Advertisement
ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠರದು ಹದಿನಾರು ಎಕರೆ ಜಮೀನು. ಹತ್ತು ಎಕರೆಯಲ್ಲಿ ಮೆಕ್ಕೆ ಜೋಳ, ಅರ್ಧ ಎಕರೆ ಶೇಂಗಾ, ಒಂದು ಎಕರೆ ಮೆಣಸು, ಅರ್ಧ ಎಕರೆ ಜಾನುವಾರುಗಳಿಗೆ ಮೇವಿನ ಹುಲ್ಲು, ಎರಡು ಎಕರೆ ತರಕಾರಿ ಕೃಷಿ, ಉಳಿದ ಒಂದೂವರೆ ಎಕರೆ ಹಾರಕ ಸಿರಿಧಾನ್ಯ ಕೃಷಿ ಮಾಡಿದ್ದಾರೆ. ದಿನ ನಿತ್ಯ ಆದಾಯ ಗಿಟ್ಟಿಸಿಕೊಳ್ಳಲು ಹೊಂದಿಸಿಕೊಳ್ಳುವ ಬೆಳೆ ಚಾಣಕ್ಯತೆಯನ್ನು ಇವರಿಂದ ಕಲಿಯುವುದು ಬೆಟ್ಟದಷ್ಟಿದೆ.
Related Articles
Advertisement
ಕಟಾವಿನ ತನಕ ಹತ್ತು ಬಾರಿ ಕುಂಟೆ ಹೊಡೆಯುತ್ತಾರೆ. ಬೆಳೆಯ ಅಬ್ಬರಕ್ಕೆ ಕುಂಟೆಯ ಓಡಾಟವೂ ಕಾರಣ ಎನ್ನುವುದು ಇವರ ಅನುಭವದ ನುಡಿ. ಈ ಬೆಳೆಗೆ ರೋಗದ ಬಾಧೆಯ ಕಿರಿಕಿರಿ ಇಲ್ಲ. ಕೀಟಗಳು ಹತ್ತಿರವೂ ಸುಳಿಯುವುದಿಲ್ಲ ಎನ್ನುತ್ತಾರೆ ವಿರೂಪಾಕ್ಷಪ್ಪ.ಒಣಗಿ ನಿಂತ ಹಾರಕದ ತೆನೆಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇನ್ನೊಂದು ತಿಂಗಳಲ್ಲಿ ಕಟಾವು.
ಒಂದೂವರೆ ಎಕರೆಯಿಂದ ಹತ್ತು ಕ್ವಿಂಟಾಲ್ ಇಳುವರಿ ಸಿಗುವ ನಿರೀಕ್ಷೆ ಇದೆ. ಹಾರಕ ಕೃಷಿಗೆ ವಿನಿಯೋಗಿಸಿದ ಮೊತ್ತ ಐದು ಸಾವಿರ ರೂ. ಹತ್ತು ಕ್ವಿಂಟಾಲ್ ಇಳುವರಿ ಲಭ್ಯವಾಗುತ್ತದೆ. ಕ್ವಿಂಟಾಲ್ ಹಾರಕಕ್ಕೆ 5,000-7,000 ರೂ. ದರವಿದೆ. ಹತ್ತು ಕ್ವಿಂಟಾಲ್ ದೊರೆತರೆ ಕೈ ತುಂಬಾ ಲಾಭದ ಬೆಳೆಯಂತೆ.
ತರಕಾರಿ ಕಡೆ ಗಮನ..: ಹತ್ತು ಎಕರೆ ಜಮೀನಿದ್ದರೂ ಒಂದು ಎಕರೆಯಲ್ಲಿರುವ ತರಕಾರಿ ಬೆಳೆಯ ಬಗ್ಗೆ ವಿಶೇಷ ಒಲವು. ಬೆಂಡೆ, ಬದನೆ, ಟೊಮೆಟೋ, ಮೂಲಂಗಿ, ವಿವಿಧ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಾರೆ. ದಿನ ನಿತ್ಯ ಫಸಲು ಕಟಾವಿಗೆ ಸಿಗುವ ರೀತಿ ಬೆಳೆ ಹಂಚಿಕೆಯ ಬುದ್ಧಿವಂತಿಕೆ ರೂಢಿಸಿಕೊಂಡಿದ್ದಾರೆ.
ಕಳೆದ ವರ್ಷ ಮಾರುಕಟ್ಟೆಯಲ್ಲಿ ಬದನೆ ಬೆಳೆಗೆ ಅಧಿಕ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಮೂರು ಎಕರೆಗೆ ಕೃಷಿ ವಿಸ್ತರಿಸಿದ್ದರು. ಆರು ಲಕ್ಷ ಆದಾಯ ಕೈ ಸೇರಿತ್ತು. ‘ಬದನೆ ಗಳಿಸಿಕೊಟ್ಟ ಹಣದಲ್ಲಿ ಟ್ರಾಕ್ಟರ್ ಖರೀದಿಸಿದ್ದೇವೆ ನೋಡ್ರೀ’ ಎನ್ನುತ್ತಾ ಟ್ರಾಕ್ಟರ್‌ನತ್ತ ಬೊಟ್ಟು ಮಾಡಿದರು ವಿರೂಪಾಕ್ಷಯ್ಯರ ಸಹೋದರ ಬೆಟದಯ್ಯ ಹಿರೇಮಠ. ಜಮೀನಿನ ಬದುಗಳಲ್ಲಿ ಅಲ್ಲಲ್ಲಿ ನೆಟ್ಟ ಬೇವಿನ ಮರಗಳ ಸಂಖ್ಯೆ ಐದು ನೂರು ದಾಟುತ್ತದೆ.
ಐವತ್ತು ತೆಂಗು, ಒಂದು ನೂರು ತೇಗ, ಐವತ್ತು ಗೇರು, ಹತ್ತು ಮಾವಿನ ಮರಗಳಿವೆ. ಹೈನುಗಾರಿಕೆಯ ಆಸಕ್ತಿಯೂ ಆದಾಯ ವೃದ್ಧಿಸಿಕೊಡುತ್ತಿದೆ. ಜೋಳ ಕಟಾವಿನ ನಂತರ ಹಿಂಗಾರಿನಲ್ಲಿ ಶೇಂಗಾ ಹಾಗೂ ಕೊರಲೆ ಬಿತ್ತುವ ಆಲೋಚನೆಯಲ್ಲಿದ್ದಾರೆ. ಹನ್ನೆರಡು ತಿಂಗಳೂ ಹೊಲದಲ್ಲಿ ತರಕಾರಿ ಬೆಳೆ ಕಟಾವಿಗೆ ಲಭ್ಯವಿರುವಂತೆ ನೋಡಿಕೊಳ್ಳುತ್ತಾರೆ. ನಿತ್ಯ ನಿರಂತರ ಆದಾಯ ಕೈ ಸೇರುವ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ.
* ಕೋಡಕಣಿ ಜೈವಂತ ಪಟಗಾರ