Advertisement

‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ

09:18 AM Apr 18, 2021 | Team Udayavani |

ಆತ ದೇಶದ ನಂಬರ್‌ ಓನ್‌ ಕ್ರೈಂ ರಿಪೋರ್ಟರ್‌ ಅರ್ಜುನ್‌. ಹತ್ತಾರು ಕಾರ್ಪೋರೆಟ್‌ ಹಗರಣಗಳನ್ನು ಬಯಲಿಗೆಳೆದು, ದೊಡ್ಡ ಕುಳಗಳನ್ನು ಎದುರು ಹಾಕಿಕೊಂಡು ಸೈ ಎನಿಸಿಕೊಂಡಾತ. ಒಮ್ಮೆ ಔಟಿಂಗ್‌ಗೆ ಹೋದ ಅರ್ಜುನ್‌ನ ಮಗಳು ಆಧ್ಯಾ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಪೊಲೀಸ್‌ ಕಂಪ್ಲೆಂಟ್‌ ಕೊಟ್ಟರೂ, ಎಲ್ಲಿ ವಿಚಾರಿಸಿದರೂ ಆಧ್ಯಾಳ ಸುಳಿವೆ ಸಿಗುವುದಿಲ್ಲ. ಆಗ ಅರ್ಜುನ್‌ಗೆ ವೈದ್ಯಕೀಯ ಲೋಕದಲ್ಲಿ ಥೆರೆಪಿಯಾಗಿ ಬಳಕೆಯಲ್ಲಿರುವ ಲೂಸಿಡ್‌ ಡ್ರೀಮ್ಸ್‌ ವಿಧಾನ ತಿಳಿಯುತ್ತದೆ. ಈ ಲೂಸಿಡ್‌ ಡ್ರೀಮ್ಸ್‌ ಟೆಕ್ನಿಕ್‌ ಮೂಲಕ ನಡೆದ ಘಟನೆಗಳನ್ನು “ರಿವೈಂಡ್‌’ ಮಾಡಿಕೊಂಡು, ಕ್ರೈಂ ಜರ್ನಲಿಸ್ಟ್‌ ಅರ್ಜುನ್‌ ತನ್ನ ಮಗಳು ಆಧ್ಯಾಳ ಹುಡುಕಾಟಕ್ಕೆ ಮುಂದಾಗುತ್ತಾನೆ. ಈ “ರಿವೈಂಡ್‌’ ಹುಡುಕಾಟ ಹೇಗೆ ನಡೆಯುತ್ತದೆ. ಈ ಹುಡುಕಾಟದಲ್ಲಿ ಕೊನೆಗೂ ಅರ್ಜುನ್‌ಗೆ ತನ್ನ ಮಗಳು ಸಿಗುತ್ತಾಳಾ? ಇಲ್ಲವಾ..? ಅನ್ನೋದೆ “ರಿವೈಂಡ್‌’ ಚಿತ್ರದ ಕಥೆಯ ಎಳೆ. ಅದು ಹೇಗೆ ಅನ್ನೋದು ಗೊತ್ತಾಗಬೇಕಾದರೆ, ಇಡೀ ಸಿನಿಮಾವನ್ನೇ ನೋಡಬೇಕು.

Advertisement

ಇತ್ತೀಚಿನ ವರ್ಷಗಳಲ್ಲಿ ಸೈನ್ಸ್‌ ಫಿಕ್ಷನ್‌ ಅಂಶಗಳನ್ನು ಇಟ್ಟುಕೊಂಡು ಬಂದಿರುವ ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾ ಗಳು ತುಂಬ ಅಪರೂಪ. ಇಂಥ ಸಿನಿಮಾಗಳ ಸಾಲಿಗೆ “ರಿವೈಂಡ್‌’ ಕೂಡ ಸೇರುತ್ತದೆ. ಚಿತ್ರದ ಕಥಾಹಂದರ ಕನ್ನಡ ಪ್ರೇಕ್ಷಕರಿಗೆ ಹೊಸದಾಗಿದೆ. ಆದರೆ ಚಿತ್ರಕಥೆ ಮತ್ತು ನಿರೂಪಣೆ ಸಾಮಾನ್ಯ ಪ್ರೇಕ್ಷಕನಿಗೆ ತಕ್ಷಣಕ್ಕೆ ಮನದಟ್ಟಾಗು ವುದು ಕಷ್ಟ. ಚಿತ್ರಕಥೆ ಮತ್ತು ನಿರೂಪಣೆ ಕಡೆಗೆ ಇನ್ನಷ್ಟು ಗಮನ ಕೊಟ್ಟಿದ್ದರೆ, “ರಿವೈಂಡ್‌’ ಇನ್ನೂ ಪರಿಣಾಮ ಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟುವ ಸಾಧ್ಯತೆಗಳಿದ್ದವು.

