Advertisement

ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಬೇಕು: ಶ್ರೀಕಾಂತ್ ಶೆಟ್ಟಿ ಅಭಿಪ್ರಾಯ

02:49 AM Jan 29, 2019 | Karthik A |

ಉಡುಪಿ: ನಮ್ಮತನವನ್ನು ಕಳೆದುಕೊಂಡ ಯಾವ ಸಂಸ್ಕೃತಿಯೂ ಉಳಿದಿಲ್ಲ. ನಾವೆಷ್ಟೇ ಆಧುನಿಕತೆಗೆ ತೆರೆದುಕೊಂಡರೂ ನಮ್ಮ ಪರಂಪರೆ, ದೈವ-ದೇವರು ಹಾಗೂ ಸಂಸ್ಕೃತಿಯ ನಂಟನ್ನು ಬಿಡಬಾರದು ಎಂದು ಪತ್ರಕರ್ತ ಹಾಗೂ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ರಿ.) ಹಿರಿಯಡ್ಕ ಇದರ 27ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

Advertisement

ಕರಾವಳಿಯ ಭವ್ಯ ಸಂಸ್ಕೃತಿ ಇವತ್ತು ಸಂಪೂರ್ಣ ತೋರಿಕೆಯ ಆಚರಣೆಗೆ ಸೀಮಿತಗೊಂಡಿದೆ. ನಮ್ಮ ಮಕ್ಕಳಿಗೆ ಇಲ್ಲಿನ ಶ್ರೀಮಂತ ಆಚರಣೆಗಳನ್ನು ಪರಿಚಯ ಮಾಡಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೂರದ ಊರುಗಳಲ್ಲಿ ಉದ್ಯೋಗ, ವ್ಯವಹಾರ ನಡೆಸುತ್ತಿರುವ ಕರಾವಳಿಗರು ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಊರಿಗೆ ಬಂದು ಇಲ್ಲಿ ತಮ್ಮ ಕುಟುಂಬದ ದೈವ ದೇವರ ಕಾರ್ಯಗಳಲ್ಲಿ, ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ಆದರೆ ಕೆಲವರು ಯಾಂತ್ರಿಕವಾಗಿ ಮಾತ್ರ ತಮ್ಮ ಉಪಸ್ಥಿತಿಯನ್ನು ತೋರ್ಪಡಿಸುತ್ತಾರೆ, ಹೀಗಾದಾಗ ನಮ್ಮ ಭವ್ಯ ಪರಂಪರೆ ಉಳಿದು ಬೆಳೆಯಲು ಹೇಗೆ ಸಾಧ್ಯ ಎಂದು ಶ್ರೀಕಾಂತ್ ಶೆಟ್ಟಿ ಅವರು ಖೇದ ವ್ಯಕ್ತಪಡಿಸಿದರು. ಊರಿನಲ್ಲಿರುವ ಯುವಕ-ಯುವತಿಯರಿಗೂ ನಮ್ಮ ಸಂಸ್ಕೃತಿಯ ಕುರಿತಾಗಿ ಒಲವು ಕಡಿಮೆಯಾಗುತ್ತಿದೆ. ಮೊಬೈಲ್ ಮತ್ತು ಟಿ.ವಿ. ಮಾಧ್ಯಮಗಳ ಪ್ರಭಾವದಿಂದ ನಮ್ಮ ಜಾನಪದ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದವರು ಇದೇ ಸಂದರ್ಭದಲ್ಲಿ ಹೆಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸಾಧನಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಶ್ರೀ ಕುದಿ ಶ್ರೀನಿವಾಸ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗು ಕೃಷಿಯ ಉಳಿವಿನ ಬಗ್ಗೆ ನೆರೆದವರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ದಲಿತ ಅಕಾಡೆಮಿಯ 2018ನೇ ಸಾಲಿನ ‘ಭಗವಾನ್ ಬುದ್ಧ ಫೆಲೋಶಿಪ್ ಅವಾರ್ಡ್’ ವಿಜೇತ ಹಿರಿಯಡಕ ತವಿಲ್ ವಿದ್ವಾನ್  ಶ್ರೀ ನಿತ್ಯಾನಂದ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

ಕು. ದಿವ್ಯ ಮರಾಠೆ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀ ಸುಜಯ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ಮಾಣೈ ವರದಿ ವಾಚಿಸಿ, ದಿವಾಕರ ಹಿರಿಯಡ್ಕ ಸನ್ಮಾನ ಪತ್ರ ವಾಚಿಸಿದರು ಹಾಗು ರಾಮಚಂದ್ರ ನಾಯಕ್ ವಂದಿಸಿ, ಬಾಲಕೃಷ್ಣ ಬಿ ಕೆ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಶ್ವನಾಥ್ ಶೆಟ್ಟಿ ಹಾಗು ಸತ್ಯ ಪ್ರಸಾದ್ ಮುತ್ತೂರು ಇವರು ಸಹಕರಿಸಿದರು.

Advertisement

ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಕಟೀಲ್ದಪ್ಪೆ ಉಳ್ಳಾಲ್ತಿ’ ಎಂಬ ತುಳು ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next