Advertisement

 ಸಮಗ್ರ ಕೃಷಿಯಿಂದ  ಸಮೃದ್ಧ ಆದಾಯ

12:30 AM Dec 31, 2018 | |

ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಮಧ್ಯೆ ಕೋಡಿಹಳ್ಳಿಯ ಸತೀಶ್‌ ಹೀಗೂ ಬದುಕಬಹುದು ಅನ್ನೋದನ್ನು ತೋರಿಸಿದ್ದಾರೆ. ಬಾಳೆ, ತರಕಾರಿ, ಹೈನುಗಾರಿಕೆಯಿಂದ ನೆಮ್ಮದಿಯ  ಜೀವನ ಮಾಡಬಹುದು ಅನ್ನೋದಕ್ಕೆ ಇವರೇ ಸಾಕ್ಷಿ ಮತ್ತು ಉದಾಹರಣೆ. 

Advertisement

ಹಿರೇಕೆರೂರ ತಾಲೂಕಿನ ರಟ್ಟಿಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದ ಸತೀಶ ಬಣಕಾರ ವೃತ್ತಿಯಿಂದ ಕೃಷಿಕರು. ರೈತರು ಸಾಲ ಮಾಡಿ, ಅದನ್ನು ತೀರಿಸಲಾಗದೆ ನೇಣಿನ ಕುಣಿಕೆಗೆ ತಲೆ ಒಡ್ಡುತ್ತಿರುವ ಸಂದರ್ಭದಲ್ಲಿ, “ಏಕೆ ಆತ್ಮಹತ್ಯೆ ಮಾಡ್ಕೊತೀರಿ. ಹೀಗೂ ಬದುಕಬಹುದು ‘ ಅಂತ ಆದಾಯ ಗಳಿಸಿ ತೋರಿಸುತ್ತಿದ್ದಾರೆ ಈ ಸತೀಶ್‌. 

 ಇವರಿಗೆ ಶಾಲಾ ದಿನಗಳಿಂದೇ ಕೃಷಿ ಮಾಡುವ ಆಸೆ.  ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸಿ ಎಲ್ಲರಿಗಿಂತಲೂ ವಿಭಿನ್ನವಾಗಿ ಕೃಷಿ ಮಾಡುವ ಚಿಂತನೆ ನಡೆಸಿದ್ದರು. ಸಾವಯವ ಕೃಷಿ ಬಗ್ಗೆ ಮಾಹಿತಿ ಕಲೆಹಾಕಿದರು. ಜಮೀನಿಗೆ ಇಳಿದರು.  ತಂದೆ ಶಿವಪ್ಪ ಬಣಕಾರ, ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಗನ  ಕನಸಿಗೆ ಅವರೂ ನೀರೆರೆದರು. ಕೊನೆಗೆ ವಾಲಂಟರಿ ರಿಟೈರ್‌ವೆುಂಟ್‌ ಪಡೆದು ಮಗನ ಬೆನ್ನಿಗೆ ನಿಂತರು. 

ಲಾಭ ತಂದ ಸಮಗ್ರ ಬೆಳೆ
ಒಟ್ಟು 8 ಎಕರೆಯಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆ ಮೂಲಕ ಸಮಗ್ರ ಕೃಷಿಗೆ ಒತ್ತು ನೀಡಿದ್ದಾರೆ ಸತೀಶ್‌.  ಸಾವಯವ ಕೃಷಿಯಲ್ಲಿ 3 ಎಕರೆ ಬಾಳೆ, ತೋಟದಲ್ಲಿ 30 ಕರಿಬೇವಿನ ಗಿಡಗಳು, 100 ಮಹಾಗನಿ, 200 ಸಾಗವಾನಿಯನ್ನು ಬೆಳೆಸಿದ್ದಾರೆ. ಹೈನುಗಾರಿಕೆ ಇವರ ಇನ್ನೊಂದು ಆದಾಯದ ಮೂಲ. 8 ಮಿಶ್ರತಳಿ ಹಸುಗಳನ್ನು ಸಾಕಿದ್ದಾರೆ. ಕೃಷಿ ಭೂಮಿಯಲ್ಲಿ ನೀರಾವರಿ ಹಾಗೂ ಒಣ ಬೇಸಾಯ ಎರಡನ್ನೂ ಮಾಡುತ್ತಿದ್ದು, ಗೋವಿನ ಜೋಳ ಹಾಗೂ ಹತ್ತಿ ಬೆಳೆ ಬೆಳೆದು ಬೇರೆಯವರಿಗಿಂತ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.  20 ಗುಂಟೆಯಲ್ಲಿ ಪಾಲಿಹೌಸ್‌ ನಿರ್ಮಿಸಿ,  ಟೊಮೆಟೊ, ಬದನೆಕಾಯಿ, ಮೆಣಸು ಮೊದಲಾದ ತರಕಾರಿಗಳ ಮಡಿಗಳನ್ನು ಮಾರುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ.

ಇವರಿಗೆ ವರ್ಷಕ್ಕೆ ಹೆಚ್ಚುಕಮ್ಮಿ ನಾಲ್ಕು ಲಕ್ಷ ರೂ. ಆದಾಯವಿದೆ. ಬಾಳೆಯಿಂದ ಮೂರು ಲಕ್ಷ, ಕರಿಬೇವಿನಿಂದ 6 ಸಾವಿರ, ಹೈನುಗಾರಿಕೆಯಿಂದ ವರ್ಷಕ್ಕೆ ಒಂದು ಲಕ್ಷ ಆದಾಯವಿದೆ. ಪಾಲಿಹೌಸ್‌ನಲ್ಲಿ ಬೆಳೆಯುವ ತರಕಾರಿ ಸಸಿಗಳ ಮಾರಾಟದಿಂದ ಆಗಾಗ ಕೈ ಖರ್ಚಿಗೆ ಹಣ ಸಿಗುತ್ತಿದೆಯಂತೆ. 

Advertisement

 ಸತೀಶ ಅವರಿಗೆ ಕೃಷಿ ಕಾರ್ಮಿಕರ ಸಮಸ್ಯೆ ಇಲ್ಲ. ಕಾರಣ, ಮನೆಯವರೆಲ್ಲಾ  ಇವರ ಬೆನ್ನಿಗೆ ನಿಂತಿದ್ದಾರೆ.  ಚಿಕ್ಕವನಿದ್ದಾಗಿನಿಂದಲೂ ಕೃಷಿ ಕೆಲಸದಲ್ಲಿ ಪಾಲ್ಗೊಳ್ಳಲು ನನಗೆ ಬಹಳ ಇಷ್ಟವಿತ್ತು. ತಂದಯೇ ನನ್ನ ನಿಜವಾದ ಗುರು ಎನ್ನುತ್ತಾರೆ ಕೃಷಿಕ – ಸತೀಶ ಬಣಕಾರ.  ಇವರ ಸಾಧನೆಯನ್ನು ಗುರುತಿಸಿದ ಸರ್ಕಾರ, ಈ ಸಾಲಿನ ಕೃಷಿ ಮೇಳದಲ್ಲಿ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕಿನ ಉತ್ತಮ ಯುವ ಕೃಷಿಕ ಎಂಬ ಪ್ರಶಸ್ತಿ ನೀಡಿದೆ. 

ಸಿದ್ದಲಿಂಗಯ್ಯ ಗೌಡರ್‌

Advertisement

Udayavani is now on Telegram. Click here to join our channel and stay updated with the latest news.

Next