ತೆಕ್ಕಟ್ಟೆ: ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ ಫಲವಾಗಿ ಇಂದು ಕೃಷಿಯಲ್ಲಿ ಕ್ರಾಂತಿಯಾಗಿದೆ. ಕೃಷಿ ಚಟುವಟಿಕೆಯಲ್ಲಿ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿದಾಗ ಉತ್ತಮ ಇಳುವರಿ ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯವಿದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಂಕರ ಶೇರೆಗಾರ್ ಹೇಳಿದರು.
ಅವರು ಅ. 24ರಂದು ಉಳೂ¤ರು ಕಟ್ಟೆತನ ದೇಗುಲದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ, ಕೃಷಿ ಇಲಾಖೆ ಕುಂದಾಪುರ ಹಾಗೂ ಗ್ರಾಮ ಪಂಚಾಯತ್ ಕೆದೂರು ಇವರ ಸಹಯೋಗದೊಂದಿಗೆ ನಡೆದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ (ಅಕ್ಕಿ) ಯೋಜನೆಯಡಿ ಭತ್ತದ ನೇರ ಕೂರಿಗೆ ಬಿತ್ತನೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕೃಷಿ ಪದ್ಧªತಿಯಲ್ಲಿ ವಿಜ್ಞಾನಿಗಳಿಗಿಂತಲೂ ಗ್ರಾಮೀಣ ರೈತರ ಅನುಭವವೇ ಬಹಳ ಮುಖ್ಯವಾದುದು. ಹಿಂದಿನ ಕಾಲದಲ್ಲಿನ ದೀಪಾವಳಿಯ ತಿಂಗಳಲ್ಲಿ ಗದ್ದೆಗೆ ದೀಪ ಇಡುವುದು, ಹೊಟ್ ಸುಡುವ ಪದ್ಧತಿ ಹಾಗೂ ಗದ್ದೆಯಲ್ಲಿ ಮಣ್ಣು ಸುಡುವುದು (ಸುಡ್ಮಣ್ಣು) ಮಹತ್ವದ ವಿಷಯ. ಇಂತಹ ಪ್ರಕ್ರಿಯೆಗಳು ರಾತ್ರಿ ವೇಳೆಯಲ್ಲಿ ಕೀಟಗಳನ್ನು ಆಕರ್ಷಿಸಿ ಪರೋಕ್ಷವಾಗಿ ಕೀಟಗಳನ್ನು ನಿರ್ಮೂಲನೆ ಮಾಡುತ್ತಿದ್ದವು. ಆದರೆ ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಇದನ್ನು ಮರೆಯುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಹಿರಿಯ ಪ್ರಗತಿಪರ ಕೃಷಿಕ ರವೀಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾ| ಕೃಷಿ ಅಧಿಕಾರಿ ಸುನಿಲ್ ನಾಯ್ಕ ಮಾತನಾಡಿ, ಹಳೆಯ ಕೃಷಿ ಪದ್ಧತಿಗೆ ತಳಿ ಸಂಶೋಧನೆಯ ಫಲವಾಗಿ ಇಂದು ಆಹಾರ ಸ್ವಾವಲಂಬನೆಯಲ್ಲಿ ಯಶಸ್ವಿಯಾಗಲು ಕಾರಣವಾಗಿದೆ. ಕೊರೊನಾ ಆತಂಕದ ನಡುವೆಯೂ ಕೂಡ ಹಡಿಲು ಭೂಮಿ ಪುನಶ್ಚೇತನಗೊಂಡಿದೆ ಎಂದರು.
ಕೆದೂರು ಗ್ರಾ.ಪಂ. ನಿಕಟಪೂರ್ವ ಸದಸ್ಯ ಪ್ರಶಾಂತ್ ಶೆಟ್ಟಿ ಉಳೂ¤ರು, ಯುವ ಸಾವಯವ ಕೃಷಿಕ ಸಂದೇಶ್ ಶೆಟ್ಟಿ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ರಮಿತಾ ಶೆಟ್ಟಿ, ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ಅಂತಿಮ ವರ್ಷದ ವಿದ್ಯಾರ್ಥಿನಿ ಸಮೃದ್ಧಿ, ದಿನೇಶ್ ಆಲೂರು, ಗೀತಾ ಶೆಟ್ಟಿ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ರಮಿತಾ ಶೆಟ್ಟಿ ಸ್ವಾಗತಿಸಿ, ಪ್ರತಾಪ್ ಶೆಟ್ಟಿ ಉಳೂ¤ರು ನಿರೂಪಿಸಿ, ವಂದಿಸಿದರು.
ರೈತ ಸಂವಾದ
ರೈತ ಸಂವಾದದಲ್ಲಿ ಸ್ಥಳೀಯ ಸಾವಯವ ರೈತ ಮಹಿಳೆ ಕನಕಾ ಕೊಠಾರಿ ಮಾತನಾಡಿ, ಕೃಷಿ ಇಲಾಖೆಯಿಂದ ಉತ್ತಮ ಬೀಜವನ್ನು ನೀಡಿ. ಅಲ್ಲದೆ ನೇರ ಕೂರಿಗೆ ಬಿತ್ತನೆಯ ಪದ್ಧತಿಯಿಂದ ಕಳೆ ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಈ ಬಾರಿ ಬೀಜ ಬಿತ್ತನೆಗಿಂತ ಹೆಚ್ಚು ಹುಲ್ಲು ಹುಟ್ಟಿದೆ. ಮುಂದಿನ ದಿನಗಳಲ್ಲಿ ಕಳೆ ತೆಗೆಯುವ ಮೆಶಿನ್ ಹಾಗೂ ಕಳೆ ಕಡಿಮೆಯಾಗುವ ವಿಶೇಷ ತಳಿ ಒದಗಿಸಿ ಎಂದು ಹೇಳಿದರು.