ರೇವಾರಿ : 19ರ ಹರೆಯದ ತರುಣಿಯ ಅಪಹರಣ ಮತ್ತು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣ ಪೊಲೀಸರು ಇಂದು ಶನಿವಾರ ಮೂವರು ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದು ಇವರನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ.
ಮೂವರು ಆರೋಪಿಗಳನ್ನು ಮನೀಷ್, ನಿಷು ಮತ್ತು ಪಂಕಜ್ (ಸೇನಾ ಸಿಬಂದಿ) ಎಂದು ಗುರುತಿಸಲಾಗಿರುವುದನ್ನು ಹರಿಯಾಣ ಪೊಲೀಸರು ದೃಢಪಡಿಸಿದ್ದಾರೆ.
ಈ ಶಾಕಿಂಗ್ ಪ್ರಕರಣದ ತನಿಖೆಯ ತಾಜಾ ವಿವರಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡ ಹರಿಯಾಣ ಡಿಜಿಪಿ “ಘಟನೆ ಬಗ್ಗೆ ಕೇಸು ದಾಖಲಿಸಲಾಗಿದೆ; ಮೂವರು ಆರೋಪಿಗಳ ಭಾವಚಿತ್ರವನ್ನು ನಾವು ಬಿಡುಗಡೆ ಮಾಡಿದ್ದೇವೆ; ಅವರಲ್ಲಿ ಒಬ್ಟಾತ (ಪಂಕಜ್) ಸೇನಾ ಸಿಬಂದಿಯಾಗಿದ್ದಾನೆ’ ಎಂದು ತಿಳಿಸಿದರು.
ಈ ಮೂವರೂ ಆರೋಪಿಗಳ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದ್ದು ಅವರನ್ನು ಬೇಗನೆ ಸೆರೆ ಹಿಡಿಯಲಾಗುವುದು ಎಂದು ಡಿಜಿಪಿ ಹೇಳಿದರು.
ಇದೇ ವೇಳೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿಗಳನ್ನು ಸೆರೆ ಹಿಡಿಯಲು ವಿವಿಧ ತಾಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿದು ಬಂದಿದೆ.
ಶಾಲೆಯ ಟಾಪರ್ ಆಗಿದ್ದು ಕಳೆದ ವರ್ಷ ಸರಕಾರದಿಂದ ಸಮ್ಮಾನಿಸಲ್ಪಟ್ಟ ತನ್ನ ಮಗಳನ್ನು ಕನಿಷ್ಠ 10 ದುರುಳ ಕಾಮಾಂಧರು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮತೆಗೆದುಕೊಳ್ಳುವಲ್ಲಿನ ಪೊಲೀಸರ ವೈಫಲ್ಯವನ್ನು ಬಲವಾಗಿ ಖಂಡಿಸಿದ ರೇಪ್ ಸಂತ್ರಸ್ತೆಯ ತಾಯಿ, ಪೊಲೀಸರ ನಿಷ್ಕ್ರಿಯತೆಯಿಂದಾಗಿ ಆರೋಪಿಗಳು ಮುಕ್ತವಾಗಿ ಓಡಾಡಿಕೊಂಡಿದ್ದುದು ತನ್ನ ಮಗಳಿಗೆ ಮತ್ತಷ್ಟು ಆಘಾತ ಉಂಟುಮಾಡಿತ್ತು ಎಂದು ಹೇಳಿದ್ದಾರೆ.