Advertisement

ಭತ್ತ-ಧಾನ್ಯಗಳ ಕಣಜವೀಗ ಕ್ಯಾನ್ಸರ್‌ ಪೀಡತ

09:12 PM Jun 30, 2019 | Lakshmi GovindaRaj |

ಮೈಸೂರು: ಭಾರತದ ಭತ್ತ ಹಾಗೂ ಧಾನ್ಯಗಳ ಕಣಜ ಎಂದು ಹೆಸರುವಾಸಿಯಾಗಿದ್ದ ಪಂಜಾಬ್‌ ಇಂದು ಕ್ಯಾನ್ಸರ್‌ ಕಣಜವಾಗಿ ಪರಿವರ್ತನೆಯಾಗಿದ್ದು, ಇದಕ್ಕೆ ಕೃಷಿ ವಿಜ್ಞಾನಿಗಳೇ ನೇರ ಕಾರಣ ಎಂದು ವಿಜ್ಞಾನ ಲೇಖಕ ನಾಗೇಶ್‌ ಹೆಗಡೆ ಹೇಳಿದರು.

Advertisement

ಅಭಿರುಚಿ ಪ್ರಕಾಶನ, ಚಿಂತನ ಚಿತ್ತಾರ ಪ್ರಕಾಶನ, ಪರಿವರ್ತನ ರಂಗ ಸಮಾಜದ ಸಹಯೋಗದಲ್ಲಿ ನಗರದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಚಿನ್ನಸ್ವಾಮಿ ವಡ್ಡಗೆರೆ ಅವರ ಪುಸ್ತಕ ಬಿಡುಗಡೆ ಹಾಗೂ ಬೆಳಕಿನ ಬೇಸಾಯ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಸಾಯನಿಕ ತುಂಬಿ ಕಳುಹಿಸುತ್ತಾರೆ: ಸ್ವಾತಂತ್ರೊತ್ತರದಲ್ಲಿ ನಮ್ಮ ದೇಶದ ರೈತರು ಸ್ವತಂತ್ರವಾಗಿದ್ದರು. ತಮಗೆ ಬೇಕಾದ ಬೀಜ, ಗೊಬ್ಬರ, ಸಲಕರಣೆ ಹಾಗೂ ಇತರೆ ಸೌಲಭ್ಯಗಳ ಅನ್ವಯ ತಾವೇ ಉತ್ಪಾದಿಸಿಕೊಳ್ಳತ್ತಿದ್ದರು. ನಂತರ ಸರ್ಕಾರ ಮತ್ತು ಕೃಷಿ ವಿಜ್ಞಾನಿಗಳು ರೈತರ ದಾರಿ ತಪ್ಪಿಸಿದ್ದರು.

ಕೃಷಿ ರೋಗಕ್ಕೆ ರೈತರೇ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಸರ್ಕಾರ ಒಂದೊಂದು ರೋಗಕ್ಕೆ ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಿದೆ. ಅವರು ಮೂಟೆಗಟ್ಟಲೆ ರಾಸಾಯನಿಕಗಳನ್ನು ತುಂಬಿ ಕಳುಹಿಸುತ್ತಾರೆ. ಹೀಗೆ ಸರ್ಕಾರ ಹಾಗೂ ಖಾಸಗಿ ಕಂಪನಿಗಳು ರೈತರನ್ನು ಕತ್ತಲೆಗೆ ದೂಡಿತ್ತಿವೆ ಎಂದು ಹೇಳಿದರು.

ಕಣ್ಣೀರು ತರಿಸುತ್ತೆ: ದೇಶದಲ್ಲಿ ಶೇ.98 ನೀರಾವರಿ ಮೇಲೆ ಬೇಸಾಯ ಮಾಡುತ್ತಿರುವ ಪಂಜಾಬಿನ ರೈತರ ಕಷ್ಟದ ಸ್ಥಿತಿ ಕಣ್ಣೀರು ತರಿಸುತ್ತದೆ. ಧಾನ್ಯದ ಕಣಜ ಈಗ ಕ್ಯಾನ್ಸರ್‌ ಕಣಜ ಆಗಿದೆ. ಕ್ಯಾನ್ಸರ್‌ ಚಿಕಿತ್ಸೆ ಪಡೆಯಲು ಕ್ಯಾನ್ಸರ್‌ ಟ್ರೈನ್‌ ಅನ್ನು ನಿಯೋಜಿಸಲಾಗಿದೆ. ಇನ್ನೂ ಪ್ರತಿಯೊಂದು ಮನೆಯಲ್ಲೂ ವ್ಯಾಜ್ಯಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಅಪರೂಪದ ತಳಿ ಸಂರಕ್ಷಣೆ: ಇತ್ತೀಚೆಗೆ ಸ್ಥಳೀಯ ತಳಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು, ಅನ್ಯದೇಶ ತಳಿಗಳಿಗೆ ಮಾನ್ಯತೆ ನೀಡಲಾಗುತ್ತಿದೆ. ಇದರಿಂದ ಸ್ಥಳೀಯ ಪ್ರಮುಖ ತಳಿಗಳನ್ನು ಸ್ವಿಡ್ಜರ್‌ಲೆಂಡ್‌ನ‌ ಹಿಮಾ ಪ್ರದೇಶದ ತಿಜೋರಿಯಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ. ಇದನ್ನು ಯಾರು ಕಳ್ಳತನ ಮಾಡದ, ಅಲ್ಲಿಗೆ ಪ್ರವೇಶಿಸಲಾಗದ ಸ್ಥಳದಲ್ಲಿ ಕಂಪನಿಗಳು ಸಂರಕ್ಷಣೆ ಮಾಡಲಾಗುತ್ತಿದೆ.

