ವಿಜಯಪುರ: ಆ ನಾಲ್ವರಿಗೂ ಮಾತು ಬಾರದ ಮೌನ ಜೀವನ. ಹರೆಯಕ್ಕೆ ಬಂದ ಅವರಿಗೆ ಕೌಟುಂಬಿಕ ಬದುಕು ರೂಪಿಸಿಕೊಡಲು ಹೆತ್ತವರ ಚಿಂತನೆಗೆ ಕೊನೆಗೂ ಕಾಲ ಕೂಡಿ ಬಂದಿತ್ತು. ಶನಿವಾರ ಆ ನಾಲ್ವರ ಜೀವನದಲ್ಲೂ ಹಿರಿಯರ ನಿರೀಕ್ಷೆಯ ಸಪ್ತಪದಿ ತುಳಿದು ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಅಪರೂಪದ ವಿವಾಹಕ್ಕೆ ನಗರದ ಜನರು ಸಾಕ್ಷಿಯಾದರು.
ವಿಜಯಪುರದ ನಂದಗೊಂಡ ಕುಟುಂಬದ ಲಕ್ಕಪ್ಪ ಅವರ ಮಕ್ಕಳಾದ ಗಿರೀಶ ಹಾಗೂ ಮಹೇಶ ಇಬ್ಬರೂ ಮೂಗರು, ಸಹಜವಾಗಿಯೇ ಕಿವುಡರು ಕೂಡ. ದೈಹಿಕ ನ್ಯೂನತೆ ಇದ್ದರೂ ಇಬ್ಬರೂ ಪರಿಶ್ರಮದಿಂದ ಬಿಕಾಂ ಪದವಿ ಪಡೆದು, ಉದ್ಯೋಗದಲ್ಲಿ ಇದ್ದರು. ತಮ್ಮ ಮಕ್ಕಳಿಗೆ ಮದುವೆ ಮಾಡಲು ಯೋಚಿಸಿದ್ದ ಹೆತ್ತವರಿಗೆ ವಧುಗಳನ್ನು ಹುಡುಕುವ ಹಂತದಲ್ಲಿ ಇಬ್ಬರಿಗೂ ಅವರಂತೆಯೇ ಮೂಗರನ್ನೇ ಸಂಗಾತಿಯನ್ನಾಗಿ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ಬಾಂಗಿ ಕುಟುಂಬದ ರೇಣುಕಾ-ಬಸವರಾಜ ದಂಪತಿಯ ಪುತ್ರಿ ಸೌಭಾಗ್ಯ ಗಿರೀಶಗೆ ಬಾಳ ಸಂಗಾತಿಯಾಗಿ ದೊರಕಿದರೆ, ಮಹೇಶಗೆ ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದ ನಾಗರಾಳ ಕುಟುಂಬದ ವಿಜಯಲಕ್ಷ್ಮೀ ಹಾಗೂ ಗುರುಪಾದ ದಂಪತಿ ಪುತ್ರಿ ದೀಕ್ಷಿತಾ ಅವರು ಬಾಳ ದೋಣಿಯ ಜೋಡಿಯಾಗಿದ್ದಾರೆ.
ಗಿರೀಶ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಫೈನಾನ್ಸ್ ಕಂಪನಿ ಉದ್ಯೋಯಾಗಿದ್ದರೆ, ಇವರ ಕೈ ಹಿಡಿದಿರುವ ಸೌಭಾಗ್ಯ ಕೂಡ ಡಿಪ್ಲೊಮಾ ಅಧ್ಯಯನ ಪೂರ್ಣಗೊಳಿಸಿದವರು. ಫೈನಾನ್ಸಿಯಲ್ ಅಕೌಂಟಿಗ್‌ನಲ್ಲಿ ಬಿಕಾಂ ಪದವಿಯಲ್ಲಿ ವಿಶೇಷ ಪರಿಣತಿ ಪಡೆದಿರುವ ಮಹೇಶ ಕೂಡ ಬೆಂಗಳೂರಿನ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಲ್ಲಿ ಅ ಧಿಕಾರಿ. ಇವರನ್ನು ವರಿಸಿರುವ ದೀಕ್ಷಿತಾ ಬ್ಯಾಚಲರ್ ಆಫ್ ಫೈನ್ ಆರ್ಟ್ಸ್ನಲ್ಲಿ ಪದವಿ ಪಡೆದಿರುವ ಅಪರೂಪದ ಕಲಾವಿದೆ. ಈ ಅಪರೂಪದ ಜೋಡಿ ಇದೀಗ ಮೌನ ಬಾಳ ದೋಣಿಯಲ್ಲಿ ಜೊತೆಯಾಗಿದ್ದಾರೆ.
ಈ ವಿಶಿಷ್ಟ ವಿವಾಹಕ್ಕೆ ಶನಿವಾರ ನಗರ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸರಳ ಸುಂದರ ವಿವಾಹಕ್ಕೆ ಎರಡೂ ಕುಟುಂಬಗಳ ಹಾಗೂ ಬಂಧು-ಬಾಂಧವರು ಸಾಕ್ಷಿಯಾದರು. ಅಚ್ಚರಿಯ ಸಂಗತಿ ಎಂದರೆ ಮೌನಿಗಳಿಗೆ ಸಂವಹನ ಭಾಷೆಯಾಗಿ ರೂಪುಗೊಂಡಿರುವ ಸನ್ನೆ ಭಾಷೆಯಲ್ಲೇ ಅಪ್ಪಟ ಸಾಂಪ್ರದಾಯಿಕವಾಗಿ ಇವರ ವಿವಾಹ ಜರುಗಿದ್ದು,
ಹಲವು ಮೂಗ-ಕಿವುಡರು ಕೂಡ ತಮ್ಮ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗಿ, ಕೈಗಳನ್ನು ಮೇಲೆತ್ತಿ ಸಂಭ್ರಮ ಆಚರಿಸಿ, ಮೌನ ನವ ಜೋಡಿಗಳನ್ನು ಹರಸಿದರು. ವಿಕಲ ಚೇತನರಾಗಿರುವ ತಮ್ಮ ಮಕ್ಕಳ ಬಾಳಲ್ಲಿ ಅವರದೇ ನ್ಯೂನತೆ ಹೊಂದಿರುವ ಪ್ರತಿಭಾವಂತರೇ ಜೀವನ ಸಂಗಾತಿಯಾಗಿ ದೊರಕಿದಕ್ಕೆ ಈ ಮಕ್ಕಳ ಪಾಲಕರು ಸಂಭ್ರಮ ಎಲ್ಲೆ ಮೀರಿತ್ತು.