Advertisement

ಅನ್ನ ಕೊಡುವ ರೂಫ್ ಟಾಪ್‌

01:07 PM Jan 22, 2018 | |

2003ರ ಕಥೆ. ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಎಂಜಿನಿಯರ್‌ ಆಗಿದ್ದ ಬಿ.ಎಂ.ಬಸಪ್ಪರೆಡ್ಡಿ ನಿವೃತ್ತಿಯಾದ ವರ್ಷವೇ ದಾವಣಗೆರೆಯ ತಮ್ಮ ಹೊಸ ಮನೆಗೆ ಬಂದು ನೆಲೆಸಿದರು. ಮನೆಯ ಮಾಳಗಿಯ ಮೇಲೆ ಸೂರ್ಯ ರಶ್ಮಿ ನೇರವಾಗಿ ರಾಚುತ್ತಿತ್ತು. ಎಲ್ಲೋ ಒಂದು ಕಡೆ “ವಾಟ್‌ ಎ ವೇಸ್ಟ್‌’ ಎಂದು ರೆಡ್ಡಿಯವರಿಗೆ ಅನ್ನಿಸಿದ್ದೇ, ತೆರೆದ ಮಹಡಿಯ ಮೇಲೆ ಸೋಲಾರ್‌ ವಿದ್ಯುತ್‌ ಒಲೆಯನ್ನು ಪ್ರತಿಷ್ಠಾಪಿಸಿದರು.

Advertisement

ಆವತ್ತು ರೆಡ್ಡಿ ಒಲೆ ತರಿಸಿದ್ದು ಪೂನಾದಿಂದ. ಅಷ್ಟಾದರೂ ಮನೆಯ ಮೇಲ್ಛಾವಣಿ ಖಾಲಿ ಖಾಲಿಯೇ. ಮುಂದಿನ ಕಂತಾಗಿ ಬಂದಿದ್ದು ಸೋಲಾರ್‌ ಬಿಸಿ ನೀರಿನ ಘಟಕ. ಅನ್ನ ಆಯ್ತು, ನೀರು ಕುದಿಯಿತು. ಮನಸ್ಸು ತಣ್ಣಗಾಗಲಿಲ್ಲ. ಮತ್ತೆ ಸೋಲಾರ್‌ನಿಂದ ಚಾರ್ಜ್‌ ಆಗುವ ವಿದ್ಯುತ್‌ ಇನ್ವರ್ಟರ್‌ನೂ° ಹಾಕಿಕೊಂಡು ವಿದ್ಯುತ್‌ ಸ್ವಾವಲಂಬಿಯಾಗುವುದರಲ್ಲೂ ರೆಡ್ಡಿ ಯಶಸ್ವಿಯಾದರು. 

ಇದು 2013ರ ಕಥೆ. ಬಸಪ್ಪರೆಡ್ಡಿ ಅಮೆರಿಕಾದಲ್ಲಿನ ತಮ್ಮ ಮಗಳ ಮನೆಗೆ ತೆರಳಿದ್ದರು.  ಅಲ್ಲಿ ಅವರಿಗೆ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡಿ ರಾಷ್ಟ್ರೀಯ ಗ್ರಿಡ್‌ಗೆ ಮಾರುವ ಮಾದರಿಯ ದರ್ಶನವಾಯಿತು. ಖಡಕ್‌ ನಿರ್ಧಾರಕ್ಕೆ ಬಂದರು. ಇದೇ ಸಮಯದಲ್ಲಿ ಭಾರತದಲ್ಲೂ ಅಸಂಪ್ರದಾಯಿಕ ಇಂಧನ ಇಲಾಖೆಯ ಬೆಂಬಲದೊಂದಿಗೆ ಜನ ಮನೆಯ ರೂಫ್ ಟಾಪ್‌ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ಉತ್ಪಾದನೆಯಾಗುವ ವಿದ್ಯುತ್‌ಅನ್ನು ಗ್ರಿಡ್‌ಗೆ ಮಾರಬಹುದಾದ ಯೋಜನೆಯ ಮಾಹಿತಿ ಹೆಕ್ಕಿದರು.

ನಕಾರಾತ್ಮಕ ಪ್ರತಿಕ್ರಿಯೆಗಳ ಹೊರತಾಗಿಯೂ ಪರಿಸರವಾದಿ ರೆಡ್ಡಿ ಒಂದು ಹೆಜ್ಜೆ ಮುಂದಡಿ ಇಟ್ಟರು. 2015ರ ಆಗಸ್ಟ್‌ನಲ್ಲಿ 20 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದಿಸಿ ಮಾರುವ ಯೋಜನೆಗೆ ನೋಂದಣಿ ಮಾಡಿಸಿದರು. ನೈಸರ್ಗಿಕ ವಿದ್ಯುತ್‌ ಯೋಜನೆಯ ಕೆಲಸಗಳು ಲಂಚರುಷುವತ್ತು ಇಲ್ಲದೆ ನಿಚ್ಚಳವಾಗಿ ಆಗಬೇಕೆಂದು ಭಾಸಿದವರು ಬಸಪ್ಪರೆಡ್ಡಿ. ಹಾಗಾಗಿ ತುಸು ವಿಳಂಬವಾಗಿ, 2016ರ ನವೆಂಬರ್‌ ವೇಳೆಗೆ ಹಸಿರು ನಿಶಾನೆ ಪಡೆದರು.