ಮನುಕಲದ ಹಿತಕ್ಕಾಗಿ ಎಂದು ನಾವು ಭಾವಿಸಬೇಕಿಲ್ಲ. ಅಣ್ವಸ್ತ್ರ ಪ್ರಯೋಗ, ಗ್ರಹ ಸ್ಫೋಟದಂತಹ ಘಟನೆಗಳಿಂದ ನಾಶವಾದ ಬಳಿಕ ಇವುಗಳನ್ನು ಮಾರುಕಟ್ಟೆಗೆ ತರುವ ದುರುದ್ದೇಶವೂ ಅಡಗಿದೆ. ಇದಕ್ಕೆ ಬಹಳಷ್ಟು ದೇಶಗಳು ವಿರೋಧ ವ್ಯಕ್ತಪಡಿಸಿವೆ ಎಂದರು.

30 ಹತ್ತಿ ತಳಿಗಳ ನಾಶ: ಕುಲಾಂತರಿ ಬೀಜಗಳು ದೇಶಿ ಮತ್ತು ಸ್ಥಳೀಯ ಬೀಜಗಳಿಗೆ ಮಾರಕವಾಗಿದ್ದು, ಇದರಿಂದ ಅಪರೂಪದ ತಳಿಗಳು ಕಣ್ಮರೆಯಾಗುತ್ತಿವೆ. ಕುಲಾಂತರಿ ಹತ್ತಿಯಿಂದಾಗಿ ಅಪರೂಪದ 30 ಹತ್ತಿ ತಳಿಗಳು ವಿನಾಶವಾಗಿವೆ. ಜೊತೆಗೆ ತಳಿ ಸಂರಕ್ಷಣೆಗೆ ಸ್ಥಳೀಯ ವಿಧಾನಗಳನ್ನು ಮರೆಯುತ್ತಿದ್ದೇವೆ.

ಅಪರೂಪದ ತಳಿಗಳನ್ನು ಉಳಿಸಿಕೊಳ್ಳುವುದೇ ನಿಜವಾದ ಬೆಳಕು. ನಮ್ಮ ಸ್ಥಳೀಯ ತಳಿಗಳನ್ನು ವಿದೇಶಕ್ಕೆ ಕೊಂಡೊಯ್ಯತ್ತಿರುವುದೇ ಕತ್ತಲೆ ಎಂದು ತಿಳಿಸಿದರು. 5 ಮಂದಿ ಸಹಜ ಕೃಷಿಕರಿಂದ ಬಂಗಾರದ ಮನುಷ್ಯ ಮತ್ತು ಕೃಷಿ ಸಂಸ್ಕೃತಿ ಕಥನ ಪುಸ್ತಕ ಬಿಡುಗಡೆಗೊಳಿಸಿದರು.

ಜಲ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌, ಚಾಮರಾಜನಗರದ ರೈತದ ಸಂಘದ ಜಿಲ್ಲಾಧ್ಯಕ್ಷ ಹೊನ್ನಾರು ಪ್ರಕಾಶ್‌, ಪತ್ರಕರ್ತೆ ರಶ್ಮಿ ಕೌಜಲಗಿ, ಪ್ರಕಾಶಕರಾದ ಅಭಿರುಚಿ ಗಣೇಶ್‌, ನಿಂಗರಾಜು ಚಿತ್ತಣ್ಣನವರ್‌ ಮತ್ತಿತರರಿದ್ದರು.

ಕಾವೇರಿ ನೀರು ಬಳಕೆಗೆ ಕಟ್ಟುನಿಟ್ಟಿನ ನಿಯಮ ಅವಶ್ಯ: ಶರಾವತಿ ನೀರನ್ನು ಬೆಂಗಳೂರಿಗೆ ತರುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ತಮಿಳುನಾಡಿಗೆ 250 ಟಿಎಂಸಿ ನೀರು ಬಿಟ್ಟಿದೆ. ಅಲ್ಲಿ ಸಮರ್ಪಕವಾಗಿ ನೀರು ಬಳಕೆ ಮಾಡಿಲ್ಲ. ನೀರು ಸಮುದ್ರದ ಪಾಲಾಗಿದೆ.

ಬಾಗಲಕೋಟೆ ಜಿಲ್ಲೆ ಮತ್ತಿತರ ಪ್ರದೇಶದಲ್ಲಿ ನೀರಿಲ್ಲದೆ ಕಬ್ಬು ಬತ್ತಿ ಹೋಗಿದೆ. ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಲು ಕಟ್ಟುನಿಟ್ಟಾದ ನಿಯಮ ಜಾರಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next