Advertisement

ಫ್ಲೈ ಓವರ್‌ ಕಾಮಗಾರಿಗೆ ಮರುಜೀವ

11:50 AM Aug 08, 2018 | Team Udayavani |

ಮಹಾನಗರ : ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಪಂಪ್‌ ವೆಲ್‌ ಫ್ಲೈಓವರ್‌ನ ಕಾಮಗಾರಿ ಮತ್ತೆ ಆರಂಭವಾಗುವ ಸುಳಿವು ದೊರೆತಿದೆ. ಏಕೆಂದರೆ, ಫ್ಲೈ ಓವರ್‌ಗಾಗಿ ‘ಗರ್ಡರ್‌ (ಕಾಂಕ್ರೀಟ್‌ನ ಉದ್ದದ ಸ್ತಂಭಗಳು)’ ಅಳವಡಿಕೆಯನ್ನು ಕೆಲವೇ ದಿನದಲ್ಲಿ ಕೈಗೆತ್ತಿಕೊಳ್ಳಲು ಗುತ್ತಿಗೆದಾರ ಸಂಸ್ಥೆ ನಿರ್ಧರಿಸಿದ್ದು, ಈ ಸಂಬಂಧ ಪಂಪ್‌ವೆಲ್‌ನಲ್ಲಿ ಸಂಚಾರದಲ್ಲಿ ಕೊಂಚ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ನ ಕೆಳಭಾಗದಿಂದಲೇ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಒಂದೆರಡು ದಿನದಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ, ಮುಂದೆ ಕಂಕನಾಡಿಯಿಂದ ಪಡೀಲ್‌, ತೊಕ್ಕೊಟ್ಟು ಭಾಗಕ್ಕೆ ತೆರಳುವ ವಾಹನಗಳು ಫ್ಲೈಓವರ್‌ ಕೆಳಗಡೆಯಿಂದಲೇ ಸಂಚರಿಸಬಹುದು.

ಈ ಸಂಬಂಧ ನವಯುಗ ಸಂಸ್ಥೆಯವರು ಫ್ಲೈಓವರ್‌ ಕೆಳಗಡೆ ಇದ್ದ ನಿರುಪಯುಕ್ತ ಸಾಮಗ್ರಿಗಳನ್ನು ತೆರವು ಮಾಡಿ ಅಲ್ಲಿ ಡಾಮರು ಹಾಕಿದ್ದಾರೆ. ಫ್ಲೈಓವರ್‌ನಿಂದ ಪಡೀಲ್‌ಗೆ ಹೋಗುವ ಹಾದಿಯಲ್ಲಿಯೂ ಡಾಮರು ಹಾಕಲಾಗಿದೆ. ಆದರೆ, ಪಡೀಲ್‌ನಿಂದ ಕಂಕನಾಡಿಗೆ ತೆರಳುವ ವಾಹನಗಳು ಹಳೆಯ ಮಾರ್ಗದಲ್ಲಿಯೇ (ಫ್ಲೈಓವರ್‌ಗೆ ಸುತ್ತುಹಾಕಿ) ತೆರಳ ಬೇಕಾಗಿದೆ. ತೊಕ್ಕೊಟ್ಟು ಫ್ಲೈಓವರ್‌ ಕೆಳಭಾಗದಲ್ಲಿಯೂ ಇದೇ ರೀತಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಫ್ಲೈಓವರ್‌ನ ಕೆಳಭಾಗದಿಂದ ವಾಹನ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಈಗ ಕಂಕನಾಡಿ ಭಾಗದಿಂದ ಪಡೀಲ್‌ ಕಡೆಗೆ ಹೋಗುವ ರಸ್ತೆಯ ಮೇಲೆ ಫ್ಲೈಓವರ್‌ ಕಾಮಗಾರಿಯನ್ನು ಮತ್ತೆ ಶುರು ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ಣಾಟಕ ಬ್ಯಾಂಕ್‌ ಕೇಂದ್ರ ಕಚೇರಿ ಭಾಗದ ಫ್ಲೈಓವರ್‌ ಕಾಮಗಾರಿ ಆರಂಭಿಸಲು ಕ್ಷಣಗಣನೆ ಶುರುವಾದಂತಾಗಿದೆ. ಈ ಭಾಗದಲ್ಲಿ ಬೃಹತ್‌ ಚರಂಡಿ, ನಂತೂರು ಭಾಗಕ್ಕೆ ತೆರಳುವ ರಸ್ತೆ ಇರುವ ಕಾರಣದಿಂದ ಕಾಮಗಾರಿಯ ಮುಂದಿನ ಹಂತದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮತ್ತೆ ಬದಲಾವಣೆ ಎದುರಾಗಬಹುದು. ಜತೆಗೆ ಇಲ್ಲಿರುವ ಸಣ್ಣ ಸೇತುವೆ ಕೂಡ ಕಾಮಗಾರಿಗೆ ತೊಡಕಾಗಬಹುದು. ಮುಂದಿನ ಕಾಮಗಾರಿಯನ್ನು ಗಮನದಲ್ಲಿಟ್ಟು ಇದನ್ನು ಪರಿಶೀಲಿಸಲಾಗುವುದು ಎಂದು ರಾ.ಹೆ. ಇಲಾಖೆಯ ಮೂಲಗಳು ತಿಳಿಸಿವೆ. 

