Advertisement

ಅಕಾಲಿಕ ಮಳೆಯಿಂದ ರಾಗಿಗೆ ಕೀಟ ಬಾಧೆ

09:56 AM Oct 11, 2017 | Team Udayavani |

ಬೆಂಗಳೂರು: ಅಕಾಲಿಕ ಮಳೆಯಿಂದ ರಾಗಿ ಬೆಳೆ ಈಗ ಕೀಟ ಬಾಧೆಗೆ ತುತ್ತಾಗಿದ್ದು, ಸುಮಾರು 15ರಿಂದ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ರಾಗಿ ಬೆಳೆ ಹಾನಿಯ ಭೀತಿ ರೈತರನ್ನು ಕಾಡುತ್ತಿದೆ.

Advertisement

ರಾಗಿ ಬೆಳೆಗೆ ಕಾಡುತ್ತಿರುವ ಕೀಟ ಬಾಧೆಯನ್ನು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ಅಧ್ಯಯನ ನಡೆಸಿದೆ. ರಾಗಿ ಬೆಳೆಯನ್ನೇ ನಿರ್ಮೂಲನೆ ಮಾಡುವ ಅಪಾಯಕಾರಿ ಕೀಟ ನಾಶಪಡಿಸುವ ಬಗ್ಗೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ವರದಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಕುಂದನ, ದೇವನಹಳ್ಳಿ, ನೆಲಮಂಗಲ, ತುಮಕೂರು, ಗುಬ್ಬಿ ಸೇರಿ ವಿವಿಧ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಹಸಿರು ಗೇನು ಹುಳು, ಸುರುಳಿ ಹುಳು, ಸೈನಿಕ ಹುಳು ಬಾಧೆ ಕಂಡುಬಂದಿದೆ. ಒಂದು ರಾತ್ರಿಯಲ್ಲಿ ಸುಮಾರು ಅರ್ಧ ಎಕರೆಯಷ್ಟು ಬೆಳೆಯನ್ನು ಹಾನಿ ಮಾಡುವಷ್ಟು ರಕ್ಕಸ ಗುಣ ಹೊಂದಿರುವ ಹಸಿರು ಗೇನು ಹುಳು ಮತ್ತು ಸೈನಿಕ ಹುಳು ಕಾಟಕ್ಕೆ ಒಳಗಾದ ಬೆಳೆ ರೈತನ ಕೈಸೇರುವುದು ಬೊಗಸೆಯಷ್ಟು ಮಾತ್ರ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು
ಸೇರಿ ಹಲವೆಡೆ ರಾಗಿ ಪ್ರಮುಖ ಆಹಾರ ಬೆಳೆಯಾಗಿರುವುದರಿಂದ ರೈತರಲ್ಲಿ ಕೀಟ ಬಾಧೆ ಆತಂಕ ಸೃಷ್ಟಿಸಿದೆ. 

ರೈತರು ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಹಾನಿಯ ಪ್ರಮಾಣ ಅಧಿಕವಾಗಲಿದೆ ಎಂದು ಅಖೀಲ ಭಾರತ ಸುಸಂಘಟಿತ ಕಿರುಧಾನ್ಯ ಸಂಶೋಧನಾ ಪ್ರಾಯೋಜನೆ (ಎಐಸಿಆರ್‌ಪಿ) ಕೀಟ ತಜ್ಞರು ಎಚ್ಚರಿಸಿದ್ದಾರೆ.