ಇದನ್ನೂ ಓದಿ:ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

ಇನ್ನು “ರಿವೈಂಡ್‌’ ಚಿತ್ರದಲ್ಲಿ ತೇಜ್‌ ತೆರೆಮುಂದೆ ನಾಯಕನಾಗಿ, ತೆರೆಹಿಂದೆ ನಾಯಕನಾಗಿ “ಡಬಲ್‌ ರೋಲ್‌’ ನಿರ್ವಹಿಸಿದ್ದಾರೆ. ಅದರಲ್ಲಿ ತೆರೆಹಿಂದಿಗಿಂತ, ತೆರೆಮುಂದೆ ನಾಯಕನಾಗಿ ತೇಜ್‌ ನೋಡುಗರಿಗೆ ಹೆಚ್ಚು ಇಷ್ಟವಾಗುತ್ತಾರೆ. ತನ್ನ ಲುಕ್‌, ಮ್ಯಾನರಿಸಂನಿಂದ ತೇಜ್‌ ನೋಡುಗರ ಗಮನ ಸೆಳೆಯುತ್ತಾರೆ. ಕನ್ನಡದ ಮಟ್ಟಿಗೆ ಹೊಸಥರದ ಪಾತ್ರಗಳನ್ನು ಮಾಡಬಲ್ಲ, ಹೊಸಥರದ ಪಾತ್ರಗಳಿಗೆ ತೆರೆದುಕೊಳ್ಳಬಲ್ಲ ಹೊಸ ತಲೆಮಾರಿನ ನಾಯಕ ನಟನಾಗಿ ತೇಜ್‌ ಭರವಸೆ ಮೂಡಿಸುತ್ತಾರೆ.

ಆದರೆ ಚಿತ್ರದಲ್ಲಿ ತೇಜ್‌, ಸಂಪತ್‌ ಸೇರಿದಂತೆ ಎರಡು ಮೂರು ಪಾತ್ರಗಳನ್ನು ಹೊರತುಪಡಿಸಿದರೆ, ಉಳಿದ ಪಾತ್ರಗಳಾವುದೂ ಮನಸ್ಸಿನಲ್ಲಿ ಅಷ್ಟಾಗಿ ಉಳಿಯುವು ದಿಲ್ಲ. ಕೆಲವು ಪಾತ್ರಗಳು ಚಿತ್ರಕಥೆಯಲ್ಲಿ ಅನಗತ್ಯವಾಗಿ ಪ್ರವೇಶಿಸುವುದರಿಂದ, ಚಿತ್ರದ ಓಟಕ್ಕೆ ಅಲ್ಲಲ್ಲಿ ತಡೆ ಬೀಳುತ್ತದೆ.

Advertisement

ಇನ್ನು ಚಿತ್ರದ ಛಾಯಾಗ್ರಹಣ ಕೆಲಸ ಅಚ್ಚುಕಟ್ಟಾಗಿದೆ. ಒಂದೆರಡು ಹಾಡುಗಳು ಗುನುಗುವಂತಿದೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ ಚೆನ್ನಾಗಿರುತ್ತಿತ್ತು. ಹಿನ್ನೆಲೆ ಸಂಗೀತಕ್ಕೆ ನಿರ್ದೇಶಕರು ಹೆಚ್ಚಿನ ಗಮನ ಕೊಡಬಹುದಿತ್ತು. ಅಲ್ಲಲ್ಲಿ ಹಿಡಿತ ಕಳೆದುಕೊಂಡಿರುವ ನಿರೂಪಣೆ, ಕೆಲ ತಾಂತ್ರಿಕ ಲೋಪಗಳನ್ನು ಹೊರತು ಪಡಿಸಿದರೆ, “ರಿವೈಂಡ್‌’ ಒಂದೊಳ್ಳೆ ಪ್ರಯೋಗ ಎನ್ನಲು ಅಡ್ಡಿಯಿಲ್ಲ. ಸೈನ್ಸ್‌ ಫಿಕ್ಷನ್‌, ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾಗಳ ಕಡೆಗೆ ಒಲವಿರುವವರು ಒಮ್ಮೆ “ರಿವೈಂಡ್‌’ ನೋಡಲು ಅಡ್ಡಿಯಿಲ್ಲ.

ಜಿ.ಎಸ್‌.ಕೆ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next