Advertisement
ರಾಜ್ಯದಲ್ಲಿ 1996-97ರಲ್ಲಿ ಮೊದಲ ಬಾರಿಗೆ ಕರ್ನಾಟಕ ಮಹಾಪೌರರ ವೇದಿಕೆ ಅಸ್ತಿತ್ವಕ್ಕೆ ಬಂದಿತ್ತು. ಇದಕ್ಕೆ ಹುಬ್ಬಳ್ಳಿ ಮಹತ್ವದ ವೇದಿಕೆಯಾಗಿತ್ತು. ಮಹಾಪೌರರ ವೇದಿಕೆಯಿಂದ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ನಂತರದಲ್ಲಿ ವೇದಿಕೆ ನಿಷ್ಕ್ರಿಯಗೊಂಡಿತ್ತಾದರೂ, ಇದೀಗ ಅದಕ್ಕೆ ಮತ್ತೆ ಚೇತನ ತುಂಬುವ ಯತ್ನ ಹುಬ್ಬಳ್ಳಿಯಿಂದಲೇ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತು ಪಡಿಸಿ ರಾಜ್ಯದಲ್ಲಿ ಪ್ರಸ್ತುತ 10 ಮಹಾನಗರ ಪಾಲಿಕೆಗಳಿದ್ದು, ಹತ್ತು ಜನ ಮಹಾಪೌರರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ವೇದಿಕೆಯಡಿ ಸಂಘಟಿತ ಧ್ವನಿ ಮೊಳಗಿಸಲು ಮುಂದಾಗಿದ್ದಾರೆ.
1996-97ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾಪೌರರಾಗಿದ್ದ ಡಾ| ಪಾಂಡುರಂಗ ಪಾಟೀಲ ಅವರು ಕರ್ನಾಟಕ ಮಹಾಪೌರರ ವೇದಿಕೆ ಹುಟ್ಟು ಹಾಕಿದ್ದರು. ಮಹಾಪೌರರ ವೇದಿಕೆಯಿಂದ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಭೇಟಿಗೆ ಸಮಯ ಕೇಳಿದಾಗ ಬೆಳಗಿನ ಜಾವ 5ಕ್ಕೆ ಆಗಮಿಸುವಂತೆ ತಿಳಿಸಿದ್ದರು. ಅದರಂತೆ ಎಲ್ಲ ಮಹಾಪೌರರು ಬೆಳಗಿನ ಜಾವ ದೇವೇಗೌಡರ ನಿವಾಸದಲ್ಲಿ ಭೇಟಿಯಾಗಿದ್ದರು. ಮುಖ್ಯವಾಗಿ ಸಂವಿಧಾನದ 74ನೇ ಕಲಂ ತಿದ್ದುಪಡಿ ಯಥಾವತ್ ಜಾರಿ, ಮಹಾಪೌರರ ನೇರ ನೇಮಕ, ಪಶ್ಚಿಮ ಬಂಗಾಲ ಮಾದರಿಯಲ್ಲಿ ಮೇಯರ್ ಕೌನ್ಸಿಲ್ ರಚನೆ ವ್ಯವಸ್ಥೆ ಸೇರಿ ಸುಮಾರು 9-10 ಅಂಶಗಳ ಬೇಡಿಕೆಯ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ದೇವೇಗೌಡರು, ಸರಕಾರದಿಂದ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದರು.
Related Articles
Advertisement
ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಮಹಾಪೌರರ ಸಮಾವೇಶದಲ್ಲಿ ಮೈಸೂರು, ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾಪೌರರು ಭಾಗಿಯಾಗಿದ್ದರು. ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಮಂಗಳೂರು ಹಾಗೂ ತುಮಕೂರು ಮಹಾಪೌರರು ಅನ್ಯ ಕಾರ್ಯಗಳ ಹಿನ್ನೆಲೆಯಲ್ಲಿ ಪಾಲ್ಗೊಂಡಿರಲಿಲ್ಲ.
ಸಿಎಂ ಭೇಟಿಗೆ ನಿರ್ಧಾರ:ಇದೀಗ ಎರಡನೇ ಬಾರಿಗೆ ವೇದಿಕೆಯಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ರಾಜ್ಯದ ಮುಂಗಡ ಪತ್ರ ಮಂಡನೆ ನಂತರ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲೇ ಮುಖ್ಯಮಂತ್ರಿ ಭೇಟಿಗೆ ವೇದಿಕೆ ನಿರ್ಧರಿಸಿದೆ. ಮುಖ್ಯವಾಗಿ 74ನೇ ಕಲಂ ತಿದ್ದುಪಡಿ ಅನುಷ್ಠಾನ, ಪಾಲಿಕೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ, ಮಹಾಪೌರರ ಅವಧಿ 5 ವರ್ಷ ಮಾಡದಿದ್ದರೂ ಕನಿಷ್ಠ 20 ತಿಂಗಳಿಗಾದರೂ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳ ಸಲ್ಲಿಕೆಗೆ ನಿರ್ಧರಿಸಲಾಗಿದೆ. ಎಲ್ಲ ಮಹಾಪೌರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಶನಿವಾರದ ಸಭೆಯ ವಿಷಯ ಹಾಗೂ ಸಿಎಂಗೆ ಸಲ್ಲಿಸುವ ಮನವಿ ಪತ್ರವನ್ನು ಎಲ್ಲ ಮಹಾಪೌರರಿಗೆ ಸಲ್ಲಿಸಿ ಏನಾದರೂ ಸೇರ್ಪಡೆ, ಬದಲಾವಣೆಗೆ ತಿಳಿಸಲಾಗುವುದು. ಎಲ್ಲರೂ ಸೇರಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
– ಸುಧೀರ ಸರಾಫ್, ಮಹಾಪೌರ, ಹು.ಧಾ.ಪಾಲಿಕೆ. ನನ್ನ ಅಧಿಕಾರಾವಧಿಯ ಮಧ್ಯಭಾಗದಲ್ಲಿ ಕರ್ನಾಟಕ ಮಹಾಪೌರರ ವೇದಿಕೆ ಅಸ್ತಿತ್ವಕ್ಕೆ ಬಂದಿತ್ತು. ಅಂದು ಎಲ್ಲ ಮಹಾಪೌರರು ಸ್ಪಂದಿಸಿದ್ದರು. ಮುಖ್ಯಮಂತ್ರಿಯವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನನ್ನ ಅಧಿಕಾರಾವಧಿ ಬಳಿಕ ವೇದಿಕೆ ಮುಂದುವರಿಕೆ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಮರುಜೀವ ಪಡೆಯುತ್ತಿರುವುದು ಸಂತಸ ತಂದಿದೆ.
-ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ, ಹು.ಧಾ.ಪಾಲಿಕೆ. – ಅಮರೇಗೌಡ ಗೋನವಾರ