Advertisement

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಾಂತಿ: ಐದರ ಬದಲು 4 ದಿನಗಳ ಪಂದ್ಯ!

09:59 AM Jan 01, 2020 | Sriram |

ದುಬಾೖ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದಕ್ಕೆ ಕಾಲ ಕೂಡಿಬರುತ್ತಿದೆ. 5 ದಿನಗಳ ಟೆಸ್ಟ್‌ ಪಂದ್ಯವನ್ನು 4 ದಿನಕ್ಕೆ ಸೀಮಿತಗೊಳಿಸಲು ಐಸಿಸಿ ನಿರ್ಧರಿಸಿದೆ. ಇಲ್ಲಿ ಉಳಿದ ದಿನಗಳನ್ನು ಟಿ20 ಸೇರಿದಂತೆ ಇತರ ಜಾಗತಿಕ ಕ್ರಿಕೆಟ್‌ ಕೂಟಗಳಿಗೆ ಬಳಸಿಕೊಳ್ಳಲು ಯೋಚಿಸಲಾಗಿದೆ. ಟೆಸ್ಟ್‌ ಕ್ರಿಕೆಟಿನ ರೋಚಕತೆ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದ ಐಸಿಸಿಯ ಈ ಹೊಸ ಯೋಜನೆ ಸಾಕಷ್ಟು ಕುತೂಹಲ ಕೆರಳಿಸಿದೆ.

Advertisement

ಏನಿದು ಹೊಸ ಪ್ರಯತ್ನ?
ಸದ್ಯ ಇರುವ ಐಸಿಸಿ ನಿಯಮ ಪ್ರಕಾರ ಟೆಸ್ಟ್‌ ಕ್ರಿಕೆಟ್‌ ಒಟ್ಟು 5 ದಿನ ನಡೆಯುತ್ತದೆ. ಕ್ರಿಕೆಟ್‌ ವಲಯದಲ್ಲಿ ಇದನ್ನು 4 ದಿನಕ್ಕೆ ಸೀಮಿತಗೊಳಿಸಿ ಎನ್ನುವ ಕೂಗು ಹಿಂದಿನಿಂದಲೇ ಕೇಳಿ ಬಂದಿತ್ತು. ಈ ವಿಷಯ ಐಸಿಸಿ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

2023ರಿಂದ 2031ರ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಐದರ ಬದಲು 4 ದಿನಗಳಿಗೆ ಟೆಸ್ಟ್‌ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಇದರಿಂದ ಒಂದು ದಿನದ ಲಾಭವಾಗಲಿದೆ. ಆ ಉಳಿದ ದಿನಗಳನ್ನು ಜಾಗತಿಕ ಮಟ್ಟದ ಬೇರೆ ಕ್ರಿಕೆಟ್‌ ಕೂಟಗಳನ್ನು ಆಯೋಜಿಸಲು ಬಳಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ರಾಷ್ಟ್ರಗಳು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಆಡಲಿವೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

335 ದಿನಗಳು ಉಳಿಯುತ್ತಿದ್ದವು!
ಐಸಿಸಿ 8 ವರ್ಷಗಳಿಗೆ ಅನ್ವಯವಾಗುವಂತೆ ಕ್ರಿಕೆಟ್‌ ವೇಳಾಪಟ್ಟಿ ರಚಿಸುತ್ತದೆ. ಈ ಪ್ರಕಾರವಾಗಿ ಈಗಾಗಲೇ 4 ದಿನಗಳಿಗೆ ಟೆಸ್ಟ್‌ ಕೂಟವನ್ನು ನಡೆಸುವುದು ಜಾರಿಯಾಗಿದ್ದರೆ 2015-2023ರ ಅವಧಿಯಲ್ಲಿ ಐಸಿಸಿಗೆ 335 ದಿನಗಳು ಲಭಿಸುತ್ತಿದ್ದವು!

2017ರಲ್ಲೇ ನಡೆದಿತ್ತು “ಟೆಸ್ಟ್‌’
4 ದಿನಗಳ ಟೆಸ್ಟ್‌ ಪಂದ್ಯದ ಪ್ರಾಯೋಗಿಕ ಪರೀಕ್ಷೆಯನ್ನು ಐಸಿಸಿ 2017ರಲ್ಲೇ ನಡೆಸಿದೆ. ಮೊದಲ 4 ದಿನಗಳ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ತಂಡಗಳು ಸೆಣಸಿದ್ದವು. 2019 ವರ್ಷಾರಂಭದಲ್ಲಿ ಇಂಗ್ಲೆಂಡ್‌-ಅಯರ್‌ಲ್ಯಾಂಡ್‌ ನಡುವೆ 4 ದಿನಗಳ 2ನೇ ಪ್ರಾಯೋಗಿಕ ಟೆಸ್ಟ್‌ ಪಂದ್ಯ ನಡೆದಿತ್ತು.

Advertisement

ಟೆಸ್ಟ್‌ ಕ್ರಿಕೆಟ್‌ ಆಕರ್ಷಣೆಗೆ…
ಗುಲಾಲಿ ಬಣ್ಣದ ಚೆಂಡಿನಲ್ಲಿ ಹಗಲು-ರಾತ್ರಿ ಟೆಸ್ಟ್‌ ಆಯೋಜನೆ, ಡಿಆರ್‌ಎಸ್‌ ಬಳಕೆ, ಜೆರ್ಸಿ ಮೇಲೆ ಅಂಕಿ ಮತ್ತು ಆಟಗಾರನ ಹೆಸರು ಸೇರಿದಂತೆ ಹಲವು ಹೊಸ ಬದಲಾವಣೆಗಳನ್ನು ಐಸಿಸಿ ತಂದಿದೆ. ಟೆಸ್ಟ್‌ ಕ್ರಿಕೆಟನ್ನು ಹೆಚ್ಚು ಆಕರ್ಷಕಗೊಳಿಸುವ ಜತೆಗೆ ಜೀವಂತವಾಗಿಡುವ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ 4 ದಿನಗಳ ಪಂದ್ಯದ ಸರದಿ.

ಹೆಚ್ಚು ಟಿ20: ಭಾರತ ಒತ್ತಾಯ
ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹೆಚ್ಚಿನ ಸಂಖ್ಯೆಯ ಟಿ20 ಕ್ರಿಕೆಟ್‌ ಕೂಟಗಳನ್ನು ವಿಶ್ವಾದ್ಯಂತ ಆಯೋಜಿಸುವಂತೆ ಐಸಿಸಿಯನ್ನು ಒತ್ತಾಯಿಸಿದೆ. ಮಾತ್ರವಲ್ಲ 5 ದಿನಗಳ ಟೆಸ್ಟ್‌ ಕ್ರಿಕೆಟಿಗೆ ಹೆಚ್ಚಿನ ಖರ್ಚು ವೆಚ್ಚವಾಗುತ್ತದೆ. ಹೀಗಾಗಿ ದಿನವನ್ನು ಕಡಿಮೆಗೊಳಿಸಬೇಕು. ಉಳಿಯುವ ಹಣವನ್ನು ಬೇರೆ ಕ್ರಿಕೆಟ್‌ ಕೂಟಗಳಿಗೆ ಬಳಸಬೇಕೆಂದು ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ. ಇದಕ್ಕೀಗ ಕಾಲ ಕೂಡಿಬಂದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next