Advertisement

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

12:46 AM Jul 18, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಯಲ್ಲಿ ಆಗಿರುವ ಹಿನ್ನಡೆಯು ಉತ್ತರ ಪ್ರದೇಶ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು, 48 ಗಂಟೆಗಳಲ್ಲೇ ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು 2 ಬಾರಿ ಭೇಟಿಯಾಗಿ ಮಾತುಕತೆ ನಡೆಸಿ ರುವುದು ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬುಧವಾರ ಸಂಜೆ ರಾಜಭವನಕ್ಕೆ ದೌಡಾಯಿಸಿರುವುದು “ನಾಯಕತ್ವ ಬದಲಾವಣೆ’ಯ ಸುದ್ದಿಗೆ ಪುಷ್ಟಿ ನೀಡಿವೆ. ಆದರೆ ನಾಯಕತ್ವ ಬದಲಾವಣೆಯನ್ನು ವರಿಷ್ಠರು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ.

Advertisement

ಉತ್ತರ ಪ್ರದೇಶ ಬಿಜೆಪಿಯ ಇಬ್ಬರು ಅಗ್ರ ನಾಯಕರಾದ ಸಿಎಂ ಯೋಗಿ ಆದಿತ್ಯ ನಾಥ್‌ ಮತ್ತು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ನಡುವೆ ಬಹಿರಂಗವಾಗಿಯೇ ಬಿರುಕು ಕಾಣಿಸಿಕೊಂಡಿದೆ. ಮೌರ್ಯ ಅವರು ಬುಧವಾರ ದಿಲ್ಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿದ್ದರು. ಈ ಸಭೆಯ ಅನಂತರ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಚೌಧರಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದರು.

ಬಳಿಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪ್ರಧಾನಿಯ ಭೇಟಿ ಬಳಿಕ ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಭೂಪೇಂದ್ರ ಚೌಧರಿ ಚುನಾ ವಣೆ ಹಿನ್ನಡೆಯ ಹೊಣೆಯನ್ನು ಹೊತ್ತು ಕೊಂಡು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅತೃಪ್ತಿಯಿಂದ ಕುದಿಯು ತ್ತಿರುವ ಉ.ಪ್ರ. ಬಿಜೆಪಿಯ ಸಂಘಟನೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ವರಿಷ್ಠರು ಮುಂದಾಗಿದ್ದಾರೆಂದೂ ಹೇಳಲಾಗಿದೆ.

ರಾಜಭವನಕ್ಕೆ ಯೋಗಿ ಭೇಟಿ
ಬಿಜೆಪಿ ಘಟಕದ ಪುನರ್‌ ಸಂಘಟನೆಯ ವದಂತಿಯ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್‌ ಬುಧವಾರ ಸಂಜೆ ರಾಜಭವನಕ್ಕೆ ಭೇಟಿ ನೀಡಿರುವುದು ಉಹಾಪೋಹಗಳಿಗೆ ಕಾರಣವಾಗಿದೆ. ಮಳೆಗಾಲದ ಅಧಿವೇಶನಕ್ಕಾಗಿ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಯ ಮೂಲಗಳ ಪ್ರಕಾರ, ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಭೇಟಿ ನಡೆದಿದೆ ಎನ್ನಲಾಗಿದೆ.

Advertisement

ಸಿಎಂ ಯೋಗಿ ವಿರುದ್ಧ ಅತೃಪ್ತಿ
ಚುನಾವಣೆ ಹಿನ್ನಡೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯಶೈಲಿಯೇ ಕಾರಣ ಎಂದು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಬೆಂಬಲಿಗ ನಾಯಕರ ವಾದವಾಗಿದೆ. ಅಲ್ಲದೇ ಕಳೆದ ಒಂದು ತಿಂಗಳಲ್ಲಿ ಸಿಎಂ ಕರೆದ ಬಹುತೇಕ ಸಭೆಗಳಿಗೆ ಮೌರ್ಯ ಅವರು ಗೈರು ಹಾಜರಾಗಿದ್ದಾರೆ.

ಬಿಜೆಪಿಯಲ್ಲಿ ಅಧಿಕಾರಕ್ಕಾಗಿ
ಕಚ್ಚಾಟ: ಸಮಾಜವಾದಿ ಪಕ್ಷ
ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಪ್ರತಿಕ್ರಿಯಿಸಿ, ಅಧಿಕಾರಕ್ಕಾಗಿ ಬೇರೆ ಪಕ್ಷ ಗಳೊಂದಿಗೆ ವಿಧ್ವಂಸಕ ರಾಜಕೀಯ ಮಾಡುತ್ತಿದ್ದ ಬಿಜೆಪಿಗೆ ತಿರುಗುಬಾಣವಾಗಿದ್ದು, ಪಕ್ಷದೊಳಗೇ ಕಚ್ಚಾಟ ನಡೆದಿದೆ. ಅದೇ ಕಾರಣ ಪಕ್ಷದೊಳಗೆ ಕಿತ್ತಾಟ ಹೆಚ್ಚಾಗಿದೆ. ಜನರ ಬಗ್ಗೆ ಯೋಚಿಸುವವರು ಬಿಜೆಪಿಯಲ್ಲಿ ಒಬ್ಬರೂ ಇಲ್ಲ ಎಂದು ಟೀಕಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next