Advertisement

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

08:58 AM Oct 22, 2024 | Team Udayavani |

ಬೆಂಗಳೂರು: ರೈಸ್‌ ಪುಲ್ಲಿಂಗ್‌ ಚೋಂಬು ತೋರಿಸಿ ಉದ್ಯಮಿಯೊಬ್ಬರ ಕೋಟ್ಯಂತರ ರೂ. ಮೌಲ್ಯದ ಜಮೀನು ಮತ್ತು ಮನೆ ಸೇರಿ ಸ್ಥಿರಾಸ್ತಿಗಳನ್ನು ಕಬಳಿಸಿದ್ದ ಮಹಿಳೆ ಸೇರಿ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗರತ್ನಾ, ಹೊಳೆನರಸೀಪುರದ ರಾಮಚಂದ್ರ, ಬೆಂಗಳೂರಿನ ಸುಕುಮಾರನ್‌, ಮಂಜುನಾಥ ಹಾಗೂ ನಟೇಶ್‌ ಬಂಧಿತರು. ಆರೋಪಿಗಳಿಂದ ರೈಸ್‌ ಪುಲ್ಲಿಂಗ್‌ ಚೊಂಬುಗಳನ್ನು ಜಪ್ತಿ ಮಾಡಲಾಗಿದೆ. ಉದ್ಯಮಿ ಹೆಣ್ಣೂರು ಪ್ರಕೃತಿ ಲೇಔಟ್‌ ನಿವಾಸಿ ವಿ.ಕಾಂತರಾಜು ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಪ್ರಕರಣ?: ಉದ್ಯಮಿ ಕಾಂತರಾಜು ಗಂಗಾ ಬೋರ್‌ವೆಲ್‌ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದು, ಕಚ್ಚಾ ತೈಲ ಮತ್ತು ರಿಫೈನರಿ ಪ್ಲಾಂಟ್‌ ತೆರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕನಕಪುರದ ಮನು ಮತ್ತು ರಾಮಣ್ಣ ಎಂಬವರ ಮೂಲಕ ಆರೋಪಿಗಳಾದ ನಾಗರತ್ನಾ ಮತ್ತು ರಾಮಚಂದ್ರಪ್ಪ ಪರಿಚಯವಾಗಿದೆ. ಈ ವೇಳೆ ನಾಗರತ್ನ, ಚನ್ನರಾಯಪಟ್ಟಣದಲ್ಲಿ ನನ್ನದು ಪೆಟ್ರೋಲ್‌ ಬಂಕ್‌ ಇದೆ. ನನಗೆ ಬಿಜೆಪಿಯ ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಅಶ್ವತ್ಥನಾರಾಯಣ ಪರಿಚಯವಿದ್ದು, ಒಎನ್‌ಜಿಸಿಯಲ್ಲಿ ತುಂಬ ಅನುಭವ ಇದ್ದು, ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ನಂಬಿಸಿದ್ದಾರೆ. ಬಳಿಕ ಈ ವ್ಯವಹಾರಕ್ಕೆ ಅಗತ್ಯವಾಗಿರುವ ಸಾವಿರಾರು ಕೋಟಿ ರೂ. ಬಂಡವಾಳ ಹಣ ಹೊಂದಿಸುವುದು ನಿಮ್ಮಿಂದ ಅಸಾಧ್ಯ. ನಮ್ಮ ಬಳಿ 5 ರೈಸ್‌ ಪುಲ್ಲಿಂಗ್‌ ಚೊಂಬುಗಳಿವೆ. ಅವುಗಳು ಸ್ಯಾಟಲೈಟ್‌ಗಳ ಜತೆ ಸಂಪರ್ಕ ಹೊಂದುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಲಕ್ಷ ಕೋಟಿ ರೂ. ಬೆಲೆ ಇದೆ ಎಂದು ನಂಬಿಸಿದ್ದಾರೆ. ನಂತರ ನಟೇಶ್‌ ಮತ್ತು ಸುಕುಮಾರ್‌ ಎಂಬುವರು ಕಾಂತರಾಜು ಬಳಿ ತಾವು ರೇಡಿಯಸ್‌ ಕಂಪನಿ ಸಿಇಒಗಳು ಎಂದು ಪರಿಚಯಿಸಿಕೊಂಡಿದ್ದರು.

ರಾಮಚಂದ್ರಪ್ಪ ತಾನು ಸಿಇಜಿಎಆರ್‌ಎನ್‌ ಕಂಪನಿ ಸಿಇಒ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆರೋಪಿಗಳು ರೈಸ್‌ ಪುಲ್ಲಿಂಗ್‌ ಚೊಂಬುಗಳನ್ನು ತೋರಿಸಿ ಪರೀಕ್ಷಿಸಿ ಕಾಂತರಾಜುನನ್ನು ನಂಬಿಸಿದ್ದರು. ಆ ಬಳಿಕ ಈ ರೈಸ್‌ ಪುಲ್ಲಿಂಗ್‌ ಚೊಂಬುಗಳನ್ನು ನಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಅಲ್ಲಿಯವರೆಗೆ ನಿಮ್ಮ ಸ್ಥಿರಾಸ್ತಿಯನ್ನು ನಮಗೆ ಬರೆದುಕೊಡಬೇಕು. ಒಂದು ತಿಂಗಳೊಳಗೆ ರೈಸ್‌ ಪುಲ್ಲಿಂಗ್‌ ಚೊಂಬು ಮಾರಾಟ ಮಾಡಿ ಬಳಿಕ ನಿಮ್ಮ ಆಸ್ತಿಯನ್ನು ನಿಮಗೆ ವಾಪಾಸ್‌ ಬರೆದುಕೊಡುವುದಾಗಿ ಹೇಳಿ ಕಾಂತರಾಜು ಅವರ ಕನಕಪುರ ತಾಲೂಕು ಅತ್ತಿಗುಪ್ಪೆ ಗ್ರಾಮದಲ್ಲಿನ 4 ಎಕರೆ 18 ಗುಂಟೆ ಜಮೀನನ್ನು ಸುಕುಮಾರನ್‌ ಪತ್ನಿ ಸವಿತಾ ಹೆಸರಿಗೆ ಕ್ರಯ ಮಾಡಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಆರೋಪಿಗಳು ರೈಸ್‌ ಪುಲ್ಲಿಂಗ್‌ ಚೊಂಬುಗಳು ಮಾರಾಟವಾಗಿಲ್ಲ. ಮಾರಾಟಕ್ಕೆ ಮಾರುಕಟ್ಟೆಯಲ್ಲಿ 1 ಕೋಟಿ ರೂ. ಹಣ ಠೇವಣಿ ಇರಿಸಬೇಕು ಎಂದು ಥಣಿಸಂದ್ರದ ಕಾಂತರಾಜು ಅವರ ಮನೆಯನ್ನು ರಾಮಚಂದ್ರ ಪಳಸಿಕರನ್‌ ಹೆಸರಿಗೆ ಬರೆಸಿಕೊಂಡಿದ್ದರು. ನಂತರ ಚೊಂಬುಗಳು 100 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ನಂಬಿಸಿ, ನೆಲಮಂಗಲದ ಸಮೀಪದ 2 ಎಕರೆ4 ಗುಂಟೆ ಜಮೀನನ್ನು ಗಂಗರಾಜು ಹೆಸರಿಗೆ ಜಿಪಿಎ ಮಾಡಿದ್ದರು.

ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ವಂಚನೆಗೊಳಗಾಗಿರುವುದು ಗೊತ್ತಾಗಿ ಕಾಂತರಾಜು ಸಿಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next