ಇಲ್ಲಿ ಫ್ಲೈ ಓವರ್‌ನ ಹೊರಭಾಗದಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಕಂಕನಾಡಿ ಭಾಗದಿಂದ ಪಂಪ್‌ ವೆಲ್‌ಗೆ ಬರುವ ವಾಹನಗಳು ಫ್ಲೈಓವರ್‌ ನ ಒಂದು ಭಾಗ ಹಾಗೂ ಪಡೀಲ್‌ನಿಂದ ಕಂಕನಾಡಿಗೆ ತೆರಳುವ ವಾಹನಗಳು ಫ್ಲೈಓವರ್‌ಗೆ ಯೂಟರ್ನ್ ಹೊಡೆದು ಸಂಚರಿಸಬೇಕಾಗಿದೆ.

Advertisement

ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾದ ಫ್ಲೈಓವರ್‌
ನಾನಾ ಕಾರಣಗಳನ್ನು ಮುಂದಿಟ್ಟು ಕೊಂಡು ನನೆಗುದಿಗೆ ಬಿದ್ದಿದ್ದ ಫ್ಲೈಓವರ್‌ ಕಾಮಗಾರಿ ಹಲವು ರೀತಿಯ ರಾಜಕೀಯ ಅಟಾಟೋಪಗಳಿಗೆ ಸದ್ಯ ಕಾರಣವಾಗಿದೆ. ಇದು ನಗರದ ಬಹುಮುಖ್ಯ ಪ್ರದೇಶ ವಾದ್ದ ರಿಂದ ಕಾಮಗಾರಿ ತಡವಾದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತವಾಗುವಂತಾಗಿದೆ. ಈ ಸಂಬಂಧ ಪ್ರತಿಭಟನೆ ಕೂಡ ನಡೆದಿದ್ದರೂ ಕಾಮಗಾರಿ ವೇಗ ಪಡೆದಿರಲಿಲ್ಲ.

ಮುಂದಿನ ಜನವರಿಯೊಳಗೆ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಲು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಗುತ್ತಿಗೆದಾರ ಸಂಸ್ಥೆಗೆ ಸೂಚಿಸಿದ್ದಾರೆ. ಜತೆಗೆ ಕೇಂದ್ರ ಹೆದ್ಧಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಕೂಡ ಮಾಡಿದ್ದಾರೆ. ಇದರ ಜತೆಗೆ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಕಾಮಗಾರಿ ನಿಧಾನವಾದ ಹಿನ್ನೆಲೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪಂಪ್‌ವೆಲ್‌ ಫ್ಲೈಓವರ್‌ ಎಲ್ಲೆಡೆ ಚರ್ಚೆಗೂ ಕಾರಣವಾಗಿದೆ. 

600 ಮೀ.ಫ್ಲೈಓವರ್‌ಗೆ ಆರೇಳು ವರ್ಷ?
ಪಂಪ್‌ವೆಲ್‌ ಫ್ಲೈಓವರ್‌ ಸುಮಾರು 600 ಮೀ. ಉದ್ದ ಹಾಗೂ 20 ಮೀ. ಅಗಲವಿರಲಿದೆ. ನಂತೂರು ಭಾಗದಿಂದ ಬರುವಾಗ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿ ಮುಂಭಾಗದಿಂದ, ಇಂಡಿಯಾನ ಆಸ್ಪತ್ರೆಯ ಮುಂಭಾಗದವರೆಗೆ ಫ್ಲೈಓವರ್‌ ನಿರ್ಮಾಣವಾಗಲಿದೆ. ಈ ಪೈಕಿ ಎರಡು ಭಾಗದ ಸ್ಲ್ಯಾಬ್ ಗಳು ಮಾತ್ರ ಸದ್ಯ ನಿರ್ಮಾಣವಾಗಿದೆ. ದೇಶದಲ್ಲಿ ಬೃಹತ್‌ ಗಾತ್ರದ ಫ್ಲೈಓವರ್‌ ಕಾಮಗಾರಿಗಳು ಒಂದೆರಡು ವರ್ಷದಲ್ಲಿ ಪೂರ್ಣಗೊಂಡ ಬಗ್ಗೆ ಮಾಹಿತಿ ಇದೆ. ಆದರೆ, ಕೇವಲ 600 ಮೀಟರ್‌ ಉದ್ದದ ಈ ಫ್ಲೈಓವರ್‌ ಆರೇಳು ವರ್ಷಗಳೇ ಕಳೆದರೂ ಪೂರ್ಣಗೊಳ್ಳದಿರುವುದು ನಿಜಕ್ಕೂ ವ್ಯವಸ್ಥೆಯ ಲೋಪವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಈಗ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ಫ್ಲೈಓವರ್‌ಗಾಗಿ ರಸ್ತೆಯ ಮಧ್ಯಭಾಗದಲ್ಲಿ ಅವಕಾಶಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಕರ್ಣಾಟಕ ಬ್ಯಾಂಕ್‌ ಭಾಗದಲ್ಲಿ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. 

ಸಂಚಾರ ಬದಲಾವಣೆ
ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ ಹಿನ್ನೆಲೆಯಲ್ಲಿ ಫ್ಲೈಓವರ್‌ ಕೆಳಗಡೆ ಏಕಮುಖವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆಗೆ ದೊಡ್ಡ ಲಾಭವಾಗದು. ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸಂಚಾರಿ ನಿಯಮದಲ್ಲಿ ಕೆಲವು ಬದಲಾವಣೆ ಇಲ್ಲಿ ಮುಂದೆ ನಡೆಯಬಹುದು.
 -ಮಂಜುನಾಥ್‌ ಶೆಟ್ಟಿ,
ಎಸಿಪಿ, ಸಂಚಾರಿ ವಿಭಾಗ ಮಂಗಳೂರು 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next