ಕೀಟ ಬಾಧೆಗೆ ಕಾರಣ: ಪ್ರತಿ ವರ್ಷ ಜುಲೈ ಮೊದಲ ಅಥವಾ ಕೊನೆಯಲ್ಲಿ ರಾಗಿ ಬಿತ್ತನೆ ನಡೆಯುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಆಗಸ್ಟ್‌ ಮೊದಲ ವಾರದಲ್ಲಿ ಬಿತ್ತನೆ ಮಾಡಲಾಗಿದೆ. ಪತಂಗಗಳು ವಂಶಾಭಿವೃದ್ಧಿ ಮಾಡುವ ಸಮಯವೂ ಇದಾಗಿದ್ದು, ತಡವಾಗಿ ಬಿತ್ತನೆ ಮಾಡಿದ್ದರಿಂದ ಜಾಸ್ತಿ ಪ್ರಮಾಣದಲ್ಲಿ ಹುಳುಗಳ ಕಾಟ ಬಾಧಿಸುತ್ತಿದೆ. ಜತೆಗೆ ಅಕಾಲಿಕ ಮಳೆಯ ಪ್ರಮಾಣವೂ ಜಾಸ್ತಿಯಾಗಿದ್ದು, ಬೆಳೆಗೆ ನಿಗದಿತ ಅವಧಿಯಲ್ಲಿ ಔಷಧಿ ಸಿಂಪಡಣೆ ಮಾಡದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹುಳು ಬಾಧೆ ಉಂಟಾಗಿದೆ ಎಂದು ಕೀಟ ತಜ್ಞ ಪ್ರಭು ಸಿ.ಗಾಣಿಗೆರ್‌ ಮಾಹಿತಿ ನೀಡಿದ್ದಾರೆ.

Advertisement

ಹತೋಟಿಗೇನು ಕ್ರಮ?
ಕ್ಲೋರ್‌ಫೈರಿಫಾಸ್‌ ಅಥವಾ ಕ್ವಿನಾಲ್‌ಫಾಸ್‌ 2 ಮಿಲಿಯಷ್ಟು ಕೀಟನಾಶಕವನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಪತಂಗಗಳು ದೀಪಕ್ಕೆ ಆಕರ್ಷಿತವಾಗುವ ಗುಣ ಹೊಂದಿದ್ದು, ರೈತರು ಸಾಮೂಹಿಕವಾಗಿ ಹೊಲದಲ್ಲಿ ಬೆಂಕಿ ಹಾಕಿ ಅಥವಾ ಪೆಟ್ರೂ-ಮ್ಯಾಕ್ಸ್‌ ದೀಪಗಳನ್ನು ಸಂಜೆ 7ರಿಂದ 9 ಗಂಟೆವರೆಗೆ ಇಟ್ಟು ಪತಂಗಗಳನ್ನು ನಾಶಪಡಿಸಬೇಕು. ಬೆಳೆದ ಹುಳು ಹತೋಟಿಗೆ 10 ಕೆ.ಜಿ. ಗೋಧಿ ಅಥವಾ ಅಕ್ಕಿ ತೌಡಿಗೆ 1 ಕೆ.ಜಿ. ಬೆಲ್ಲಕ್ಕೆ ಬೇಕಾಗುವಷ್ಟು ನೀರು ಬೆರೆಸಿಟ್ಟು, ಮಾರನೇ ದಿನ 100 ಮಿ.ಲೀ. ಕ್ವೀನಾಲ್‌ಫಾಸ್‌ ಕೀಟನಾಶಕ ಮಿಶ್ರಣ ಮಾಡಿ ಸಂಜೆ 5ಕ್ಕೆ ಹೊಲದಲ್ಲಿ ಚೆಲ್ಲಿ ಬೆಳೆದ ದೊಡ್ಡ ಹುಳುಗಳನ್ನು ಆಕರ್ಷಿಸಿ ನಾಶ ಪಡಿಸಬೇಕು. 

ರಾಗಿ ಬೆಳೆಗೆ ಆಗಿರುವ ಕೀಟ ಬಾಧೆ ಕುರಿತು ಕೀಟ ತಜ್ಞರು, ಕೃಷಿ ವಿಜ್ಞಾನಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ವರದಿ ತಯಾರಿಸಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ರೈತರು ಕೂಡಲೇ ಔಷಧಿ ಸಿಂಪಡಣೆಗೆ ಮುಂದಾಗಿ ಬೆಳೆ ಹಾನಿ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕಿದೆ.
-ಪ್ರಭು ಸಿ.ಗಾಣಿಗೆರ್‌, ಕೀಟತಜ್ಞ, ಎಐಸಿಆರ್ ಪಿ 

* ಸಂಪತ್ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next