ಭಾರತೀನಗರ: ಮೂಲಭೂತ ಸೌಕರ್ಯ ಕೊರತೆ ಹಾಗೂ ಶಿಕ್ಷಕರು-ಮಕ್ಕಳಿಲ್ಲದ ಪರಿಣಾಮ ಕಳೆದ ಒಂದು ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆಯೊಂದನ್ನು ಜಾಗೃತ ಯುವಕರ ತಂಡ ಪುನರುಜ್ಜೀವನಗೊಳಿಸಿದೆ.
ಇಲ್ಲಿಗೆ ಸಮೀಪದ ಎಸ್.ಐ.ಹೊನ್ನಲ ಗೆರೆಯಲ್ಲಿ 1 ರಿಂದ 6ನೇ ತರಗತಿಯುಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಣ್ಣ ಬಣ್ಣ ಕಂಡು ತನ್ನ ಹಿಂದಿನ ವೈಭವಕ್ಕೆ ಮರಳಿ ನಿಂತಿದೆ. ವಿವಿಧ ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದ ಮಕ್ಕಳನ್ನು ಯುವಕರ ತಂಡ ಆಂದೋಲನ ನಡೆಸಿ, ಪೋಷಕರ ಮನವೊಲಿಸಿ 43 ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆ ತಂದಿದ್ದಾರೆ.
ಆಂದೋಲನ ನಡೆಸಿದ್ದರು: ಈ ಶಾಲೆಗೆ ಎಸ್ .ಐ.ಹೊನ್ನಲಗೆರೆ, ಹೊಸೂರು ಮತ್ತು ಬಾನಗಳ್ಳಿಯಿಂದ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಿಕ್ಷಕರಿಲ್ಲದೆ, ಮೂಲ ಸೌಕರ್ಯವೂ ಇಲ್ಲದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದರು. ಹೀಗಾಗಿ 2018-19ನೇ ಸಾಲಿನಲ್ಲಿ ಮಕ್ಕಳೇ ಇಲ್ಲದೆ ಶಾಲೆ ಬಾಗಿಲು ಮುಚ್ಚಿತ್ತು. ಈ ಪರಿಸ್ಥಿತಿಯಿಂದ ಮನನೊಂದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮರಿಗೌಡ, ಮುಖ್ಯ ಶಿಕ್ಷಕ ಶಿವಕುಮಾರ್, ಗ್ರಾಮಸ್ಥರಾದ ನಾಗರಾಜು, ಶ್ರೀನಿವಾಸ್, ನವೀನ್, ಮಾದೇಗೌಡ, ಬಾನಗಳ್ಳಿ ರಮೇಶ್, ರಾಮು ಶಾಲೆ ಸ್ಥಿತಿಗತಿ ಕುರಿತಂತೆ ಜಾಲತಾಣಗಳಲ್ಲಿ ಹಾಕಿ ನೆರವಿಗಾಗಿ ಮನವಿ ಮಾಡಿದರು. ಅಲ್ಲದೆ ಮೂರು ಗ್ರಾಮಗಳಲ್ಲಿ ಆಂದೋಲನ ನಡೆಸಿ ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗೆ ಕರೆತರುವ ನಿರ್ಧಾರ ಕೈಗೊಂಡರು.
ಏನೇನು ಸೌಲಭ್ಯ: ಈ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲವೆಂಬಂತೆ ಇದೇ ಶಾಲೆಯಲ್ಲಿ ಓದಿ, ಬೆಂಗಳೂರಿನಲ್ಲಿದ್ದ ಬಾನಗಳ್ಳಿ ತಾರಾನಂದ ಅವರು ಬೆಂಗಳೂರಿನ “ಕನ್ನಡ ಮನಸ್ಸುಗಳು’ ತಂಡಕ್ಕೆ ವಿಷಯ ತಿಳಿಸಿದ್ದರು. ಕೂಡಲೇ ನೆರವಿಗೆ ಬಂದ ಅನುಷಾ, ಅಭಿ ಇತರರು ಈ ಶಾಲೆಯ ಸುಣ್ಣಬಣ್ಣದ ವೆಚ್ಚ ಭರಿಸಿದರು. ಬಳಿಕ ಶಾಲೆಗೆ ಶುಕ್ರದೆಸೆ ಆರಂಭವಾಯಿತು.
ದಾನಿ ಎಂಜಿನಿಯರ್ ಬಸವೇಗೌಡರು ಎಲ್ಲಾ 43 ಮಕ್ಕಳಿಗೂ ಎರಡು ಜೊತೆ ಸಮವಸ್ತ್ರ, ಶೂ, ನೋಟ್‌ಬುಕ್ ಮತ್ತಿತರ ಲೇಖನ ಸಾಮಗ್ರಿ ನೀಡಿದ್ದಾರೆ. ಮಾತ್ರವಲ್ಲ ಸರ್ಕಾರದಿಂದ ಇರುವ ಮೂವರು ಶಿಕ್ಷಕರೊಂದಿಗೆ ಇದೇ ಯುವಜನರ ತಂಡ ಮೂವರು ಶಿಕ್ಷಕರನ್ನು ನೇಮಕ ಮಾಡಿಕೊಂಡು ವೇತನ ಪಾವತಿಸುವ ಮೂಲಕ ಉತ್ತಮ ಶೈಕ್ಷಣಿಕ ವಾತಾವರಣ ಮೂಡಿಸಿದೆ. ಈ ಮೂಲಕ ಖಾಸಗಿ ಶಾಲೆಗಳತ್ತ ಪೋಷಕರು ತಿರುಗಿಯೂ ನೋಡದಂತೆ ಮಾಡಿರುವುದು ರಾಜ್ಯದಲ್ಲೇ ಮಾದರಿ ಪ್ರಯತ್ನವಾಗಿದೆ.
-ಅಣ್ಣೂರು ಸತೀಶ್