ಆವತ್ತು ಬೆಸ್ಕಾಂ ಬರೋಬ್ಬರಿ 25 ವರ್ಷಗಳ ಒಪ್ಪಂದಕ್ಕೆ ಬರುವುದರ ಜೊತೆ ಪ್ರತಿ ಯೂನಿಟ್‌ಗೆ 9.56 ರೂ.ನಂತೆ ಖರೀದಿಸಲು ಕೂಡ ಒಡಂಬಡಿಕೆಗೆ ಸಹಿ ಹಾಕಿತು. ಮನೆ ನಿರ್ಮಿಸಿದ ಸರಿಸುಮಾರು 13 ವರ್ಷಗಳ ನಂತರ ಆ ಮನೆಯ ಮಾಳಿಗೆಯ ಬಹುಪಾಲು ಜಾಗ ಉತ್ಪಾದನಾ ಕ್ಷೇತ್ರವಾಯಿತು! ಕೇಂದ್ರ ಸರ್ಕಾರದ ಜೆಎನ್‌ಎಸ್‌ಎಸ್‌ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಕೂಡ ರೆಡ್ಡಿ ಸರ್ಕಸ್‌ ನಡೆಸಬೇಕಾಯಿತು.

Advertisement

ಸಾಲ ಕೊಡಲು ನಿರಾಕರಿಸಿದಾಗ ಪ್ರಧಾನಿಗೂ ರೆಡ್ಡಿ ಪತ್ರ ಬರೆದರು. ಅಂತೂ ಶೇ. 5ರ ಬಡ್ಡಿದರದಲ್ಲಿ ಸಾಲ ಸಿಕ್ಕಿತು. ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್‌ ವ್ಯವಸ್ಥೆ ಸಿದ್ಧಗೊಂಡು ವಿದ್ಯುತ್‌ ಬಳಕೆದಾರನಿಂದ ರೆಡ್ಡಿ ವಿದ್ಯುತ್‌ ಉತ್ಪಾದಕ, ಮಾರಾಟಗಾರರಾಗಿ ಬಡ್ತಿ ಹೊಂದಿದರು. ರೆಡ್ಡಿ ಇತ್ತೀಚೆಗೊಮ್ಮೆ ಲೆಕ್ಕ ಹೇಳುತ್ತಿದ್ದರು. ಕಳೆದ 20 ತಿಂಗಳಿನಿಂದ ಬೆಸ್ಕಾಂ ವಿದ್ಯುತ್‌ ಖರೀದಿ ನಡೆಸಿದ್ದು ಬ್ಯಾಂಕ್‌ ಖಾತೆಗೆ ಹೆಚ್ಚು ಕಡಿಮೆ ನಾಲ್ಕು ಲಕ್ಷ ರೂ.ಗಳ ಸಂದಾಯವಾಗಿದೆ.

ಬಡ್ಡಿ ಖರ್ಚು ಸವಕಳಿ ಮಣ್ಣು ಮಸಿ ಸೇರಿದರೂ ಮುಂದಿನ ಹತ್ತು ವರ್ಷಗಳಲ್ಲಿ ಆ ಸಾಲ ಶೂಲೆ ಮಾಯವಾಗುತ್ತದೆ. ಬೆಸ್ಕಾಂ ಜೊತೆಗಿನ ಒಪ್ಪಂದ ಇನ್ನೂ 15 ವರ್ಷ ಮುಂದುವರೆಯುವುದರಿಂದ ಯೂನಿಟ್‌ಗೆ 9 ರೂ. ದರದಲ್ಲಿ ಲಾಭ ಖಚಿತ! ದಾವಣಗೆರೆಯಲ್ಲಿ ಬಸಪ್ಪ ರೆಡ್ಡಿ ಮಾರ್ಗದರ್ಶನದಲ್ಲಿ ಜಿಲ್ಲಾ ಸೋಲಾರ್‌ ರೂಫ್ ಟಾಪ್‌ ಪವರ್‌ ಅಸೋಸಿಯೇಶನ್‌ ರಚನೆಯಾಗಿದೆ. ಇಲ್ಲಿನ ಆಸ್ಪತ್ರೆಯೊಂದರ ಮಾಲೀಕರಾದ ಎಸ್‌.ಎಂ.ಬ್ಯಾಡಗಿ ಅಧ್ಯಕ್ಷರು. 

ಸಮಸ್ಯೆಗಳು ಇಲ್ಲ ಅಂತಲ್ಲ. ಮನೆಯಲ್ಲಿ ವಿದ್ಯುತ್‌ ಉತ್ಪಾದನೆಯಾದರೂ ಎಸ್ಕಾಂ ವಿದ್ಯುತ್‌ ಸರಬರಾಜಿನಲ್ಲಿ ತಡೆಯುಂಟಾಗಿದ್ದರೆ ಉತ್ಪಾದಿತ ವಿದ್ಯುತ್‌ ಗ್ರಿಡ್‌ಗೆ ಸೇರ್ಪಡೆಯಾಗುವುದಿಲ್ಲ. ಹೀಗೆ ನೂರಾರು… ಆದರೆ ಮುಖ್ಯವಾದದ್ದು ಸೋಲಾರ್‌ ಘಟಕಗಳ ಮಂಜೂರಾತಿಗೆ ಇರುವ ಲಂಚ ಬೇಡಿಕೆಗೆ ತಿಲಾಂಜಲಿ ಇಡಲೇ ಬೇಕು ಎನ್ನುತ್ತಾರೆ ಬಸಪ್ಪ. 

ಮೊ: 9141942283 

* ಎಂ.ವಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next