಾಯಾಲಯದಲ್ಲಿ  ಮೊಕದ್ದಮೆ ದಾಖಲಿಸಿದ್ದರು. 
ಪ್ರಕರಣದಲ್ಲಿ   28 ಸಾಕ್ಷಿಗಳನ್ನು  ವಿಚಾರಣೆ ನಡೆಸಲಾಗಿದ್ದು  48 ದಾಖಲೆಗಳನ್ನು   ಪರಿಗಣಿಸಲಾಗಿತ್ತು. 

Advertisement

ಕೊಲೆಗೆ  ಕಾರಣವಾದ  ಕರೋಕೆ  ಹಾಡು 
ಯತೀಶ್‌ ಕುಮಾರ್‌  ಹಾಗೂ  ಅವರ ಸ್ನೇಹಿತರು  2014ರ  ಆ.15ರಂದು ರಾತ್ರಿ ತೊಕ್ಕೊಟ್ಟಿನ  ಬಾರ್‌ವೊಂದಕ್ಕೆ  ಪಾರ್ಟಿ ಮಾಡಲು ತೆರಳಿದ್ದು   ಬಾರ್‌ನ ಪ್ರಥಮ ಅಂತಸ್ತಿನಲ್ಲಿ  ಊಟ ಮಾಡುತ್ತಿದ್ದರು. ಅಲ್ಲೇ  ಇನ್ನೊಂದು ಟೇಬಲ್‌ನಲ್ಲಿ ಲ್ಯಾನ್ಸಿ ಹಾಗೂ ಆತನ ಸ್ನೇಹಿತರು ಕುಳಿತಿದ್ದರು.  ಸ್ವಾತಂತ್ರೊತ್ಸವ  ಹಿನೆ‌°ಲೆಯಲ್ಲಿ ಬಾರ್‌ನಲ್ಲಿ   ಕರೋಕೆ  ಹಾಡಿನ ವ್ಯವಸ್ಥೆ  ಮಾಡಲಾಗಿತ್ತು. ಯತೀಶ್‌ ಕುಮಾರ್‌ನ ಸ್ನೇಹಿತ  ಕೈಲಾಶ್‌ ಬಾಬು   ಹಾಡೊಂದನ್ನು  ಹಾಡುತ್ತಿದ್ದಾಗ   ಪಕ್ಕದ  ಟೇಬಲ್‌ನಲ್ಲಿದ್ದ  ಲ್ಯಾನ್ಸಿ  ಹಾಗೂ ಆತನ ಜತೆಗಿದ್ದವರು  ತಮಾಷೆ ಮಾಡಿ ಬೊಬ್ಬೆ ಹಾಕಿದ್ದರು. ಇದನ್ನು ಯತೀಶ್‌ ಕುಮಾರ್‌  ಆಕ್ಷೇಪಿಸಿದಾಗ ಅವರ ನಡುವೆ  ಮಾತಿನ ಚಕಮಕಿ ನಡೆದಿತ್ತು. ಇದರಿಂದ ಅವಮಾನಿತನಾದ ಲ್ಯಾನ್ಸಿ  ತನ್ನ  ಸ್ನೇಹಿತ ಉದಯ ಕುಮಾರ್‌ ಹಾಗೂ  ವಿನಯ ಕುಮಾರ್‌ಗೆ ಫೋನ್‌ ಮಾಡಿ  ಬರುವಂತೆ ತಿಳಿಸಿದ್ದ. ಇದರಂತೆ ಅಲ್ಲಿಗೆ ಆಗಮಿಸಿದ ಅವರು ಬಾರ್‌ನ ಹೊರಗಡೆ ನಿಂತುಕೊಂಡಿದ್ದರು. ಯತೀಶ್‌  ತನ್ನ ಸ್ನೇಹಿತರ ಜತೆ ಬಾರ್‌ನಿಂದ ಕೆಳಗೆ ಬಂದಾಗ  ಆತನ ಜತೆ ಲ್ಯಾನ್ಸಿ ಹಾಗೂ ಉದಯ ವಾಗ್ವಾದ ಆರಂಭಿಸಿದ್ದು  ಬಳಿಕ  ಹೊಟ್ಟೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಯತೀಶ್‌ನನ್ನು   ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದರು. ಕೊಲೆಕೃತ್ಯ ಬಾರ್‌ನ ಸಿಸಿಟಿವಿಯಲ್ಲಿ  ದಾಖಲಾಗಿತ್ತು. ವಿಚಾರಣೆಯಲ್ಲಿ  ಇದನ್ನು ಪರಿಗಣಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next